ವಿಜಯಪುರ: ಜಿಲ್ಲೆಯಲ್ಲಿ ಮುಂಗಾರಿನಲ್ಲಿ ಬಿತ್ತನೆ ಕಾರ್ಯ ಪ್ರಗತಿಯಲ್ಲಿದ್ದು, ಜುಲೈ 15ರ ವರೆಗೆ ತೊಗರಿ ಬಿತ್ತನೆಗೆ ಕಾಲಾವಕಾಶವಿದೆ. ಒಂದು ವೇಳೆ ಮಳೆ ಬಾರದೆ ಇದ್ದ ಸಂದರ್ಭದಲ್ಲಿ ಪರ್ಯಾಯ ಬೆಳೆಗಳನ್ನು ಬೆಳೆಯುವ ಕುರಿತು ರೈತರಲ್ಲಿ ಜಾಗೃತಿ ಮೂಡಿಸುವಂತೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಉಜ್ವಲ್ ಕುಮಾರ ಘೋಷ್ ಸೂಚಿಸಿದರು.
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ವಿವಿಧ ಅಧಿಕಾರಿಗಳೊಂದಿಗೆ ಬುಧವಾರ ನಡೆದ ಸಭೆಯಲ್ಲಿ ಅವರು ಮಾತನಾಡಿದರು.
ಜನವರಿಯಿಂದ ಜೂನ್ ವರೆಗೆ ಜಿಲ್ಲೆಯಲ್ಲಿ ಶೇ82 ರಷ್ಟು ಮಳೆಯಾಗಿದೆ. ಈ ವರ್ಷ ಏಪ್ರಿಲ್-ಮೇನಲ್ಲಿ ಶೇ 283 ರಷ್ಟು ಹೆಚ್ಚುವರಿ ಮಳೆಯಾಗಿದೆ. ಜಿಲ್ಲೆಯಲ್ಲಿ ಬಿತ್ತನೆ ಕಾರ್ಯ ನಡೆದಿದ್ದು, ಜುಲೈ 15ರ ವರೆಗೆ ತೊಗರಿ ಬಿತ್ತನೆಗೆ ಅವಕಾಶವಿದೆ. ಈ ಸಲ ಶೇ 100ರಷ್ಟು ಇಳುವರಿ ಅಂದಾಜಿಸಲಾಗಿದೆ ಎಂದು ತಿಳಿಸಿದರು.
ಎಲ್ಲ ಅಗತ್ಯ ಬಿತ್ತನೆ ಬೀಜ, ರಸಗೊಬ್ಬರಗಳನ್ನು ಸಮರ್ಪಕವಾಗಿ ದಾಸ್ತಾನಿಟ್ಟುಕೊಂಡು ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ಮಳೆ ಬಾರದೇ ಇದ್ದ ಸಂದರ್ಭದಲ್ಲಿ ಪಯಾರ್ಯವಾಗಿ ಮೆಕ್ಕೆಜೋಳ ಸೇರಿದಂತೆ ವಿವಿಧ ಬೆಳೆಗಳ ಕುರಿತು ರೈತರಲ್ಲಿ ವಿವಿಧ ಸಮೂಹ ಮಾಧ್ಯಮಗಳ ಮೂಲಕ ಜಾಗೃತಿ ಮೂಡಿಸಬೇಕು ಎಂದು ನುಡಿದರು.
ಜಿಲ್ಲೆಯಲ್ಲಿರುವ ರೈತ ಸಂಪರ್ಕ ಕೇಂದ್ರಗಳು ಸಮರ್ಪಕವಾಗಿ ನಿರ್ವಹಣೆಯಾಗಬೇಕು. ಜಿಲ್ಲೆಯಲ್ಲಿ ಮೇವು ಕೊರತೆಯಾಗದಂತೆ ನೋಡಿಕೊಳ್ಳಬೇಕು. ಯಾವುದೇ ರೈತರಿಗೆ ಬೀಜ-ರಸಗೊಬ್ಬರ ವಿತರಣೆಯಲ್ಲಿ ತೊಂದರೆಯಾಗದಂತೆ ನೋಡಿಕೊಳ್ಳುವಂತೆ ಅವರು ಸೂಚನೆ ನೀಡಿದರು.
ಮಳೆಗಾಲದ ಸಂದರ್ಭದಲ್ಲಿ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆ ಇರುವುದರಿಂದ ಮಲೀನ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಆಗಾಗ ಸ್ವಚ್ಛತೆಗೊಳಿಸುವುದು, ಫಾಗಿಂಗ್ ಸೇರಿದಂತೆ ಎಲ್ಲ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ವಹಿಸಬೇಕು ಎಂದು ಹೇಳಿದರು.
ಕಲುಷಿತ ನೀರು ಪೂರೈಕೆಯಾಗದಂತೆ ಜಾಗೃತಿ ವಹಿಸಬೇಕು. ನೀರು ಪರಿಕ್ಷಿಸಿದ ನಂತರವೇ ಸರಬರಾಜಿಗೆ ಕ್ರಮ ವಹಿಸಬೇಕು. ಶುದ್ಧ ಕುಡಿಯುವ ನೀರು ಪೂರೈಸಲು ಕ್ರಮ ವಹಿಸಬೇಕು ಎಂದು ತಿಳಿಸಿದರು.
