ADVERTISEMENT

ಆಲಮಟ್ಟಿ ಜಲಾಶಯ: ಮುಂಗಾರು ಮೊದಲೇ ಒಳಹರಿವು ಆರಂಭ

ಆಲಮಟ್ಟಿ ಇತಿಹಾಸದಲ್ಲಿಯೇ ಬೇಗನೆ ಒಳಹರಿವು

ಚಂದ್ರಶೇಖರ ಕೊಳೇಕರ
Published 24 ಮೇ 2021, 19:30 IST
Last Updated 24 ಮೇ 2021, 19:30 IST
ಆಲಮಟ್ಟಿ ಜಲಾಶಯದ ಹಿನ್ನೀರು (ಸಂಗ್ರಹ ಚಿತ್ರ)
ಆಲಮಟ್ಟಿ ಜಲಾಶಯದ ಹಿನ್ನೀರು (ಸಂಗ್ರಹ ಚಿತ್ರ)   

ಆಲಮಟ್ಟಿ: ತೌತೆ ಚಂಡಮಾರುತದ ಪರಿಣಾಮ ಆಲಮಟ್ಟಿ ಜಲಾಶಯಕ್ಕೆ ಮುಂಗಾರು ಆರಂಭಕ್ಕೂ ಮುನ್ನವೇ ಸೋಮವಾರ ಒಳಹರಿವು ಆರಂಭಗೊಂಡಿದ್ದು, ಜಲಾಶಯದ ಇತಿಹಾಸದಲ್ಲಿಯೇ ಇದೆ ಮೊದಲು.

ಸೋಮವಾರ ಆಲಮಟ್ಟಿ ಜಲಾಶಯಕ್ಕೆ 7974 ಕ್ಯುಸೆಕ್ ನೀರು ಹರಿದು ಬರುತ್ತಿದ್ದು, ಇದು ಈ ವರ್ಷದ ಮೊದಲ ಒಳಹರಿವು.

2002ರಿಂದ ಆಲಮಟ್ಟಿ ಜಲಾಶಯದಲ್ಲಿ ನೀರು ಸಂಗ್ರಹ ಆರಂಭಗೊಂಡಿದೆ. 2011 ಮೇ 30ಕ್ಕೆ ಒಳಹರಿವು ಬಂದಿದ್ದು ಇಲ್ಲಿಯವರೆಗಿನ ಅತಿ ಬೇಗನೆಯ ಒಳಹರಿವು ಆಗಿತ್ತು. ಈಗ ಸೋಮವಾರ ಬಂದ ಒಳಹರಿವು ಅತಿ ಬೇಗನೆಯ ಒಳಹರಿವು ಆಗಲಿದೆ.

ADVERTISEMENT

ಪ್ರತಿ ವರ್ಷ ಜೂನ್‌ನಲ್ಲಿ ಒಳಹರಿವು ಆರಂಭಗೊಳ್ಳುತ್ತಿತ್ತು. ಆದರೆ, ಈ ಬಾರಿ ತೌತೆ ಚಂಡಮಾರುತದ ಹಿನ್ನೆಲೆಯಲ್ಲಿ ಒಳಹರಿವು ಬೇಗ ಆರಂಭಗೊಂಡಿದ್ದು, ಇದು ತಾತ್ಕಾಲಿಕ ಎಂದು ಕೆಬಿಜೆಎನ್ಎಲ್ ಅಧಿಕಾರಿಗಳು ತಿಳಿಸಿದರು.

ಹವಾಮಾನ ಇಲಾಖೆಯ ಪ್ರಕಾರ ಈ ಬಾರಿ ಮುಂಗಾರು ಜೂನ್ ಮೊದಲ ವಾರದಲ್ಲಿಯೇ ಬರಲಿದ್ದು, ಹೀಗಾಗಿ ಜಲಾಶಯದ ಒಳಹರಿವು ಹೆಚ್ಚಾಗುತ್ತಲೇ ಸಾಗಲಿದೆ ಎಂಬ ನಿರೀಕ್ಷೆ ಇದೆ.

