ADVERTISEMENT

ಕೊಲ್ಹಾರದ ಉಪಾಶೆಪ್ಪ ಜಾತ್ರೆಯಲ್ಲಿ ಕೃಷಿ ಜಪ..!

ಸಾವಯವ ದೃಢೀಕರಣ, ಅರಣ್ಯ ಕೃಷಿ ಸಹಾಯಧನ, ಪ್ರೋತ್ಸಾಹಧನದ ಕೌಂಟರ್‌; ಆ.27ಕ್ಕೆ ಕೃಷಿಕರ ಜಾತ್ರೆ

ಡಿ.ಬಿ, ನಾಗರಾಜ
Published 25 ಆಗಸ್ಟ್ 2018, 17:14 IST
Last Updated 25 ಆಗಸ್ಟ್ 2018, 17:14 IST
ಕೊಲ್ಹಾರ ಪಟ್ಟಣದ ಉಪಾಶೆಪ್ಪ ದೇವರ ಜಾತ್ರೆ ಅಂಗವಾಗಿ ಶ್ರಾವಣದ ಮೂರನೇ ಸೋಮವಾರ (ಆ 27) ನಡೆಯಲಿರುವ ‘ರೈತರ ಜಾಗೃತಿ ಜಾತ್ರೆ ಹಾಗೂ ಕೃಷಿ ವಸ್ತು ಪ್ರದರ್ಶನಕ್ಕೆ’ ಶನಿವಾರ ನಡೆದ ಸಿದ್ಧತೆಯ ಚಿತ್ರಣ
ಕೊಲ್ಹಾರ ಪಟ್ಟಣದ ಉಪಾಶೆಪ್ಪ ದೇವರ ಜಾತ್ರೆ ಅಂಗವಾಗಿ ಶ್ರಾವಣದ ಮೂರನೇ ಸೋಮವಾರ (ಆ 27) ನಡೆಯಲಿರುವ ‘ರೈತರ ಜಾಗೃತಿ ಜಾತ್ರೆ ಹಾಗೂ ಕೃಷಿ ವಸ್ತು ಪ್ರದರ್ಶನಕ್ಕೆ’ ಶನಿವಾರ ನಡೆದ ಸಿದ್ಧತೆಯ ಚಿತ್ರಣ   

ಕೊಲ್ಹಾರ:‘ರೈತರಿಂದ ರೈತರಿಗಾಗಿ ರೈತರಿಗೋಸ್ಕರವೇ’ ಪಟ್ಟಣದಲ್ಲಿ ಉಪಾಶೆಪ್ಪ ದೇವರ ಜಾತ್ರೆ ಹೆಸರಿನಲ್ಲಿ, ಶ್ರಾವಣದ ಮೂರನೇ ಸೋಮವಾರ (ಆ 27) ನಡೆಯಲಿರುವ ‘ರೈತರ ಜಾಗೃತಿ ಜಾತ್ರೆ ಹಾಗೂ ಕೃಷಿ ವಸ್ತು ಪ್ರದರ್ಶನಕ್ಕೆ’ ಇದೀಗ ಎಂಟರ ಹರೆಯ.

ಕೊಲ್ಹಾರ ಸುತ್ತಮುತ್ತಲಿನ ಪ್ರಗತಿಪರ ರೈತರು, ಉಪಾಶೆಪ್ಪ ದೇವರ ಭಕ್ತರು ಒಟ್ಟಾಗಿ ನಡೆಸುವ ಕೃಷಿ ಮಹೋತ್ಸವ ಇದೀಗ ಜಿಲ್ಲೆಯೂ ಸೇರಿದಂತೆ ನೆರೆಹೊರೆಯ ಜಿಲ್ಲೆಗಳಲ್ಲೂ ಸದ್ದು ಮಾಡಿದೆ. ಹಲ ದಶಕಗಳಿಂದ ನಡೆದಿದ್ದ ದೇವರ ಜಾತ್ರೆಯನ್ನು ರೈತರ ಜಾತ್ರೆಯನ್ನಾಗಿ ಪರಿವರ್ತಿಸಿದ ಸಂಘಟಕರಿಗೆ ಪ್ರಶಂಸೆಯ ಸುರಿಮಳೆಯಾಗಿದೆ.

ಶ್ರಾವಣದ ಮೂರನೇ ಸೋಮವಾರ ಕೊಲ್ಹಾರ ಪಟ್ಟಣದ ಉಪಾಶೆಪ್ಪ ದೇಗುಲದ ಆವರಣದಲ್ಲಿ ನಡೆಯಲಿರುವ ಈ ‘ರೈತ ಜಾತ್ರೆ’ಯಲ್ಲಿ ಎರಡು ಸಾವಿರ ರೈತರು ಪಾಲ್ಗೊಳ್ಳುವ ನಿರೀಕ್ಷೆಯಿದೆ. ಜಿಲ್ಲೆಯ ವಿವಿಧೆಡೆಯ ಪ್ರಗತಿಪರ ರೈತರು ಸೇರಿದಂತೆ, ನೆರೆಯ ಬಾಗಲಕೋಟೆ ಜಿಲ್ಲೆಯ ರೈತರು ಜಾತ್ರೆಗೆ ಬರಲಿದ್ದಾರೆ ಎಂದು ಸಂಘಟಕ ಸಿದ್ದಪ್ಪ ದುಂಡಪ್ಪ ಬಾಲಗೊಂಡ ತಿಳಿಸಿದರು.

