ADVERTISEMENT

ರೈತರ ಹೊಲಕ್ಕೆ ರಸ್ತೆ; ಶಾಶ್ವತ ಪರಿಹಾರಕ್ಕೆ ಆದ್ಯತೆ

ಜಿಲ್ಲಾಧಿಕಾರಿ ನಡೆ ಬೊಮ್ಮನಹಳ್ಳಿ ಕಡೆ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2022, 19:31 IST
Last Updated 17 ಡಿಸೆಂಬರ್ 2022, 19:31 IST
ಆಲಮೇಲ ತಾಲ್ಲೂಕಿನ ಬೊಮ್ಮನಹಳ್ಳಿಯಲ್ಲಿ ಶನಿವಾರ ಆಯೋಜಿಸಲಾಗಿದ್ದ ‘ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ’ ಕಾರ್ಯಕ್ರಮಕ್ಕೆ ಆಗಮಿಸಿದ ಜಿಲ್ಲಾಧಿಕಾರಿಯನ್ನು ಗ್ರಾಮದ ಮಹಿಳೆಯರು ಪೂರ್ಣ ಕುಂಭ, ಕಳಸದೊಂದಿಗೆ ಸ್ವಾಗತಿಸಿದರು
ಆಲಮೇಲ ತಾಲ್ಲೂಕಿನ ಬೊಮ್ಮನಹಳ್ಳಿಯಲ್ಲಿ ಶನಿವಾರ ಆಯೋಜಿಸಲಾಗಿದ್ದ ‘ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ’ ಕಾರ್ಯಕ್ರಮಕ್ಕೆ ಆಗಮಿಸಿದ ಜಿಲ್ಲಾಧಿಕಾರಿಯನ್ನು ಗ್ರಾಮದ ಮಹಿಳೆಯರು ಪೂರ್ಣ ಕುಂಭ, ಕಳಸದೊಂದಿಗೆ ಸ್ವಾಗತಿಸಿದರು   

ವಿಜಯಪುರ: ಆಲಮೇಲ ತಾಲ್ಲೂಕು ನೀರಾವರಿ ಆದ ಮೇಲೆ ಈ ಭಾಗದ ಸಾಕಷ್ಟು ರಸ್ತೆಗಳು ಸುಧಾರಣೆಯಾಗಿವೆ. ಆದರೆ, ರೈತರ ಹೊಲಕ್ಕೆ ರಸ್ತೆ ಇಲ್ಲದೇ ಸಮಸ್ಯೆಯಾಗುತ್ತಿದ್ದು, ಶೀಘ್ರದಲ್ಲೇ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ರಮೇಶ ಭೂಸನೂರ ಹೇಳಿದರು.

ಆಲಮೇಲ ತಾಲ್ಲೂಕಿನ ಬೊಮ್ಮನಹಳ್ಳಿ ಗ್ರಾಮದಲ್ಲಿ ಶನಿವಾರ ಆಯೋಜಿಸಲಾದ ‘ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಬೊಮ್ಮನಹಳ್ಳಿಯಿಂದ ಆಲಮೇಲಕ್ಕೆ ಹೋಗುವ ರಸ್ತೆಯನ್ನು ₹6.5 ಕೋಟಿ ವೆಚ್ಚದಲ್ಲಿ ನಿರ್ಮಾಣಕ್ಕೆ ಈಗಾಗಲೇ ಭೂಮಿ ಪೂಜೆ ನೆರವೇರಿಸಲಾಗಿದೆ ಎಂದರು.

ADVERTISEMENT

ಬೊಮ್ಮನಹಳ್ಳಿಗೆ ಮಂಜೂರಾಗಿರುವ ಸರ್ಕಾರಿ ಪ್ರೌಢಶಾಲೆಗೆ ಸರ್ಕಾರ ಜಾಗ ಒದಗಿಸಬೇಕು. ಗ್ರಾಮಸ್ಥರಿಗೆ ನಾನು ಕೂಡ 2.5 ಎಕರೆ ಜಾಗ ನೀಡಲು ಈಗಾಗಲೇ ಮನವಿ ಮಾಡಿಕೊಂಡಿದ್ದು, ಜಮೀನು ನೀಡಲು ಮುಂದೆ ಬಂದಲ್ಲಿ, ನಾನು ಸಹ ₹2 ಲಕ್ಷ ದೇಣಿಗೆ ನೀಡುವುದಾಗಿ ಹೇಳಿದರು.

