ADVERTISEMENT

ಸಮೀಕ್ಷೆಯಿಂದ ಯಾರೊಬ್ಬರೂ ಹೊರಗುಳಿಯದಿರಲಿ: ಜಿಲ್ಲಾಧಿಕಾರಿ ಟಿ. ಭೂಬಾಲನ್

​ಪ್ರಜಾವಾಣಿ ವಾರ್ತೆ
Published 28 ಮೇ 2025, 15:11 IST
Last Updated 28 ಮೇ 2025, 15:11 IST
ಟಿ.ಭೂಬಾಲನ್‌
ಟಿ.ಭೂಬಾಲನ್‌   

ವಿಜಯಪುರ: ಪರಿಶಿಷ್ಟ ಜಾತಿ ಒಳ ಮಿಸಲಾತಿ ಸಂಬಂಧ ನಡೆಯುತ್ತಿರುವ ದತ್ತಾಂಶ ಸಂಗ್ರಹಣೆ ವೇಳೆ ಜಿಲ್ಲೆಯ ಪರಿಶಿಷ್ಟ ಜಾತಿಯ ಯಾವುದೇ ಕುಟುಂಬವು ಹೊರಗುಳಿಯದಂತೆ ಅತ್ಯಂತ ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಟಿ. ಭೂಬಾಲನ್ ಸೂಚಿಸಿದ್ದಾರೆ. 

ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ವಿಡಿಯೋ ಸಂವಾದದ ಮೂಲಕ ನಡೆದ ಪರಿಶಿಷ್ಟ ಜಾತಿಯ ಸಮಗ್ರ ಸಮೀಕ್ಷೆಗೆ ಸಂಬಂಧಿಸಿದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು. 

ಸಮೀಕ್ಷಾ ಬ್ಲಾಕ್ ವ್ಯಾಪ್ತಿಯಲ್ಲಿ ವಿಶೇಷ ಶಿಬಿರ ಅವಧಿಯನ್ನು ಮೇ 30 ರಿಂದ ಜೂನ್ 1 ರ ವರೆಗೆ ಮರು ನಿಗದಿಪಡಿಸಲಾಗಿದೆ. ಆನ್‍ಲೈನ್ ಮೂಲಕ ಸ್ವಯಂ ಘೋಷಣೆಯನ್ನು ಜೂನ್ 1 ರ ವರೆಗೆ ವಿಸ್ತರಿಸಲಾಗಿದೆ ಎಂದರು.

ADVERTISEMENT

ಮನೆ-ಮನೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸುವ ಸಮೀಕ್ಷಾ ಅವಧಿಯಲ್ಲಿ ಲಭ್ಯವಿಲ್ಲದ ಹಾಗೂ ಜಿಲ್ಲೆಯಿಂದ ಬೇರೆ ಬೇರೆ ಸ್ಥಳಗಳಿಗೆ ತೆರಳಿರುವ ಪರಿಶಿಷ್ಟ ಜಾತಿ ಕುಟುಂಬದವರ ಮಾಹಿತಿ ಪಡೆದುಕೊಂಡು, ಸಂಬಂಧಿಸಿದ ಅಧಿಕಾರಿಗಳು ಸಮೀಕ್ಷಾ ಮಾಹಿತಿ ನೀಡಬೇಕು ಎಂದು ಸೂಚಿಸಿದರು.

ಮೇ 30, 31 ಹಾಗೂ ಜೂನ್  1 ರಂದು 3 ದಿನಗಳ ವಿಶೇಷ ಶಿಬಿರವನ್ನು ಏರ್ಪಡಿಸಲಾಗಿದ್ದು, ಸಮೀಕ್ಷೆಗೆ ನಿಯೋಜಿತ ಅಧಿಕಾರಿ, ಸಿಬ್ಬಂದಿ 3 ದಿನಗಳ ಕಾಲ ನಡೆಯುವ ವಿಶೇಷ ಶಿಬಿರದಲ್ಲಿ ಉಪಸ್ಥಿತರಿರಲಿದ್ದು, ಸಮೀಕ್ಷೆಯಿಂದ ಹೊರಗುಳಿದ ಪರಿಶಿಷ್ಟ ಜಾತಿಯ ಕುಟುಂಬದವರು ಈ ಶಿಬಿರದ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದರು. 

ಸಮೀಕ್ಷೆಗೆ ನಿಯೋಜಿತ ಅಧಿಕಾರಿಗಳು ಪರಸ್ಪರ ಸಹಕಾರದಿಂದ ಸಮನ್ವಯತೆಯೊಂದಿಗೆ ಕಾರ್ಯ ನಿರ್ವಹಿಸಬೇಕು. ಸಮೀಕ್ಷಾ ಕಾರ್ಯದ ನಿರ್ಲಕ್ಷ್ಯ ವಹಿಸುವವರ ವಿರುದ್ಧ ನಿರ್ಧಾಕ್ಷಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ವಿಡಿಯೋ ಸಂವಾದದ ಮೂಲಕ ಪ್ರತಿ ತಾಲ್ಲೂಕಿನಿಂದ ಸಮೀಕ್ಷೆಯ ಮಾಹಿತಿಯನ್ನು ಪಡೆದುಕೊಂಡರು.

ಜಿಲ್ಲೆಯ ಸಮೀಕ್ಷಾ ಪ್ರಗತಿ ಉತ್ತಮವಾಗಿದ್ದು, ಗ್ರಾಮ, ನಗರ ಸ್ಥಳಿಯ ಸಂಸ್ಥೆಗಳಲ್ಲಿ ಹಾಗೂ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಸಮೀಕ್ಷಾ ಕಾರ್ಯದಿಂದ ಹೊರಗುಳಿಯಬಹುದಾದ ಪರಿಶಿಷ್ಟ ಜಾತಿ ಕುಟುಂಬಗಳ ವಿವರವನ್ನು ಪಡೆದುಕೊಳ್ಳಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು. 

ವಿಡಿಯೋ ಸಂವಾದದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ, ಜಿಲ್ಲಾ ನಗರಾಭಿವೃದ್ಧಿ ಕೋಶದ ಬದ್ರುದ್ಧಿನ್ ಸೌದಾಗರ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಕೆ.ಕೆ.ಚವ್ಹಾಣ, ಸಮಾಜ ಕಲ್ಯಾಣ ಇಲಾಖೆಯ ಸಹಾಯ ನಿರ್ದೇಶಕ ಬಿ.ಜೆ. ಇಂಡಿ, ಜಿಲ್ಲಾ ವ್ಯವಸ್ಥಾಪಕ ಮಂಟೂರ ಉಪಸ್ಥಿತರಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.