ADVERTISEMENT

ಶೌಚಾಲಯಕ್ಕೂ ಬಂತು ‘ಎಐ’: ವಿಜಯಪುರ ಜಿಲ್ಲೆಯ 21 ಸರ್ಕಾರಿ ಶಾಲೆಗಳ ಆಯ್ಕೆ

ಬಸವರಾಜ ಸಂಪಳ್ಳಿ
Published 6 ಫೆಬ್ರುವರಿ 2025, 23:50 IST
Last Updated 6 ಫೆಬ್ರುವರಿ 2025, 23:50 IST
   

ವಿಜಯಪುರ: ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಇರುವಂತಹ ಎಐ ತಂತ್ರಜ್ಞಾನ ಆಧಾರಿತ ಶೌಚಾಲಯಗಳ ಮಾದರಿಯಲ್ಲಿ ಜಿಲ್ಲೆಯ ಆಯ್ದ ಸರ್ಕಾರಿ ಶಾಲೆಗಳು ಸೇರಿದಂತೆ ವಿಶ್ವವಿದ್ಯಾಲಯ, ಬಸ್‌ ನಿಲ್ದಾಣ ಮತ್ತು ತಹಶೀಲ್ದಾರ್‌ ಕಚೇರಿ ಆವರಣದಲ್ಲಿ ನವದೆಹಲಿಯ ಲಾಡ್ಲಿ ಫೌಂಡೇಶನ್‌ ಟ್ರಸ್ಟ್‌ ನಿರ್ಮಿಸುತ್ತಿದೆ.

ಜಿಲ್ಲೆಯಲ್ಲಿ ಶೌಚಾಲಯಗಳೇ ಇಲ್ಲದ 21 ಸರ್ಕಾರಿ ಶಾಲೆಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಜೊತೆಗೆ ತಿಕೋಟಾ ಬಸ್‌ ನಿಲ್ದಾಣ, ಬಸವನ ಬಾಗೇವಾಡಿ ತಹಶೀಲ್ದಾರ್‌ ಕಚೇರಿ ಹಾಗೂ ಕರ್ನಾಟಕ
ರಾಜ್ಯ ಅಕ್ಕಮಹಾದೇವಿ ವಿಶ್ವವಿದ್ಯಾಲಯ ಸೇರಿದಂತೆ ಒಟ್ಟು 24 ಎಐ ತಂತ್ರಜ್ಞಾನ ಆಧಾರಿತ ಹೈಟೆಕ್‌ ಶೌಚಾಲಯಗಳನ್ನು ₹3.5 ಕೋಟಿ ಸಿಎಸ್‌ಆರ್‌ ಅನುದಾನದಲ್ಲಿ ನಿರ್ಮಾಣ ಮಾಡಲಾಗುತ್ತಿದೆ.

ತಲಾ ₹12 ಲಕ್ಷದಿಂದ ₹13 ಲಕ್ಷ ವೆಚ್ಚದಲ್ಲಿ ಎಐ ತಂತ್ರಜ್ಞಾನದ ಹೈಟೆಕ್‌ ಶೌಚಾಲಯ ನಿರ್ಮಿಸಲಾಗುತ್ತಿದೆ. ಈ ಶೌಚಾಲಯಗಳಲ್ಲಿ ವಿದ್ಯಾರ್ಥಿನಿಯರು, ಮಹಿಳೆಯರ ಅನುಕೂಲಕ್ಕಾಗಿ ಪ್ಯಾಡ್‌ ವೆಂಡಿಂಗ್‌ ಮಷಿನ್‌, ಪ್ಯಾಡ್‌ ಇನ್‌ಸಿನರೇಟರ್‌ ಮಷಿನ್‌, ಸ್ಮೋಕ್‌ ಕಂಟ್ರೋಲ್‌ ಮಷಿನ್‌, ಏರ್‌ ಪ್ಯೂರಿಫಯರ್‌, ಸ್ಮೆಲ್ ಡಿಟೆಕ್ಟರ್‌ ಮಷಿನ್‌ ಹಾಗೂ ಡಿಆರ್‌ಡಿಒ ನಿರ್ಮಿತ ಬಯೋ ಡೈಜೆಸ್ಟರ್‌ಗಳನ್ನು ಅಳವಡಿಸಲಾಗಿದೆ.