ADVERTISEMENT

‘ಜಾತ್ರೆಯ ಆವರಣದಲ್ಲಿ ಕೃಷಿ ಕುರಿತ ವಸ್ತು ಪ್ರದರ್ಶನ ನಡೆಯಲಿದೆ. ಇದಕ್ಕಾಗಿ 50 ಮಳಿಗೆ ಸಿದ್ಧಪಡಿಸಲಾಗಿದೆ. ಪ್ರತಿ ವರ್ಷದಂತೆ ಈ ಬಾರಿಯೂ ಕೃಷಿ, ತೋಟಗಾರಿಕೆ, ಅರಣ್ಯ, ಮೀನುಗಾರಿಕೆ, ಪಶು ಸಂಗೋಪನೆ ಸೇರಿದಂತೆ ರಾಜ್ಯ ಸರ್ಕಾರದ ಕೃಷಿ ಸಂಬಂಧಿತ 11 ಇಲಾಖೆಗಳು, ಬಾಗಲಕೋಟೆಯ ತೋಟಗಾರಿಕೆ ವಿಜ್ಞಾನ ವಿಶ್ವವಿದ್ಯಾಲಯ, ಧಾರವಾಡದ ಕೃಷಿ ವಿಶ್ವವಿದ್ಯಾಲಯ ಸಹ ತಮ್ಮ ಮಳಿಗೆ ತೆರೆದು ರೈತರಿಗೆ ಉಪಯುಕ್ತ ಮಾಹಿತಿ ನೀಡಲಿವೆ.

ಇದರ ಜತೆಗೆ ಪ್ರಗತಿಪರ ಕೃಷಿಕರು, ಕೃಷಿಯಲ್ಲಿ ಸಾಕಷ್ಟು ಸಾಧನೆಗೈದು ಕೃಷಿ ಪಂಡಿತ ಪ್ರಶಸ್ತಿ ಪಡೆದವರು, ಯಂತ್ರೋಪಕರಣ, ಕೃಷಿ ಪೂರಕ ಯಂತ್ರೋಪಕರಣ, ಟ್ರ್ಯಾಕ್ಟರ್‌ ಮಳಿಗೆ ಸೇರಿದಂತೆ ಸಾವಯವ ಕೃಷಿಕರ ಮಳಿಗೆಗಳು ಪ್ರಮುಖವಾಗಿ ಜಾತ್ರೆಯಲ್ಲಿ ಎಲ್ಲರನ್ನೂ ಸೂಜಿಗಲ್ಲಿನಂತೆ ತಮ್ಮತ್ತ ಆಕರ್ಷಿಸಲಿವೆ’ ಎಂದು ಹೇಳಿದರು.

ಸಾವಯವ ದೃಢೀಕರಣ:ಪ್ರತಿ ವರ್ಷವೂ ವಿಭಿನ್ನವಾಗಿ ಆಚರಣೆಗೊಳ್ಳುವ ಈ ‘ರೈತ ಜಾತ್ರೆ’ ಈ ವರ್ಷವೂ ಭಿನ್ನತೆ ಹೊಂದಿದೆ. ಈಗಾಗಲೇ ಬೆಂಗಳೂರಿನ ಫಲದಾಯಿ ಸಂಸ್ಥೆ ಜತೆ ಜಾತ್ರಾ ಸಮಿತಿ ಇದಕ್ಕಾಗಿ ಒಡಂಬಡಿಕೆ ಮಾಡಿಕೊಂಡಿದೆ. ಜಿಲ್ಲೆಯ 200 ಸಾವಯವ ರೈತರ ದೃಢೀಕರಣದ ಉದ್ದೇಶ ಹೊಂದಿರುವುದು ಈ ಬಾರಿಯ ವಿಶೇಷ.

ಅರಣ್ಯ ಕೃಷಿಕ ರಮೇಶ ದೇವೇಂದ್ರಪ್ಪ ಬಳೂಟಗಿ ಅರಣ್ಯ ಕೃಷಿಯ ಅವಕಾಶಗಳು ಮತ್ತು ಸವಾಲುಗಳ ಬಗ್ಗೆ, ಅಖಿಲ ಭಾರತ ಸಾವಯವ ಕೃಷಿ ದೃಢೀಕರಣ ಹಾಗೂ ಮಾರುಕಟ್ಟೆ ಸಲಹೆಗಾರ ಯೋಗೇಶ ಅಪ್ಪಾಜಯ್ಯ ವೈಜ್ಞಾನಿಕ, ವಾಣಿಜ್ಯಿಕರಣ ಮೂಲಕ ವ್ಯವಸ್ಥಿತ ದೃಢೀಕರಣ ಮಾಡಿಸಿಕೊಳ್ಳುವುದರ ಬಗ್ಗೆ ಉಪನ್ಯಾಸ ನೀಡುವರು.

