
ನಾಲತವಾಡ: ಪಟ್ಟಣದಲ್ಲಿ ಹಿಂದುಳಿದ ಸಮುದಾಯಗಳಿಗಾಗಿ ಮೀಸಲಿರುವ 6 ಎಕರೆ ಸ್ಮಶಾನ ಜಾಗವನ್ನು ಅತಿಕ್ರಮಿಸಿ ಸ್ವಂತದ್ದೆಂದು ನಕಲಿ ದಾಖಲೆ ಸೃಷ್ಟಿಸಿ ಮಾರಾಟ ಮಾಡಲಾಗಿದೆ. ಜೊತೆಗೆ ಈ ಸ್ಥಳದಲ್ಲಿ ಬ್ಯಾಂಕ್, ಸಂಘ-ಸಂಸ್ಥೆ ಕಚೇರಿ ಹಾಗೂ ಮನೆಗಳನ್ನು ನಿರ್ಮಿಸಿ ಬಾಡಿಗೆ ನೀಡಲಾಗಿದೆ ಎಂದು ಆರೋಪಿಸಿ ಯುವಜನ ಸೇನೆಯ ರಾಜ್ಯ ಘಟಕದ ಅಧ್ಯಕ್ಷ ಶಿವಾನಂದ ವಾಲಿ ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ.
ಪ್ರಕರಣದ ಬಗ್ಗೆ ಯಾವುದೇ ಕ್ರಮಕೈಗೊಳ್ಳದ ನಾಲತವಾಡ ಪಟ್ಣಣ ಪಂಚಾಯಿತಿ ಸಿಒ ಹಾಗೂ ತಹಶೀಲ್ದಾರ್ ವಿರುದ್ಧವೂ ತನಿಖೆ ನಡೆಸಿ, ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಏನಿದು ಪ್ರಕರಣ?:
ಹಲವಾರು ವರ್ಷಗಳಿಂದ ಪಟ್ಟಣದ ವಿವಿಧ ಸಮುದಾಯಗಳ ಸ್ಮಶಾನಕ್ಕೆ ಎಂದು ಸರ್ವೆ ನಂ.615 ರ ಮೀಸಲಿಟ್ಟ 6 ಎಕರೆ 21ಗುಂಟೆ ಸುಡುಗಾಡು ಜಾಗವನ್ನು ಪ್ರಭಾವಿಗಳು ನಕಲಿ ದಾಖಲೆ ಸೃಷ್ಟಿಸಿ ಖಾಸಗಿಯವರ ಅತಿಕ್ರಮಣಕ್ಕೆ ಅವಕಾಶ ನೀಡಿವೆ ಎಂದು ಶಿವಾನಂದ ವಾಲಿ ದೂರಿದ್ದಾರೆ.
ಅಧಿಕಾರಿಗಳು ಮತ್ತು ಗ್ರಾಮ ಪಂಚಾಯಿತಿ ಆಡಳಿತ ಮಂಡಳಿಯವರು ಸೇರಿ ಪಂಚಾಯಿತಿ ದಾಖಲೆ 9 ನಂ. ರಿಜಿಸ್ಟರ್ ನಲ್ಲಿ ಹೆಸರು ನಮೂದಿಸಿ, ಸ್ಮಶಾನ ಜಾಗವನ್ನು ಕಂಡವರ ಪಾಲು ಮಾಡಿ ಉತಾರ ಸೃಷ್ಟಿಸಲಾಗಿದೆ ಎಂದು ಆರೋಪಿಸಿದ್ದಾರೆ.