ADVERTISEMENT

ಶೌಚಾಲಯವನ್ನು ಜನರು ಬಳಸಿ ಹೊರಬಂದ ತಕ್ಷಣವೇ ಆಟೋ ಜೆಟ್‌ಗಳ ಮೂಲಕ ಸ್ವಚ್ಛತಾ ಕಾರ್ಯ ನಡೆಯಲಿದೆ. ಶೌಚಾಲಯದಲ್ಲಿ ವಾಸನೆ ಬಂದರೆ ಸ್ಮೆಲ್‌ ಡಿಟೆಕ್ಟರ್‌ ಮಷಿನ್‌ ತಕ್ಷಣವೇ ಅಲಾರ್ಮ್‌ ಮೊಳಗಿಸುತ್ತದೆ. ಸಂಬಂಧಿಸಿದವರ ಮೊಬೈಲ್ ಸಂಖ್ಯೆಗೆ ಸ್ವಚ್ಛತೆ ಲೋಪದ ಬಗ್ಗೆ ಮಾಹಿತಿ ರವಾನಿಸುತ್ತದೆ.

‘ಲಾಡ್ಲಿ ಫೌಂಡೇಶನ್‌ ಟ್ರಸ್ಟ್‌ ದೇಶದಲ್ಲಿ ಪ್ರಥಮ ಬಾರಿಗೆ ವಿಜಯಪುರ ಜಿಲ್ಲೆಯನ್ನು ಪೈಲಟ್‌ ಪ್ರಾಜೆಕ್ಟ್‌ ಜಿಲ್ಲೆಯನ್ನಾಗಿ ಆಯ್ಕೆ ಮಾಡಿಕೊಂಡು, ಎಐ ತಂತ್ರಜ್ಞಾನ ಆಧಾರಿತ ಶೌಚಾಲಯ ನಿರ್ಮಾಣ ಮಾಡುತ್ತಿದೆ’ ಎಂದು  ಟ್ರಸ್ಟ್‌ನ ನಿರ್ದೇಶಕ ಹಾಗೂ ಸಲಹೆಗಾರ ಜಾವಿದ್‌ ಜಮಾದಾರ ‘ಪ್ರಜಾವಾಣಿ’ಗೆ ತಿಳಿಸಿದರು. 

‘ಪ್ರಥಮ ಹಂತದಲ್ಲಿ ಒಂಬತ್ತು ಸರ್ಕಾರಿ ಶಾಲೆಗಳಲ್ಲಿ ಮತ್ತು ಮೂರು ಸಾರ್ವಜನಿಕ ಸ್ಥಳಗಳಲ್ಲಿ ಸಾಮೂಹಿಕ ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಸಾರ್ವಜನಿಕ ಬಳಕೆಗೆ ಶೀಘ್ರ ಒದಗಿಸ ಲಾಗುವುದು. ಇನ್ನುಳಿದಂತೆ 12 ಸರ್ಕಾರಿ ಶಾಲೆಗಳ ಶೌಚಾಲಯಗಳನ್ನು ನವೀಕರಿಸುವ ಕಾರ್ಯ ಕೈಗೊಳ್ಳಲಾಗಿದ್ದು, ಅವುಗಳಲ್ಲೂ ಎಐ ತಂತ್ರಜ್ಞಾನ ಅಳವಡಿಕೆ ಮಾಡಲಾಗುವುದು’ ಎಂದರು.

‘ಈ ಶೌಚಾಲಯಗಳನ್ನು ಹೇಗೆ ಬಳಸಬೇಕು, ಹೇಗೆ ನಿರ್ವಹಣೆ ಮಾಡಬೇಕು, ಸ್ವಚ್ಛತೆ ಹೇಗೆ ಕಾಪಾಡಬೇಕು ಎಂಬುದರ ಕುರಿತು ಶಾಲಾ ಮಕ್ಕಳಿಗೆ, ಎಸ್‌ಡಿಎಂಸಿ ಅಧ್ಯಕ್ಷ, ಸದಸ್ಯರಿಗೆ, ಶಿಕ್ಷಕರಿಗೆ ತರಬೇತಿ ನೀಡಿ, ಜಾಗೃತಿ ಮೂಡಿಸಲಾಗಿದೆ. ಶೌಚಾಲಯದಲ್ಲಿ ಸ್ವಚ್ಛತೆ ಇಲ್ಲದೇ ಇದ್ದರೆ  ನನಗೆ ಹಾಗೂ ಜಿಲ್ಲಾಧಿಕಾರಿ, ಲಾಡ್ಲಿ ಫೌಂಡೇಶನ್‌ನ ಕೇಂದ್ರ ಕಚೇರಿಗೆ ಸಂದೇಶ ಬರಲಿದೆ. ತಕ್ಷಣ ನಾವು ಸಂಬಂಧಿಸಿದ ಶಾಲೆಯ ಮುಖ್ಯ ಶಿಕ್ಷಕರಿಗೆ ಸ್ವಚ್ಛತೆ ಕೈಗೊಳ್ಳಲು ಸೂಚಿಸುತ್ತೇವೆ’ ಎಂದರು.

