ADVERTISEMENT

ಹಾಲುಮತ ಸಮಾಜಕ್ಕೆ ಪ್ರಾತಿನಿಧ್ಯಕ್ಕೆ ಸಲಹೆ

ವಿಜಯಪುರ ನಗರದಲ್ಲಿ ಭಕ್ತ ಕನಕದಾಸರ ಮೂರ್ತಿ ಅನಾವರಣ

​ಪ್ರಜಾವಾಣಿ ವಾರ್ತೆ
Published 26 ಮೇ 2022, 15:41 IST
Last Updated 26 ಮೇ 2022, 15:41 IST
ವಿಜಯಪುರ ನಗರದಲ್ಲಿ ಭಕ್ತ ಕನಕದಾಸ ಮೂರ್ತಿ ಲೋಕಾರ್ಪಣೆ ಅಂಗವಾಗಿ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಶಾಸಕ ಕೆ.ಎಸ್.ಈಶ್ವರಪ್ಪ ಮಾತನಾಡಿದರು –ಪ್ರಜಾವಾಣಿ ಚಿತ್ರ 
ವಿಜಯಪುರ ನಗರದಲ್ಲಿ ಭಕ್ತ ಕನಕದಾಸ ಮೂರ್ತಿ ಲೋಕಾರ್ಪಣೆ ಅಂಗವಾಗಿ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಶಾಸಕ ಕೆ.ಎಸ್.ಈಶ್ವರಪ್ಪ ಮಾತನಾಡಿದರು –ಪ್ರಜಾವಾಣಿ ಚಿತ್ರ    

ವಿಜಯಪುರ:ಜಿಲ್ಲೆಯಲ್ಲಿ ಹಾಲುಮತ ಸಮಾಜದವರು ಹೆಚ್ಚಿನ ಸಂಖ್ಯೆಯಲ್ಲಿರುವುದರಿಂದ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಯಾವುದಾದರೂ ಕ್ಷೇತ್ರದಲ್ಲಿ ಸಮಾಜದ ಮುಖಂಡರಿಗೆ ಟಿಕೆಟ್ ನೀಡಬೇಕು ಹಾಗೂ ಮಹಾನಗರ ಪಾಲಿಕೆ‌ ಚುನಾವಣೆಯಲ್ಲಿಯೂ ಸಮಾಜದವರಿಗೆ ಪ್ರಾತಿನಿಧ್ಯ ನೀಡಬೇಕು ಎಂದು ಪೌರಾಡಳಿತ ಹಾಗೂ ಸಕ್ಕರೆ ಸಚಿವ ಎಂ.ಟಿ.ಬಿ.ನಾಗರಾಜ್ ಸಲಹೆ ನೀಡಿದರು.

ಭಕ್ತ ಕನಕದಾಸ ಪುತ್ಥಳಿ ಲೋಕಾರ್ಪಣೆ ಅಂಗವಾಗಿನಗರದ ದರಬಾರ ಹೈಸ್ಕೂಲ್ ಮೈದಾನದಲ್ಲಿ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಅವರು ಮಾತನಾಡಿದರು.

ಪ್ರತಿಯೊಂದು ಸಮುದಾಯ ಸಮಾಜದ ಮುಖ್ಯವಾಹಿನಿಗೆ ಬಂದರೆ ಮಾತ್ರ ಸಾಮಾಜಿಕ ನ್ಯಾಯ ಪರಿಪೂರ್ಣವಾಗಲು ಸಾಧ್ಯ. ರಾಜಕಾರಣದಲ್ಲಿ ಜಾತಿ ಮುಖ್ಯವಲ್ಲ, ನೀತಿ ಹಾಗೂ ಪ್ರೀತಿ ಮುಖ್ಯ ಎಂದರು.

ADVERTISEMENT

ಸಮಾನತೆ ನೆಲೆಸಿ, ಜಾತಿ ದೂರವಾಗಬೇಕು ಎಂಬುದು ಭಕ್ತ ಕನಕದಾಸರ ನಿಲುವು ಹಾಗೂ ಚಿಂತನೆಯಾಗಿತ್ತು. ನಾಟಕ, ಪುಸ್ತಕ, ಸಾಹಿತ್ಯ, ಸಂಗೀತದ ಮೂಲಕ ಭಕ್ತ ಕನಕದಾಸರನ್ನು ನಾವು ಅರಿತುಕೊಂಡಿದ್ದೇವೆ. ಅವರ ಚಿಂತನೆಗಳನ್ನು ನಾವು ಇನ್ನಷ್ಟೂ ಆಳವಾಗಿ ಅರ್ಥೈಸಿಕೊಳ್ಳಬೇಕಿದೆ ಎಂದರು.