ಜಿಲ್ಲಾಧಿಕಾರಿ ವಿಜಯಮಹಾಂತೇಶ ಅವರು ಗ್ರಾಮಸ್ಥರಅಹವಾಲು ಆಲಿಸಿದರು. ಕಾರ್ಯಕ್ರಮದಲ್ಲಿ ಒಟ್ಟು 107 ಅರ್ಜಿ ಸಲ್ಲಿಕೆಯಾಗಿದ್ದು, ಇದರಲ್ಲಿ 24 ಅರ್ಜಿಗಳಿಗೆ ಸ್ಥಳದಲ್ಲಿಯೇ ವಿಲೇವಾರಿ ಮಾಡಲಾಯಿತು. ಉಳಿದ 83 ಅರ್ಜಿಗಳಿಗೆ ಶೀಘ್ರ ಕ್ರಮಕ್ಕಾಗಿ ಸಂಬಂಧಿಸಿದ ಇಲಾಖೆಗೆ ಜಿಲ್ಲಾಧಿಕಾರಿ ಸೂಚನೆ ನೀಡಿದರು.

ಸಾಂಪ್ರದಾಯಿಕ ಸ್ವಾಗತ:

ಬೊಮ್ಮನಹಳ್ಳಿ ಗ್ರಾಮಕ್ಕೆ ಆಗಮಿಸಿ ಜಿಲ್ಲಾಧಿಕಾರಿ ಅವರನ್ನು ಗ್ರಾಮದ ಮಹಿಳೆಯರು ಪೂರ್ಣ ಕುಂಭ, ಕಳಸದೊಂದಿಗೆ ಹಾಗೂ ಡೊಳ್ಳು, ಹಲಗೆ ವಾದನ, ಸಂಗೀತ ವಾದ್ಯದೊಂದಿಗೆ ಕಾರ್ಯಕ್ರಮದ ವೇದಿಕೆಗೆ ಕರೆತರಲಾಯಿತು.

ಬೊಮ್ಮನಹಳ್ಳಿ ಗ್ರಾಮದ ಹುತಾತ್ಮ ಯೋಧ ಗೊಲ್ಲಾಳಪ್ಪ ವಾಸೆನಾ ಅವರ ಸಮಾಧಿಗೆ ತೆರಳಿ ಗೌರವ ಸಲ್ಲಿಸಿದರು.

ಸೀಮಂತ:

ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯಿಂದ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಸುಂದರಬಾಯಿ ಬಿರಾದಾರ ಸೇರಿದಂತೆ ಊರಿನ ಮಹಿಳೆಯರು ಐವರು ಗರ್ಭೀಣಿಯರಿಗೆ ಆರತಿ ಬೆಳಗಿ ಹೂ, ಬಳೆ, ಹಣ್ಣು ನೀಡಿ ಉಡಿ ತುಂಬುವ ಮೂಲಕ ಸೀಮಂತ ಕಾರ್ಯಕ್ರಮ ನಡೆಸಿದರು.

ಬಸ್ ಸಂಚಾರ ಪ್ರಾರಂಭ:

ಗ್ರಾಮದ ವಿದ್ಯಾರ್ಥಿಗಳ ಬೇಡಿಕೆಯಂತೆ ಮಧ್ಯಾಹ್ನ 12.30ಕ್ಕೆ ಬೊಮ್ಮನಳ್ಳಿ-ದೇವರನಾವದಗಿ-ಸಿಂದಗಿ ಮಾರ್ಗದಲ್ಲಿ ನೂತನವಾಗಿ ಆರಂಭಿಸಲಾದ ಬಸ್‌ಗೆ ಶಾಸಕ ರಮೇಶ ಭೂಸನೂರ ಹಾಗೂ ಜಿಲ್ಲಾಧಿಕಾರಿ ವಿಜಯಮಹಾಂತೇಶ ಹಸಿರು ನಿಶಾನೆ ತೋರಿಸಿದರು.

