ADVERTISEMENT

ಆಲಮಟ್ಟಿ: ಈ ಬೇಸಿಗೆಗೂ ಇಲ್ಲ ‘ಅಮ್ಯೂಸ್ಮೆಂಟ್’

ಕಾಮಗಾರಿ ಬಹುತೇಕ ಪೂರ್ಣಗೊಂಡರೂ ಪ್ರವಾಸಿಗರಿಗೆ ಮುಕ್ತವಾಗದ ಪಾರ್ಕ್

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2024, 5:10 IST
Last Updated 14 ಮಾರ್ಚ್ 2024, 5:10 IST
ಆಲಮಟ್ಟಿಯಲ್ಲಿ ನಿರ್ಮಾಣಗೊಂಡಿರುವ ವಾಟರ್ ಅಮ್ಯೂಸ್ಮೆಂಟ್ ಪಾರ್ಕ್
ಆಲಮಟ್ಟಿಯಲ್ಲಿ ನಿರ್ಮಾಣಗೊಂಡಿರುವ ವಾಟರ್ ಅಮ್ಯೂಸ್ಮೆಂಟ್ ಪಾರ್ಕ್   

ಆಲಮಟ್ಟಿ: ಇಲ್ಲಿಯ ಹೆಲಿಪ್ಯಾಡ್ ಹಿಂಬದಿ ಕೆಬಿಜೆಎನ್‌ಎಲ್ ವತಿಯಿಂದ ಎರಡು ಎಕರೆಯಲ್ಲಿ ನಿರ್ಮಾಣಗೊಂಡಿರುವ ವಾಟರ್ ಅಮ್ಯೂಸ್ಮೆಂಟ್ ಪಾರ್ಕ್ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದರೂ ಈ ಬೇಸಿಗೆಯಲ್ಲಿಯೂ ಕಾರ್ಯಾರಂಭ ಮಾಡುವ ಲಕ್ಷಣಗಳಿಲ್ಲ.

2021ರಲ್ಲಿಯೇ ಕಾಮಗಾರಿ ಆರಂಭಗೊಂಡಿದೆ. ಕಳೆದ ಜನವರಿಯಲ್ಲಿಯೇ ಬಹುತೇಕ ಕಾಮಗಾರಿ ಪೂರ್ಣಗೊಂಡಿವೆ. ಪಾರ್ಕ್‌ಗೆ ಸಂಪರ್ಕ ರಸ್ತೆಯ ನಿರ್ಮಾಣ ಕೆಲವು ಮೀಟರ್‌ಗಳಷ್ಟು ಮಾತ್ರ ಬಾಕಿಯಿದೆ.

ಕೆಬಿಜೆಎನ್ಎಲ್‌ನ ಹಿರಿಯ ಅಧಿಕಾರಿಗಳ ಇಚ್ಛಾಶಕ್ತಿಯ ಕೊರತೆಯ ಕಾರಣ ಪಾರ್ಕ್ ಈವರೆಗೂ ಸಾರ್ವಜನಿಕರಿಗೆ ಮುಕ್ತವಾಗಿಲ್ಲ ಎಂಬುದು ಸಾರ್ವಜನಿಕರ ಆರೋಪ.

ADVERTISEMENT

ಬೇಸಿಗೆಯ ರಜೆಯಲ್ಲಿ ಆಲಮಟ್ಟಿಗೆ ಬರುವ ಪ್ರವಾಸಿಗರ ಸಂಖ್ಯೆಯೂ ಅಧಿಕ. ಬೇಸಿಗೆಯಲ್ಲಿ ವಾಟರ್ ಅಮ್ಯೂಸ್ಮೆಂಟ್ ಪಾರ್ಕ್‌ಗೆ ಬೇಡಿಕೆಯೂ ಹೆಚ್ಚು. ಮಕ್ಕಳಿಗೆ ಹೆಚ್ಚು ಇಷ್ಟವಾಗುತ್ತದೆ. ಆದರೆ ಸದ್ಯದಲ್ಲೇ ಲೋಕಸಭಾ ಚುನಾವಣೆ ನೀತಿ ಸಂಹಿತೆ ಜಾರಿಯಾಗಲಿದ್ದು, ಉದ್ಘಾಟನೆ ಮತ್ತಷ್ಟು ವಿಳಂಬವಾಗಲಿದೆ ಎಂದು ನಿರೀಕ್ಷಿಸಲಾಗಿದೆ.

