ADVERTISEMENT

ಆಲಮೇಲ | ಪ್ರವಾಹ; ಮೂರು ಗ್ರಾಮದಲ್ಲಿ ಕಾಳಜಿ ಕೇಂದ್ರ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2025, 6:23 IST
Last Updated 27 ಸೆಪ್ಟೆಂಬರ್ 2025, 6:23 IST
ಆಲಮೇಲ ತಾಲ್ಲೂಕಿನ ಕುಮಸಗಿ ಗ್ರಾಮದ ಭೀಮಾ ನದಿ ತೀರದ ಮನೆಗಳಿಗೆ ನೀರು ನುಗ್ಗಿದೆ
ಆಲಮೇಲ ತಾಲ್ಲೂಕಿನ ಕುಮಸಗಿ ಗ್ರಾಮದ ಭೀಮಾ ನದಿ ತೀರದ ಮನೆಗಳಿಗೆ ನೀರು ನುಗ್ಗಿದೆ   

ಆಲಮೇಲ: ಭೀಮಾ ನದಿ ಪ್ರವಾಹ ಹೆಚ್ಚುತ್ತಿದ್ದು, ಎರಡು ದಿನಗಳಿಂದ ತಾರಾಪೂರ ಗ್ರಾಮ ನಡುಗಡ್ಡೆಯಾಗಿ ಮಾರ್ಪಟ್ಟಿದೆ. ಮೂರು ಗ್ರಾಮಗಳಲ್ಲಿ ಕಾಳಜಿ ಕೇಂದ್ರ ಆರಂಭಿಸಿ, ಸಂತ್ರಸ್ತರನ್ನು ಸ್ಥಳಾಂತರ ಮಾಡಲಾಗುತ್ತಿದೆ.

ಶುಕ್ರವಾರ ಪ್ರವಾಹ ಮತ್ತಷ್ಟು ಹೆಚ್ಚಳವಾಗಿದ್ದು, ನದಿತೀರದ ಗ್ರಾಮಗಳಾದ ದೇವಣಗಾಂವ, ತಾವರಖೇಡ, ಬ್ಯಾಡಗಿಹಾಳ, ಕುಮಸಗಿ, ಶೇಂಬೆವಾಡ, ಕಡ್ಲೆವಾಡ, ಶಿರಸಗಿ ಗ್ರಾಮದ ಕೆಲ ಮನೆಗಳು ಜಲಾವೃತಗೊಂಡವು. ತಾರಾಪೂರ, ತಾವರಖೇಡ, ಕುಮಸಗಿಯಲ್ಲಿ ತೆರೆದ ಕಾಳಜಿ ಕೇಂದ್ರಗಳಿಗೆ ಸಂತ್ರಸ್ತರನ್ನು ಸ್ಥಳಾಂತರಿಸಲಾಗಿದೆ. ನದಿ ತೀರ ಹಾಗೂ ಜಮೀನುಗಳಲ್ಲಿ ವಾಸವಿರುವ ಜನರು ಆತಂಕಕ್ಕೊಳಗಾಗಿದ್ದಾರೆ.

ದೇವರನಾವದಗಿ–ಸಿರಸಗಿ ಮಾರ್ಗದ ಆಲಮೇಲ–ಮೋರಟಗಿ–ಘತ್ತರಗಿ ಸಂಪರ್ಕ ಕಲ್ಪಿಸುವ ಬಾರಿಕೇಡ್, ಬೀಳಗಿ ರಾಜ್ಯ ಹೆದ್ದಾರಿ ಮೇಲೆ ಅಪಾರ ಪ್ರಮಾಣದ ನೀರು ಆವರಿಸಿದ್ದು,  ರಸ್ತೆ ಸಂಪರ್ಕ ಕಡಿತಗೊಂಡಿದೆ. ದೇವರನಾವದಗಿ, ಹವಳಗಾ, ಕುಮಸಗಿ ದೇವಣಗಾಂವ, ಕಡ್ಲೆವಾಡ ಕುಮಸಗಿ ಸೇರಿದಂತೆ ಜಮೀನುಗಳಿಗೆ ತೆರಳುವ ರಸ್ತೆ ಸಂಪರ್ಕವೂ ಕಡಿತಗೊಂಡಿದೆ.

ಆಲಮೇಲ ತಹಶೀಲ್ದಾರ್‌ ಧನಪಾಲಶೆಟ್ಟಿ ದೇವೂರ ಅವರು ನದಿ ತೀರದ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ಕುಮಸಗಿ ಗ್ರಾಮದಲ್ಲಿ ಸಂಚರಿಸಿ, ನದಿ ಪ್ರವಾಹದಿಂದ ಉಂಟಾದ ಸಮಸ್ಯೆಗ ಆಲಿಸಿದರು. ‘ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮತ್ತು ಗ್ರಾಮ ಲೆಕ್ಕಾಧಿಕಾರಿಗಳು ಸ್ಥಳದಲ್ಲೇ ಬೀಡುಬಿಟ್ಟು, ಯಾವುದೇ ಸಮಸ್ಯೆ ಆಗದಂತೆ ನಿಗಾ ವಹಿಸಬೇಕು. ಹಾನಿಗೊಂಡ ಮನೆ ಮತ್ತು ಬೆಳೆಗಳ ಸಮೀಕ್ಷೆ ಮಾಡಿ ವರದಿ ನೀಡಬೇಕು’ ಎಂದು ಸೂಚಿಸಿದರು.

ಆಲಮೇಲ ತಾಲ್ಲೂಕಿನ ದೇವಣಗಾಂವ ಗ್ರಾಮದ ಸುತ್ತಲೂ ನೀರು ಆವರಿಸಿದೆ

ದೇವಣಗಾಂವಕ್ಕೂ ನುಗ್ಗಿದ ನೀರು ದೇವಣಗಾಂವ ಗ್ರಾಮಕ್ಕೂ ಭೀಮಾ ನದಿ ಪ್ರವಾಹದಿಂದ ನೀರು ನುಗ್ಗಿದೆ. ಶಂಬೇವಾಡಿ ಗ್ರಾಮದ ಮುಖ್ಯರಸ್ತೆಯ ಮೇಲೆ ಟೊಂಕದವರೆಗೆ ನಿಂತಿದ್ದ ನೀರನಲ್ಲೇ  ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸಂಜೀವಕುಮಾ‌ರ್ ದೊಡ್ಡಮನಿ ಹಾಗೂ ಗ್ರಾಮ ಲೆಕ್ಕಾಧಿಕಾರಿ ಎಂ.ಕೆ. ಪೂಜಾರಿ ನಡೆದು ಸಂತ್ರಸ್ತರ ಸಮಸ್ಯೆ ಆಲಿಸಿದರು. ತೋಟದ ವಸ್ತಿ ಹಾಗೂ ಹಳೆ ಗ್ರಾಮದಲ್ಲಿರುವರು ಎಚ್ಚರಿಕೆಯಿಂದ ಇರಲು ಸೂಚಿಸಿದರು. ‘ಅಗತ್ಯವಿದ್ದರೆ ಇಲ್ಲಿ ಕಾಳಜಿ ಕೇಂದ್ರ ತೆರೆಯಲಾಗುತ್ತದೆ. ಅಧಿಕಾರಿ ವರ್ಗ ಸದಾ ಜನರ ಸಹಾಯಕ್ಕೆ ಇರುತ್ತದೆ. ಯಾವುದೇ ಸಂದರ್ಭದಲ್ಲಿ ತೊಂದರೆ ಉಂಟಾದಾಗ ನಮಗೆ ಕರೆ ಮಾಡಿ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.