ರಾಜೇಶ್ವರಿ ಪಾಟೀಲ ಕೃಷಿ ಸ್ವಾವಲಂಬನೆಗಾಗಿ ಮಹಿಳೆಯರಿಗೆ ಇರುವ ಅವಕಾಶಗಳ ಕುರಿತು ಚಿಂತನ–-ಮಂಥನ ನಡೆಸುವರು. ಎಂ.ವೈ.ಕಟ್ಟಿ ಅಂಗಾಂಗ ಕೃಷಿಯಲ್ಲಿ ಕಬ್ಬು, ಬಾಳೆ ಉತ್ಪಾದನೆ, ನಿರ್ವಹಣೆ ಮತ್ತು ಅಧಿಕ ಇಳುವರಿ ಪಡೆಯುವ ಬಗ್ಗೆ ಉಪನ್ಯಾಸ ನೀಡುವರು ಎಂದು ಜಾತ್ರಾ ಸಮಿತಿಯ ಪದಾಧಿಕಾರಿಗಳಲ್ಲೊಬ್ಬರಾದ ಸಿದ್ದಲಿಂಗಪ್ಪ ಪೂಜಾರಿ ಹೇಳಿದರು.

ರೈತ ಮಿತ್ರರಿಗೆ ಸೂಚನೆ

ಸಾವಯವ ದೃಢೀಕರಣ ಅಪೇಕ್ಷಿಸುವಂತಹ ರೈತರು ಜಾತ್ರೆಗೆ ಬರುವಾಗ ತಮ್ಮ ಜಮೀನಿನ ಉತಾರೆ, ಆಧಾರ್‌ ಕಾರ್ಡ್‌, ಭಾವಚಿತ್ರ ತರಬೇಕು. ಅರಣ್ಯ ಕೃಷಿ ಸಹಾಯಧನಕ್ಕಾಗಿ ಆಸಕ್ತ ರೈತರು ಉತಾರೆ, ಆಧಾರ್‌ಕಾರ್ಡ್‌, ಭಾವಚಿತ್ರ, ಬ್ಯಾಂಕ್‌ ಪಾಸ್‌ಬುಕ್‌ ತರಬೇಕು.

‘ಮಹಾಗಣಿ’ ಅರಣ್ಯ ಸಸಿಗಳನ್ನು ನಾಟಿ ಮಾಡಿದಂತಹ ರೈತರು, ಪ್ರೋತ್ಸಾಹಧನಕ್ಕಾಗಿ ಅರ್ಜಿ ಭರ್ತಿ ಮಾಡಲು ಆಸಕ್ತಿಯುಳ್ಳವರು ಉತಾರೆ, ಆಧಾರ್‌ಕಾರ್ಡ್‌, ಭಾವಚಿತ್ರ, ಬ್ಯಾಂಕ್‌ ಪಾಸ್‌ಬುಕ್‌ ಬ್ಯಾಂಕ್‌ ಜತೆಗೆ ₨ 500 ಮೌಲ್ಯದ ಇ ಸ್ಟಾಂಪ್‌- ಒದಗಿಸಿ, ಸರ್ಕಾರಿ ಸೌಲಭ್ಯಗಳನ್ನು ಪಡೆಯಬಹುದು. ಇದಕ್ಕೆ ಜಾತ್ರಾ ಸಮಿತಿ ಸಹಕಾರ ಒದಗಿಸಲಿದೆ ಎಂದು ಪರಮಾನಂದ ಕಮತಗಿ, ಅಲ್ಲೀಸಾಬ್‌ ಪಕಾಲಿ ಮಾಹಿತಿ ನೀಡಿದರು.

ರೈತರದ್ದೇ ಖರ್ಚು..!

‘ಜಾತ್ರಾ ಮಹೋತ್ಸವಕ್ಕೆ ₨ 5 ಲಕ್ಷದ ಆಸುಪಾಸು ಖರ್ಚಾಗಲಿದೆ. ಸರ್ಕಾರದ ಯಾವ ನೆರವು ಪಡೆಯಲ್ಲ. ದೇಗುಲ ಸಮಿತಿ ಪ್ರಮುಖರು ಸೇರಿದಂತೆ ಜಾತ್ರೆಯಲ್ಲಿ ಪಾಲ್ಗೊಳ್ಳುವ ಭಕ್ತರು, ರೈತರೇ ದೇಣಿಗೆ ನೀಡುತ್ತಾರೆ. ಯಾರನ್ನೂ ನಾವು ದುಡ್ಡು ಕೊಡಿ ಅಂತ ಕೇಳಲ್ಲ. ರೈತರೇ ಮುಂದೆ ಬಂದು ದುಡ್ಡು ಕೊಟ್ಟು ತಮ್ಮ ಹೆಸರು ಬರೆಸಲು ಮುಗಿ ಬೀಳುತ್ತಾರೆ’ ಎಂದು ಸಿದ್ದು ಬಾಲಗೊಂಡ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.