ಜಿಲ್ಲೆಯಲ್ಲಿರುವ ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವಿವಿಧ ವಸತಿ ನಿಲಯಗಳಿಗೆ ಸಂಬಂಧಿಸಿದ ಅಧಿಕಾರಿಗಳು ಕಾಲ-ಕಾಲಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಸ್ವಚ್ಛತೆ, ಸಮರ್ಪಕ ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ಅಗತ್ಯ ಸೌಲಭ್ಯಗಳ ಕುರಿತು ಪರಿಶೀಲನೆ ನಡೆಸಬೇಕು. ಸಣ್ಣ ಪುಟ್ಟ ಯಾವುದೇ ದುರಸ್ತಿ ಕಾರ್ಯಗಳಿದ್ದಲ್ಲಿ ಕೂಡಲೇ ದುರಸ್ತಿ ಕಾರ್ಯ ಕೈಗೊಳ್ಳಬೇಕು ಎಂದು ಅವರು ಸೂಚನೆ ನೀಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಿಷಿ ಆನಂದ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.
Highlights - ಜಿಲ್ಲೆಯಲ್ಲಿ ವಾಡಿಕೆಯ ಶೇ 82ರಷ್ಟು ಮಳೆ ಬಿತ್ತನೆ ಬೀಜ, ರಸಗೊಬ್ಬರ ಕೊರತೆಯಾಗದಂತೆ ಕ್ರಮ ಮೇವು, ಕುಡಿಯುವ ನೀರು ಸಮರ್ಪಕ ಪೂರೈಕೆಗೆ ಸೂಚನೆ
Quote - ಹವಾಮಾನಕ್ಕೆ ಅನುಗುಣವಾಗಿ ಯಾವ ಬೆಳೆಗೆ ಯಾವ ಬೀಜಗಳನ್ನು ಬಳಸಿದ್ದಲ್ಲಿ ಅನುಕೂಲವಾಗಲಿದೆ ಎಂಬ ಕುರಿತು ವಿಜ್ಞಾನಿಗಳು ಪ್ರಾತ್ಯಕ್ಷಿಕೆ ಮೂಲಕ ರೈತರಿಗೆ ಅರಿವು ಮೂಡಿಸಬೇಕು – ಉಜ್ವಲ್ ಕುಮಾರ ಘೋಷ್ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ
Cut-off box - ಮಳೆಯಿಂದ 9 ಜನ ಸಾವು ವಿಜಯಪುರ: ಜಿಲ್ಲೆಯಲ್ಲಿ ಸಿಡಿಲು ಬಡಿದು ಪತ್ರಾಸ್ ಬಿದ್ದು ಸೇರಿದಂತೆ ಮಳೆಯಿಂದಾಗಿ 9 ಜನ ಸಾವನ್ನಪ್ಪಿದ್ದು ₹44 ಲಕ್ಷ ಪರಿಹಾರ ಒದಗಿಸಲಾಗಿದೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ತಿಳಿಸಿದರು. ಜಿಲ್ಲೆಯಲ್ಲಿ ಒಟ್ಟು 65 ಜಾನುವಾರುಗಳು ಸಾವನ್ನಪ್ಪಿದ್ದು ಸಣ್ಣ ಜಾನುವಾರುಗಳಿಗೆ ₹4 ಸಾವಿರ ಹಾಗೂ ದೊಡ್ಡ ಜಾನುವಾರುಗಳಿಗೆ ₹37 ಸಾವಿರ ದಂತೆ ₹9.42 ಲಕ್ಷ ಪರಿಹಾರ ಒದಗಿಸಲಾಗಿದೆ ಎಂದರು. ಜಿಲ್ಲೆಯಲ್ಲಿ ಮಳೆಯಿಂದ ಯಾವುದೇ ಪೂರ್ಣ ಮನೆಗಳು ಹಾನಿಯಾಗಿರುವುದಿಲ್ಲ. ಭಾಗಶ 61 ಮನೆಗಳಿಗೆ ಹಾನಿಯಾಗಿದ್ದು ಪಕ್ಕಾ ಮನೆಗಳಿಗೆ ₹6500 ಹಾಗೂ ಕಚ್ಚಾ ಮನೆಗಳಿಗೆ ₹ 4 ಸಾವಿರದಂತೆ ಪರಿಹಾರ ಒದಗಿಸಲಾಗಿದೆ ಎಂದು ಮಾಹಿತಿ ನೀಡಿದರು. ಜಿಲ್ಲೆಯಲ್ಲಿ 23 ವಾರಗಳ ಕಾಲ ಬೇಕಾಗುವಷ್ಟು ಮೇವು ದಾಸ್ತಾನವಿದೆ. ಯಾವುದೇ ಕೊರತೆ ಇಲ್ಲ ಎಂದು ಸಭೆಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.