123.081 ಟಿಎಂಸಿ ಅಡಿ ಗರಿಷ್ಠ ನೀರು ಸಂಗ್ರಹ ಸಾಮಾರ್ಥ್ಯ ಇರುವ ಆಲಮಟ್ಟಿ ಜಲಾಶಯದಲ್ಲಿ ಭಾನುವಾರ 23.715 ಟಿಎಂಸಿ ಅಡಿ ನೀರು ಸಂಗ್ರಹವಿತ್ತು. ಆದರೆ, ಅದು ಸೋಮವಾರ 24.365 ಮೀ. ಗೆ ಏರಿದೆ.

519.60 ಮೀ ಗರಿಷ್ಠ ಎತ್ತರದ ಜಲಾಶಯದಲ್ಲಿ ಸೋಮವಾರ 508.76 ಮೀ. ಇತ್ತು. ಕಾಲುವೆಗಳ ಜಾಲಕ್ಕೆ ನೀರು ಹರಿಯುವುದು ಸ್ಥಗಿತವಾಗಿದೆ. ಆದರೆ, ಕೂಡಗಿ ಎನ್‌ಟಿಪಿಸಿಗೆ 30 ಕ್ಯುಸೆಕ್, ಭಾಷ್ಪೀಕರಣ 421 ಕ್ಯುಸೆಕ್ ಇದೆ ಎಂದು ಮೂಲಗಳು ತಿಳಿಸಿವೆ.

ಮಹಾರಾಷ್ಟ್ರದಲ್ಲಿ ಇನ್ನೂ ಮಳೆ ಅಬ್ಬರ ಆರಂಭವಾಗಿಲ್ಲ. ಆದರೆ, ಕೃಷ್ಣಾ ನದಿ ವ್ಯಾಪ್ತಿಯ ಕರ್ನಾಟಕ ಪ್ರದೇಶದಲ್ಲಿ ಕಳೆದ ಎರಡು ದಿನದಿಂದ ಸುರಿದ ಮಳೆಯಿಂದಾಗಿ ಈ ಒಳಹರಿವು ಬಂದಿದೆ.

ಕಳೆದ ವರ್ಷ ಜೂನ್ 5 ರಿಂದ ಒಳಹರಿವು ಆರಂಭಗೊಂಡಿತ್ತು. ಕಳೆದ ವರ್ಷ ಈ ದಿನದಂದು ಜಲಾಶಯದ ಮಟ್ಟ 510.03 ಮೀ. ಇದ್ದು, 30.048 ಟಿಎಂಸಿ ಅಡಿ ನೀರು ಸಂಗ್ರಹವಾಗಿತ್ತು.

ಈ ವರ್ಷ ತಿಂಗಳು ಮೊದಲೇ ಜಲಾಶಯದ ಒಳಹರಿವು ಆರಂಭಗೊಂಡಿದ್ದು, ರೈತರಲ್ಲಿ ಮಂದಹಾಸ ಮೂಡಿಸಿದೆ. ಜೂನ್ ಅಂತ್ಯಕ್ಕೆ ಕಾಲುವೆಗೆ ನೀರು ಹರಿಯುವ ನಿರೀಕ್ಷೆಯಲ್ಲಿ ರೈತರು ಇದ್ದಾರೆ.

***

ಈ ಬಾರಿ ಅತಿ ಬೇಗನೆ ಒಳಹರಿವು ಆರಂಭಗೊಂಡಿದ್ದು, ಜಲಾಶಯದ ನೀರಿನ ಸಂಗ್ರಹ ಏರಿಕೆಯಾಗುತ್ತಿದೆ. ಈಗಿನಿಂದಲೇ ಆಲಮಟ್ಟಿ ಜಲಾಶಯದಿಂದ ಪ್ರವಾಹ ಉಂಟಾಗದಂತೆ ಸತತ ನಿಗಾ ಇಡಲಾಗುತ್ತದೆ

- ಎಚ್. ಸುರೇಶ, ಮುಖ್ಯ ಎಂಜಿನಿಯರ್,ಕೆಬಿಜೆಎನ್ ಎಲ್ ಆಲಮಟ್ಟಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.