ಸವಲತ್ತು ವಿತರಣೆ:

ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಿಂದ ಮಲ್ಲಮ್ಮ ರಾಂಪೂರ, ಮೌನಪ್ಪ ಬಡಿಗೇರ ಹಾಗೂ ಅಯ್ಯಪ್ಪ ಕಾಳಗಿ ಅವರಿಗೆ ಊರುಗೋಲ ಹಾಗೂ ಅವಶ್ಯಕ ಸಲಕರಣೆ ವಿತರಿಸಲಾಯಿತು.

ಆರೋಗ್ಯ ಶಿಬಿರ:

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಮಲಘಾಣ ಪ್ರಾಥಮಿಕ ಆರೋಗ್ಯ ಕೇಂದ್ರದ ಆಶ್ರಯದಲ್ಲಿ ನಡೆದ ಆರೋಗ್ಯ ಶಿಬಿರ ನಡೆಯಿತು.

ಚರಂಡಿ ನಿರ್ಮಾಣಕ್ಕೆ ಚಾಲನೆ:

ನರೇಗಾ ಯೋಜನೆ ಬೊಮ್ಮನಹಳ್ಳಿ ಗ್ರಾಮದಿಂದ ಕುಮಸಗಿ ಗ್ರಾಮಕ್ಕೆ ಹೋಗುವ ಚಂದಪ್ಪ ದೇಸಾಯಿ ಅವರ ಜಮೀನಿನಿಂದ ಶಿವರಾಜ ಮಡಿವಾಳಪ್ಪ ದೇಸಾಯಿ ಅವರ ಹೊಲದವರೆಗೆ ಚರಂಡಿ ನಿರ್ಮಾಣದ ಅಂದಾಜು ₹ 10 ಲಕ್ಷ ಮೊತ್ತದ ಕಾಮಗಾರಿಗೆ ಶಾಸಕ ಭೂಸನೂರ ಭೂಮಿ ಪೂಜೆ ನೆರವೇರಿಸಿದರು.

ಇಂಡಿ ಉಪವಿಭಾಗಾಧಿಕಾರಿ ರಾಮಚಂದ್ರ ಗಡದೆ, ಜಿಲ್ಲಾ ಪಂಚಾಯ್ತಿ ಯೋಜನಾ ನಿರ್ದೇಶಕ ಸಿ.ಬಿ.ದೇವರಮನಿ, ಬೊಮ್ಮನಹಳ್ಳಿ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಸುಂದರಾಬಾಯಿ ಬಿರಾದಾರ, ಉಪಾಧ್ಯಕ್ಷ ಸಂತೋಷ ಕಲ್ಲೂರ, ಕಲ್ಯಾಣ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿ ಎಂ.ಎ.ಮುಲ್ಲಾ, ಮಹಿಳಾ ಮತ್ತು ಮಕ್ಕಳ ಅಬಿವೃದ್ದಿ ಇಲಾಖೆ ಉಪನಿರ್ದೇಶಕ ಕೆ.ಕೆ.ಚವ್ಹಾಣ, ಆಹಾರ ಇಲಾಖೆ ಉಪನಿರ್ದೇಶಕ ಎಸ್.ಎಂ. ಮಾರಿಹಾಳ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ರಾಮನಗೌಡ ಕನ್ನೊಳ್ಳಿ, ಆಲಮೇಲ ತಹಶೀಲ್ದಾರ ಸುರೇಶ ಚವಲರ ಇದ್ದರು.

***

ಗ್ರಾಮೀಣರ ಬಳಿಗೆ ಆಡಳಿತ ಯಂತ್ರ ಕೊಂಡೊಯ್ಯುವ ಮೂಲಕ ಅವರ ಸಮಸ್ಯೆಗಳನ್ನು ಸ್ಥಳದಲ್ಲಿಯೇ ಅರಿತು, ಪರಿಹಾರ ಕಲ್ಪಿಸಲು ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ

–ವಿಜಯಮಹಾಂತೇಶ,ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.