‘ಡಿಆರ್‌ಡಿಒ ಸಿದ್ಧಪಡಿಸಿರುವ ಬಯೋ ಡೈಜೆಸ್ಟರ್‌ ಅನ್ನು ಶೌಚಾಲಯಗಳ ಹೊರಭಾಗದಲ್ಲಿ ಕೂರಿಸಲಾಗಿದೆ. ಈ ಬಯೋ ಡೈಜಸ್ಟೆರ್‌ ಶೌಚಾಲಯದ ಮಲಿನ ನೀರನ್ನು ಶುದ್ಧೀಕರಿಸಿ ಹೊರಹಾಕಲಿದೆ. ಈ ನೀರನ್ನು ಶಾಲೆಯ ಉದ್ಯಾನದಲ್ಲಿರುವ ಗಿಡ, ಮರಗಳಿಗೆ ಬಳಸಬಹುದಾಗಿದೆ’ ಎಂದು ತಿಳಿಸಿದರು.

ಶೈಕ್ಷಣಿಕ ಕಿಟ್‌ ವಿತರಣೆ:

‘ಲಾಡ್ಲಿ ಫೌಂಡೇಶನ್‌ ಟ್ರಸ್ಟ್‌ನಿಂದ ಜಿಲ್ಲೆಯ ಶಾಲಾ ವಿದ್ಯಾರ್ಥಿಗಳಿಗೆ ಬ್ಯಾಗ್‌, ಕಂಪಾಸ್‌ ಬಾಕ್ಸ್‌, ಪೆನ್‌, ಪೆನ್ಸಿಲ್‌, ಸ್ವಚ್ಛತಾ ಕೈಪಿಡಿ ಒಳಗೊಂಡ 5,600 ಶೈಕ್ಷಣಿಕ ಕಿಟ್‌ಗಳನ್ನು ಹಂಚಲಾಗಿದೆ’ ಎಂದರು.

ದೇಶದಲ್ಲೇ ಪ್ರಥಮ ಬಾರಿಗೆ ವಿಜಯಪುರದಲ್ಲಿ ಪೈಲಟ್‌ ಪ್ರಾಜೆಕ್ಟ್‌ನಡಿ ಸರ್ಕಾರಿ ಶಾಲೆಗಳಲ್ಲಿ ಎಐ ತಂತ್ರಜ್ಞಾನ ಆಧರಿತ ಶೌಚಾಲಯ ನಿರ್ಮಾಣ ಮಾಡಲಾಗುತ್ತಿದೆ.
ಜಾವಿದ್‌ ಜಮಾದಾರ, ನಿರ್ದೇಶಕ, ಲಾಡ್ಲಿ ಫೌಂಡೇಶನ್‌ ಟ್ರಸ್ಟ್‌ 
ಶೌಚಾಲಯ ಕೊರತೆ ಇತ್ತು. ‘ಲಾಡ್ಲಿ’ ಹೈಟೆಕ್‌ ಶೌಚಾಲಯ ನಿರ್ಮಾಣ ಮಾಡಿಕೊಟ್ಟಿರುವುದರಿಂದ ನಮ್ಮ ವಿದ್ಯಾರ್ಥಿನಿಯರಿಗೆ ಬಹಳ ಅನುಕೂಲವಾಗಿದೆ.
ವಿದ್ಯಾವತಿ ಸವನಹಳ್ಳಿ, ಮುಖ್ಯ ಶಿಕ್ಷಕಿ, ಸರ್ಕಾರಿ ಕನ್ನಡ ಹೆಣ್ಣು ಮಕ್ಕಳ ಮಾದರಿ ಪ್ರಾಥಮಿಕ ಶಾಲೆ, ತಿಕೋಟಾ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.