
ಆಲಮಟ್ಟಿ: ‘ಫೆಬ್ರುವರಿ ತಿಂಗಳಲ್ಲಿಯೇ ಆಲಮಟ್ಟಿ ಅಮ್ಯೂಸ್‌ಮೆಂಟ್ ಪಾರ್ಕ್‌ಗೆ ಚಾಲನೆ ನೀಡಿ, ಜಲಕ್ರೀಡಾ ಚಟುವಟಿಕೆಗಳಿಗೂ ಆದ್ಯತೆ ನೀಡಲಾಗುವುದು’ ಎಂದು ಜವಳಿ, ಎಪಿಎಂಸಿ ಹಾಗೂ ಸಕ್ಕರೆ ಸಚಿವ ಶಿವಾನಂದ ಪಾಟೀಲ ಹೇಳಿದರು.
ಆಲಮಟ್ಟಿಯ ರಾಕ್ ಉದ್ಯಾನದ ಸಿಲ್ವರ್ ಲೇಕ್‌ನಲ್ಲಿ ದೋಣಿ ವಿಹಾರಕ್ಕೆ ಶನಿವಾರ ಮರು ಚಾಲನೆ ನೀಡಿ ಅವರು ಮಾತನಾಡಿದರು.
‘10 ವರ್ಷಗಳಿಂದ ಬಂದಾಗಿದ್ದ ದೋಣಿ ವಿಹಾರಕ್ಕೆ ಇದ್ದ ತೊಡಕು ನಿವಾರಿಸಿ ಚಾಲನೆ ನೀಡಲಾಗಿದೆ. ಪ್ರತಿಯೊಬ್ಬರಿಗೂ ₹50 ದಿಂದ ₹100 ರೂ ವರೆಗೆ ಪ್ರವೇಶ ಶುಲ್ಕ ನಿಗದಿಗೊಳಿಸಲಾಗಿದೆ’ ಎಂದರು.
‘ಮೈಸೂರಿನ ಕೆಆರ್‌ಎಸ್ ಬಿಟ್ಟರೇ ಉತ್ತರಕರ್ನಾಟಕದ ಏಕೈಕ ಪ್ರವಾಸಿ ತಾಣ ಆಲಮಟ್ಟಿ, ಇಲ್ಲಿ ಮನೋರಂಜನೆಯ ಜತೆಗೆ ವಿಜ್ಞಾನ ಪಾರ್ಕ್ ಕೂಡಾ ಇದ್ದು, ಇದರಿಂದ ಮಕ್ಕಳ ಶೈಕ್ಷಣಿಕ ಪ್ರವಾಸಕ್ಕೂ ಅನುಕೂಲವಾಗಿದೆ. ಈಗಿರುವ ಉದ್ಯಾನಗಳ ನಿರ್ವಹಣೆಯ ಜತೆಗೆ ಇನ್ನಷ್ಟು ಹೆಚ್ಚಿನ ತಾಣಗಳನ್ನು ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ’ ಎಂದು ತಿಳಿಸಿದರು.
ಮೀನು ಮರಿ ಉತ್ಪಾದನಾ ಕೇಂದ್ರ ಆರಂಭ: ‘ಆಲಮಟ್ಟಿಯಲ್ಲಿ ಮೀನುಗಾರಿಕೆ ಕಾಲೇಜು ಆರಂಭಿಸಿ ಮೀನುಗಾರರಿಗೆ ತರಬೇತಿ ನೀಡುವ ಕುರಿತು 2023-24ರ ಬಜೆಟ್‌ನಲ್ಲಿ ಘೋಷಿಸಿ ಮಂಜೂರಾತಿ ನೀಡಲಾಗಿತ್ತು. ಈಗ ಅದರ ಭಾಗವಾಗಿ ಆಲಮಟ್ಟಿಯ ಕೃಷ್ಣಾ ನದಿ ತೀರದಲ್ಲಿ ಮೀನು ಮರಿ ಉತ್ಪಾದನಾ ಕೇಂದ್ರ ಆರಂಭಿಸಲು ಕ್ರಮ ಕೈಗೊಳ್ಳಲಾಗಿದೆ. ಶೀಘ್ರವೇ ಈ ಕೇಂದ್ರ ಆರಂಭಗೊಳ್ಳಲಿದೆ’ ಎಂದರು.
ಕೋಟಿ ವೃಕ್ಷ ಅಭಿಯಾನ: ‘ಕೋಟಿ ವೃಕ್ಷ ಅಭಿಯಾನದಲ್ಲಿ ಪ್ರತಿ ವರ್ಷ 10 ಲಕ್ಷ ಸಸಿಗಳನ್ನು ಆಲಮಟ್ಟಿಯ ವಿವಿಧ ನರ್ಸರಿಗಳಲ್ಲಿ ಬೆಳೆಸುವ ಕಾರ್ಯ ಕಳೆದ ಎರಡು ವರ್ಷಗಳಿಂದ ಸ್ಥಗಿತಗೊಂಡಿದ್ದು, ಅದನ್ನು ಪುನಃ ಆರಂಭಿಸಲು ಬದ್ಧನಾಗಿದ್ದೇನೆ’ ಎಂದು ಪಾಟೀಲ ಭರವಸೆ ನೀಡಿದರು.