‘ಕೆಬಿಜೆಎನ್ಎಲ್ ಅಧಿಕಾರಿಗಳ ನಿರಾಸಕ್ತಿಯಿಂದಾಗಿ ವಾಟರ್ ಪಾರ್ಕ್ ಕಾಮಗಾರಿ ಪೂರ್ಣಗೊಂಡಿದ್ದರೂ ಇನ್ನೂ ಆರಂಭಿಸಿಲ್ಲ. ಗುತ್ತಿಗೆದಾರ ಒಂದೇ ವರ್ಷದಲ್ಲಿ ಕಾಮಗಾರಿ ಪೂರ್ಣಗೊಳಿಸಬೇಕಿತ್ತು. ಕಾಮಗಾರಿ ಆರಂಭಗೊಂಡು ಮೂರು ವರ್ಷ ಕಳೆದಿವೆ. ಅಲ್ಲಿ ಯಾವುದೇ ಕಾಮಗಾರಿ ಬಾಕಿಯಿಲ್ಲ. ಅಧಿಕಾರಿಗಳು ತಕ್ಷಣವೇ ವಾಟರ್ ಪಾರ್ಕ್ ಆರಂಭಿಸಲು ಕ್ರಮ ಕೈಗೊಳ್ಳಬೇಕು’ ಎಂದು ಆಲಮಟ್ಟಿ ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ಮಂಜುನಾಥ ಹಿರೇಮಠ ಆಗ್ರಹಿಸಿದ್ದಾರೆ.

₹9.45 ಕೋಟಿ ವೆಚ್ಚ: ಅಮ್ಯೂಸ್ಮೆಂಟ್ ಪಾರ್ಕ್ ಸಿವಿಲ್ ಕಾಮಗಾರಿಗಾಗಿ ₹4.65 ಕೋಟಿ ಹಾಗೂ ಅದರೊಳಗಿನ ವಾಟರ್ ಸ್ಲೈಡ್ಸ್ ಉಪಕರಣಗಳ ಅಳವಡಿಕೆಗೆ ₹4.8 ಕೋಟಿ ಸೇರಿ ಒಟ್ಟಾರೆ ₹9.45 ಕೋಟಿ ವೆಚ್ಚವಾಗಿದೆ. ಈಗಾಗಲೇ ಸ್ಲೈಡಿಂಗ್‌ಗಳ ಎಲ್ಲ ರೀತಿಯ ಪ್ರಯೋಗಗಳು ಪೂರ್ಣಗೊಂಡಿವೆ.

9 ಮೀ. ಎತ್ತರದ ಸ್ಲೈಡ್ಸ್: ಚಿಕ್ಕಮಕ್ಕಳಿಗೆ, ಕುಟುಂಬದವರಿಗೆ, ಪುರುಷರಿಗೆ, ಮಹಿಳೆಯರಿಗೆ, ಎಲ್ಲರಿಗೆ ಹೀಗೆ ಐದು ವಿಭಾಗಗಳಲ್ಲಿ ಸ್ಲೈಡಿಂಗ್‌ಗಳಿವೆ. ವಿವಿಧ ಜಲಕ್ರೀಡೆಗಳ ಮೈದಾನ, ರೇನ್, ವೇವ್ ಪಾಂಡ್, ಲೇಜಿ ರಿವರ್, ವಾಟರ್ ಸ್ಲೈಡ್ಸ್ ಇವೆ. ಐದು ರೀತಿಯ ಪಾಂಡ್ ನಿರ್ಮಿಸಲಾಗಿದ್ದು, ಅದರೊಳಗೆ ಟ್ಯಾಂಕ್ ನಿರ್ಮಿಸಲಾಗಿದೆ.

9 ಮೀ. ಎತ್ತರದಿಂದ ನೀರಿನೊಂದಿಗೆ ಜಾರುವ 150 ಮೀಟರ್ ಉದ್ದದ ಸ್ಲೈಡಿಂಗ್, 6 ಮೀಟರ್ ಎತ್ತರದ 90 ಮೀಟರ್ ಉದ್ದದ ಸ್ಲೈಡಿಂಗ್‌ಗಳು ಇವೆ.

ಆಲಮಟ್ಟಿಯಲ್ಲಿ ನಿರ್ಮಾಣಗೊಂಡಿರುವ ವಾಟರ್ ಅಮ್ಯೂಸ್ಮೆಂಟ್ ಪಾರ್ಕ್
ಆಲಮಟ್ಟಿಯಲ್ಲಿ ನಿರ್ಮಾಣಗೊಂಡಿರುವ ವಾಟರ್ ಅಮ್ಯೂಸ್ಮೆಂಟ್ ಪಾರ್ಕ್

ಇನ್ನೂ ಕೆಲವು ಕಾಮಗಾರಿ ಬಾಕಿಯಿದೆ. ಜೂನ್ ವೇಳೆಗೆ ವಾಟರ್ ಪಾರ್ಕ್ ಸಾರ್ವಜನಿಕರಿಗೆ ಮುಕ್ತವಾಗುವ ನಿರೀಕ್ಷೆಯಿದೆ

-ಎಚ್.ಎನ್. ಶ್ರೀನಿವಾಸ ಮುಖ್ಯ ಎಂಜಿನಿಯರ್ ಆಲಮಟ್ಟಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.