ಯತ್ನಾಳ ನೇರ ಹಾಗೂ ನಿಷ್ಠುರವಾಗಿ ಮಾತನಾಡುವ, ವಾಸ್ತವಿಕ ನೆಲೆಗಟ್ಟಿನಲ್ಲಿ ಮಾತನಾಡುವ ನಾಯಕ, ಜನಪ್ರತಿನಿಧಿ, ಒಬ್ಬ ನೈಜ ಜನಸೇವಕ ಎಂದು ನಾಗರಾಜ್‌ ಬಣ್ಣಿಸಿದರು.

ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ ಮಾತನಾಡಿ, ಭಕ್ತ ಕನಕದಾಸರ ಭಕ್ತಿ ದಾರಿ ಪ್ರತಿಯೊಬ್ಬರಿಗೂ ಮಾದರಿ, ಭಕ್ತ ಕನಕದಾಸರು ತೋರಿದ ಭಕ್ತಿಯ ದಾರಿಯಲ್ಲಿ ಸಾಗಿ ಮುನ್ನಡೆಯಬೇಕು ಎಂದು ಹೇಳಿದರು.

ಭಕ್ತ ಕನಕದಾಸರು ಸಾರಿದ ಚಿಂತನೆ, ತತ್ವಗಳನ್ನು ಅಳವಡಿಸಿಕೊಳ್ಳಬೇಕು, ಭಕ್ತ ಕನಕದಾಸರ ಪ್ರತಿಮೆ, ವೃತ್ತ ನಿರ್ಮಾಣದಿಂದ ಪ್ರತಿಯೊಬ್ಬರಿಗೂ ಪ್ರೇರಣೆ ದೊರಕಲಿ ಎನ್ನುವ ದೃಷ್ಟಿಯಿಂದ ಎಲ್ಲ ಕಡೆಗಳಲ್ಲಿಯೂ ವೃತ್ತ ನಿರ್ಮಾಣಕ್ಕೆ ಎಲ್ಲ ರೀತಿಯಿಂದಲೂ ಪ್ರೋತ್ಸಾಹ ನೀಡುವ ಕೆಲಸವನ್ನು ಮಾಡಲಾಗುತ್ತಿದೆ ಎಂದರು.

ನಗರಾಭಿವೃದ್ಧಿ ಸಚಿವನಾಗಿ ಅಧಿಕಾರ ಸ್ವೀಕರಿಸಿದ ಮೇಲೆ ವಿಜಯಪುರ ಮಹಾನಗರ ಪ್ರಗತಿಗೆ ₹200 ಕೋಟಿ ಅನುದಾನ ಬಿಡುಗಡೆ ಮಾಡಿರುವೆ, ಇದಕ್ಕೆ ಶಾಸಕ ಬಸನಗೌಡ ಪಾಟೀಲ ಯತ್ನಾಳರ ಶ್ರಮವೂ ಇದೆ, ಅವರ ಮೇಲೆ ನಿಮ್ಮ ಆಶೀರ್ವಾದ ಸದಾ ಇರಲಿ ಎಂದರು.

ಶಾಸಕ ಬಸನಗೌಡ ಪಾಟೀಲ ಯತ್ನಾಳ ಮಾತನಾಡಿ, ನಗರದ ‍ಪ್ರಮುಖ ರಸ್ತೆಗಳಿಗೆ ಇದ್ದ ಹಳೆಯ ಹೆಸರು ಬದಲಿಸಿ ಡಾ. ಅಂಬೇಡ್ಕರ್‌, ಸಂತ ಕನಕದಾಸ, ರಾಜಾಮಾತಾ ಅಹಿಲ್ಯಾದೇವಿ ಹೋಳ್ಕರ್‌, ಸಂಗೊಳ್ಳಿ ರಾಯಣ್ಣ, ನೇತಾಜಿ ಸುಭಾಶ್‌ ಚಂದ್ರಬೋಸ್‌, ಮಹಾರಾಣ ಪ್ರತಾಪ್‌ಸಿಂಹ, ಛತ್ರಪತಿ ಶಿವಾಜಿ, ಸರ್‌ ಎಂ.ವಿಶ್ವೇಶ್ವರಯ್ಯ, ಮಹರ್ಷಿ ಭಗೀರಥ ಸೇರಿದಂತೆ 23 ಸತ್ಪುರುಷರ ಹೆಸರನ್ನು ನಾಮಕರಣ ಮಾಡಲಾಗಿದೆ ಎಂದು ಹೇಳಿದರು.