ರಾಜ್ಯಪಾಲರು ಭಾಷಣ ಮಾಡಿದಿರುವುದು ದೇಶದ ಮರ್ಯಾದೆ: ‘ವಿಧಾನ ಮಂಡಲ ಅಧಿವೇಶನದಲ್ಲಿ ಸಂಪ್ರದಾಯದಂತೆ ರಾಜ್ಯ ಸರ್ಕಾರದ ಮುಂದಾಲೋಚನೆಯನ್ನು ಓದುವುದನ್ನು ಬಿಟ್ಟು, ಭಾಷಣವನ್ನು ಮೊಟಕುಗೊಳಿಸಿ, ರಾಷ್ಟ್ರಗೀತೆ ಹಾಡುವವರೆಗೂ ನಿಲ್ಲದೇ ಹೋರಹೋಗಿದ್ದು, ಸಂವಿಧಾನಕ್ಕೆ ಬಗೆದ ಅಪಚಾರ. ಇದರಿಂದ ರಾಷ್ಟ್ರದ ಮರ್ಯಾದೆ ಕಡಿಮೆಯಾಗಿದೆ. ಈಗ ಇದೇ ಕ್ರಮ ರಾಜ್ಯದಲ್ಲಿಯೂ ಆರಂಭಗೊಂಡಿದೆ’ ಎಂದು ರಾಜ್ಯಪಾಲರ ನಡೆಯನ್ನು ಸಚಿವ ಶಿವಾನಂದ ಪಾಟೀಲ ಖಂಡಿಸಿದರು. ‘ರಾಜ್ಯಪಾಲರು ಪ್ರಜಾಪ್ರಭುತ್ವದ ಮೌಲ್ಯವನ್ನು ಎತ್ತಿಹಿಡಿಬೇಕಿದೆ’ ಎಂದರು.
ಗುಜರಾತ ವ್ಯಾಪಾರಿಯಂತೆ ಮೋದಿ ವರ್ತನೆ: ‘ಕೇಂದ್ರ ಸರ್ಕಾರ ಶೇ 90 ರಷ್ಟು ಅನುದಾನ ನೀಡುವ ನಾನಾ ಯೋಜನೆಗಳನ್ನು ಮೋದಿ ರದ್ದುಗೊಳಿಸಿದರು. ಪ್ರತಿ ಯೋಜನೆಗೂ ರಾಜ್ಯದ ಪಾಲನ್ನು ಹೆಚ್ಚಿಸಿದರು. ಆದರೆ ಕೇಂದ್ರಕ್ಕೆ ಹೆಚ್ಚು ತೆರಿಗೆ ಹಣ ಕಟ್ಟುವುದು ನಮ್ಮ ರಾಜ್ಯ. ನಮ್ಮ ಹಣವನ್ನೇ ನಮಗೆ ನೀಡುತ್ತಿಲ್ಲ. ಒಟ್ಟಾರೇ ಗುಜರಾತ್ ವ್ಯಾಪಾರಿಗಳಂತೆ ಮೋದಿ ವರ್ತಿಸುತ್ತಿದ್ದಾರೆ. ‘ರಾಷ್ಟ್ರಪಿತ’ ಎಂದು ಇಡೀ ದೇಶವೇ ಒಪ್ಪಿಕೊಂಡಿರುವ ಮಹಾತ್ಮಾ ಗಾಂಧಿ ಹೆಸರು ತೆಗೆದುಹಾಕುವುದನ್ನು ನೋಡಿದರೆ ರಾಜಕಾರಣ ಯಾವ ಮಟ್ಟಿಗೆ ಹೋಗಿದೆ? ಎಂದು ಚಿಂತಿಸಬೇಕಿದೆ’ ಎಂದು ಹೇಳಿದರು.
ಮಾಜಿ ಸಚಿವ ಎಸ್.ಆರ್. ಪಾಟೀಲ, ಮುಖ್ಯ ಎಂಜಿನಿಯರ್ ಡಿ.ಬಸವರಾಜ, ಸೂಪರಿಂಟೆಂಡಿಂಗ್ ಎಂಜಿನಿಯರ್ ಅಭಿಮನ್ಯು, ತಾರಾಸಿಂಗ್ ದೊಡಮನಿ, ರವಿ ಚಂದ್ರಗಿರಿಯವರ, ಡಿಎಫ್ ಓ ಎನ್.ಕೆ. ಬಾಗಾಯತ್, ಮಹೇಶ ಪಾಟೀಲ, ಶಂಕ್ರಯ್ಯ ಮಠಪತಿ, ಗುತ್ತಿಗೆದಾರ ಬಸವರಾಜ ಅನಗವಾಡಿ ಇದ್ದರು.
ಮನವಿ: ಆಲಮಟ್ಟಿಯ ಅಭಿವೃದ್ಧಿಯ ಕುರಿತು ಶಂಕರ ಜಲ್ಲಿ ಹಾಗೂ ಮಲ್ಲೇಶ ರಾಠೋಡ ನೇತೃತ್ವದಲ್ಲಿ ಸಚಿವ ಶಿವಾನಂದ ಪಾಟೀಲ ಅವರಿಗೆ ಮನವಿ ಸಲ್ಲಿಸಲಾಯಿತು. ಬೇನಾಳ ಗ್ರಾಮಸ್ಥರು ಸಚಿವರನ್ನು ಸನ್ಮಾನಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.