ಮುದ್ದೇಬಿಹಾಳ: ತಾಲ್ಲೂಕಿನ ಹುಲ್ಲೂರು ಗ್ರಾಮದ ಬಿಎಸ್‌ಸಿ ಪದವಿ ಓದುತ್ತಿರುವ ಚಂದನಗೌಡ ಶಿವಪ್ಪಗೌಡ ಕೊಡಗಾನೂರ ಎಂಬ ಯುವಕ 6 ಸಾವಿರ ಲೀಟರ್ ಸಾಮರ್ಥ್ಯದ ಓಕಳಿ ಹೊಂಡವನ್ನು ಕೊಡದಿಂದ ನೀರು ತಂದು ತುಂಬಿಸಿ ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರನಾಗಿದ್ದಾನೆ.
ಗ್ರಾಮದ ಮಾರುತೇಶ್ವರ ಜಾತ್ರೆ ನಿಮಿತ್ತ ಭಾನುವಾರ ಓಕಳಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಓಕಳಿಯಾಟಕ್ಕೆ ಹೊಂಡದಲ್ಲಿ ನೀರು ತುಂಬಿಸಬೇಕು. ಯುವಕನೊಬ್ಬನೇ ಅಂದಾಜು 40 ಲೀಟರ್ ಸಾಮರ್ಥ್ಯದ ಪಟ್ಟಿಕೊಡದಿಂದ ದೂರದ ಸೇದು ಬಾವಿಯಿಂದ ಹೊತ್ತು ತಂದು ತುಂಬಿಸಿದ್ದಾನೆ.
ಆರು ಸಾವಿರ ಲೀಟರ್‌ಗೂ ಅಧಿಕ ನೀರು ಹಿಡಿಯುವ ಓಕುಳಿಯ ಹೊಂಡಕ್ಕೆ ನೀರು ಹಾಕುತ್ತಿರುವಾಗ ಯುವಕರು, ಸ್ನೇಹಿತರು ಕೇಕೇ ಹಾಕಿ ಹುರಿದುಂಬಿಸುತ್ತಿದ್ದರು.
ಮೆರವಣಿಗೆ: ಹೊಂಡ ತುಂಬುತ್ತಿದ್ದಂತೆ ಯುವಕರು ಪರಸ್ಪರ ಗುಲಾಲ್ ಎರಚಿ ಪಟಾಕಿ ಸಿಡಿಸಿ ಸಂಭ್ರಮಿಸಿದರು. ವಿಶಿಷ್ಟ ಸಾಧನೆ ಮಾಡಿದ ಚಂದನಗೌಡ ಅವರನ್ನು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ಕರೆತಂದು ಸನ್ಮಾನಿಸಿದರು. ಯುವಕನ ಬಂಧುಗಳು, ಸ್ನೇಹಿತರು ಚಿನ್ನ, ಬೆಳ್ಳಿ, ಬಟ್ಟೆ, ನಗದು ನೀಡಿ ಪ್ರೋತ್ಸಾಹಿಸಿದರು.
ತಾಪಂ ಮಾಜಿ ಅಧ್ಯಕ್ಷ ಮುತ್ತಣ್ಣ ಹುಗ್ಗಿ, ಪಿಕೆಪಿಎಸ್ ಅಧ್ಯಕ್ಷ ಸುರೇಶ ಹಳೇಮನಿ, ಎಚ್.ಎಚ್.ಬೊಮ್ಮಣಗಿ, ನ್ಯಾಯವಾದಿ ಸಂತೋಷ ಕಡಿ, ಹಣಮಂತರಾಯಗೌಡ ಕೊಡಗಾನೂರ, ಸಂಗಪ್ಪಗೌಡ ಕೊಡಗಾನೂರ, ನಿಂಗಪ್ಪ ಓಲೇಕಾರ, ವೈ.ಎನ್.ಸಾಲೋಟಗಿ, ಭೀಮನಗೌಡ ಬಿರಾದಾರ, ಭೀಮಣ್ಣ ತೊಂಡಿಕಟ್ಟಿ, ರಾಮನಗೌಡ ಭಗವತಿ, ಮಲ್ಲನಗೌಡ ಬಿರಾದಾರ, ಯಮನಪ್ಪ ಇಂಗನಾಳ, ವೈ.ಜಿ.ಕೊಡಗಾನೂರ, ಮುದಕಪ್ಪಗೌಡ ಕೊಡಗಾನೂರ, ರಾಮು ಬಿರಾದಾರ, ಗ್ರಾಪಂ ಸದಸ್ಯ ದಯಾನಂದ ಹಲಕಾವಟಗಿ, ರಾಘವೇಂದ್ರ ಕುಲಕರ್ಣಿ, ವಿನೋದ ಓಲೇಕಾರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.