ಸ್ಮಶಾನದ ಜಾಗ ತಮ್ಮದೇ ಎಂದು ಹೇಳಿಕೊಂಡು ಲಕ್ಷಗಟ್ಟಲೇ ಹಣಕ್ಕೆ ಮಾರಾಟ ಮಾಡಿದ್ದಾರೆ. ಸರ್ಕಾರಕ್ಕೆ ಸೇರಿದ ಸ್ಮಶಾನ ಜಾಗದಲ್ಲೇ ಸಭಾ ಭವನ ನಿರ್ಮಿಸಿ ಸರ್ಕಾರಕ್ಕೆ ಬಾಡಿಗೆ ನೀಡಿದ್ದಾರೆ. ಮತ್ತೊಂದೆಡೆ ಡಿಸಿಸಿ ಬ್ಯಾಂಕ್, ಕೃಷಿ ಪತ್ತಿನ ಸಹಕಾರ ಸಂಘದ ಕಚೇರಿ ನಿರ್ಮಿಸಲಾಗಿದೆ. ಅದೇ ಜಾಗದಲ್ಲಿ ಹಲವರು ಮನೆಗಳನ್ನು ನಿರ್ಮಿಸಿಕೊಂಡು ವಾಸವಾಗಿದ್ದಾರೆ ಎನ್ನುವುದು ದೂರುದಾರರ ವಾದ.
ಸ್ಥಾನಿಕ ತನಿಖೆಗೂ ಮೀನಮೇಷ:
ಸ್ಮಶಾನ ಸ್ಥಳ ಅತಿಕ್ರಮಿಸಿದ ಕುರಿತು ಜಿಲ್ಲಾಧಿಕಾರಿ, ಪಟ್ಟಣ ಪಂಚಾಯಿತಿ ಅಧಿಕಾರಿಗಳು ಹಾಗೂ ತಹಶೀಲ್ದಾರ್ ಕಚೇರಿಗೆ ದೂರು ನೀಡಿ ತನಿಖೆ ನಡೆಸುವಂತೆ ಮನವಿ ಮಾಡಲಾಗಿದೆ. 2022 ರಿಂದ ಎರಡ್ಮೂರು ಸಲ ಪಪಂ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳಿಗೆ ದಾಖಲೆ ಸಮೇತ ಮನವಿ ಸಲ್ಲಿಸಲಾಗಿದೆ ಎಂದು ಅವರು ತಿಳಿಸಿದರು.
ಇತ್ಯರ್ಥಕ್ಕೆ ಬಾಕಿ ಇದೆ:
ನಾಲತವಾಡ ಈ ಹಿಂದ ಗ್ರಾಮ ಪಂಚಾಯಿತಿಯಾಗಿದ್ದ ವೇಳೆ ನಡೆದ ಪ್ರಕರಣವಾಗಿದೆ. 2022 ರಲ್ಲಿ ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೇ ತಹಶೀಲ್ದಾರರು ವಿಚಾರಣೆಗೆ ತೆಗೆದುಕೊಂಡಿದ್ದಾರೆ. ಇತ್ಯರ್ಥಕ್ಕೆ ಬಾಕಿ ಇದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೆ ಲೋಕಾಯುಕ್ತರಿಂದ ನಮಗೆ ನೋಟಿಸ್ ಬಂದಿರುವುದಿಲ್ಲ’ ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಈರಣ್ಣ ಕೊಣ್ಣೂರ ‘ಪ್ರಜಾವಾಣಿ’ಗೆ ತಿಳಿಸಿದರು.
‘ಅತೀಕ್ರಮಣ ಆಗಿರುವ ಬಗ್ಗೆ 2022 ರಲ್ಲಿ ದೂರು ನೀಡಿರುವ ಬಗ್ಗೆ ನನಗೆ ಮಾಹಿತಿ ಗೊತ್ತಿಲ್ಲ. ನಾನು ಇತ್ತೀಚೆಗೆ ತಹಶೀಲ್ದಾರ್ ಆಗಿ ಅಧಿಕಾರ ಸ್ವೀಕರಿಸಿದ್ದೇನೆ. ಪರಿಶೀಲಿಸಿ, ಕ್ರಮಕೈಗೊಳ್ಳಲಾಗುವುದು’ ಎಂದು ತಹಶೀಲ್ದಾರ್ ಕೀರ್ತಿ ಚಾಲಾಕ ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.