ವಿಜಯಪುರ ನಗರದಲ್ಲಿ ಕನಕದಾಸ ಸಮುದಾಯ ಭವನ ನಿರ್ಮಾಣಕ್ಕೆ ಸಚಿವ ಎಂ.ಟಿ.ಬಿ.ನಾಗರಾಜ್‌ ಅವರು ₹ 50 ಲಕ್ಷ ಸಹಾಯಧನ ನೀಡುವುದಾಗಿ ಭರವಸೆ ನೀಡಿದ್ದಾರೆ ಎಂದರು.

ಶಾಸಕ ಕೆ.ಎಸ್.ಈಶ್ವರಪ್ಪ ಮಾತನಾಡಿ, ಕನಕದಾಸರ ವಿಚಾರಧಾರೆ ಇಡೀ ದೇಶಕ್ಕೆ ಅವಶ್ಯಕವಾಗಿದೆ. ಕನಕದಾಸ, ಸಂಗೊಳ್ಳಿ ರಾಯಣ್ಣ ಅವರ ಹೆಸರನ್ನು ರಾಜಕೀಯಕ್ಕೆ ಬಳಸಿಕೊಂಡರೆ ಸಾಲದು, ಅವರ ವಿಚಾರಧಾರೆಯಂತೆ ಬದುಕಬೇಕು ಎಂದು ಹೇಳಿದರು.

ಸಿದ್ದರಾಮಾನಂದ ಪುರಿ ಮಹಾಸ್ವಾಮಿ, ಸೋಮೇಶ್ವರ ಮಹಾಸ್ವಾಮಿ, ಅಭಿನವ ಪುಂಡಲಿಂಗ ಮಹಾರಾಜರು, ಗೂಳಪ್ಪ ಜ್ಯೋತೆಪ್ಪ ಪೂಜಾರಿ, ಅವದು ಮಹಾರಾಜರು, ಅಡಿವೆಪ್ಪ ಮಹಾರಾಜರು, ಮಾಳಿಂಗರಾಯ ಮಹಾರಾಜರು, ಅಮೀನಪ್ಪ ಪೂಜಾರಿ, ಮಲ್ಲಪ್ಪ ಬಡ್ಡೂರ, ಮುಕುಂದಪ್ಪಗೌಡ ಪಾಟೀಲ, ಶಂಕರ ಸಿಂಧೆ ಸಾನ್ನಿಧ್ಯ ವಹಿಸಿದ್ದರು.

ಶಾಸಕ ಎಂ.ಬಿ. ಪಾಟೀಲ, ಮಾಜಿ ಶಾಸಕ ಮನೋಹರ ಐನಾಪೂರ, ಜಿಲ್ಲಾ ಕುರುಬರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಮಲ್ಲಣ್ಣ ಶಿರಶ್ಯಾಡ, ಜಿ.ಪಂ‌. ಮಾಜಿ ಅಧ್ಯಕ್ಷೆ ಸುಜಾತಾ ಕಳ್ಳಿಮನಿ, ಜಿ.ಪಂ. ಮಾಜಿ ಉಪಾಧ್ಯಕ್ಷ ತಮ್ಮಣ್ಣ ಹಂಗರಗಿ, ಜೆಡಿಎಸ್ ಮುಖಂಡ ಬಿ.ಡಿ. ಪಾಟೀಲ, ರವಿ ಕಿತ್ತೂರ, ರಾಜು ಕಗ್ಗೋಡ, ರಾಜು ಬಿರಾದಾರ, ಚಂದ್ರಶೇಖರ ಬಗಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.