
ಭೂಮಿ ಪೂಜೆ ನೆರವೇರಿಸಿ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಮಾತನಾಡಿದರು
ವಿಜಯಪುರ: ಬಬಲೇಶ್ವರ ಮತಕ್ಷೇತ್ರದಲ್ಲಿ ಟೊಯೊಟಾ ಕಂಪನಿಯ ₹21 ಕೋಟಿ ಸಿ.ಎಸ್.ಆರ್. ಅನುದಾನದಲ್ಲಿ ವಿವಿಧ ಸಾಮಾಜಿಕ ಕಾರ್ಯ ಚಟುವಟಿಕೆಗಳನ್ನು ಅನುಷ್ಠಾನಗೊಳಿಸಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಹೇಳಿದರು.
ಬಬಲೇಶ್ವರ ತಾಲ್ಲೂಕಿನ ಮಮದಾಪುರ ಗ್ರಾಮದಲ್ಲಿ ಟೊಯೊಟಾ ಕಿರ್ಲೋಸ್ಕರ್ ಕಂಪನಿಯ ಸಿ.ಎಸ್.ಆರ್.₹ 5 ಕೋಟಿ ಅನುದಾನದಲ್ಲಿ ಸರ್ಕಾರಿ ಪದವಿ ಕಾಲೇಜು ಹಾಗೂ ಸರ್ಕಾರಿ ಪ್ರೌಢ ಶಾಲೆಗಳ ನೂತನ ಕಟ್ಟಡ ನಿರ್ಮಾಣ ಕಾರ್ಯಕ್ಕೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ಟೊಯೊಟಾ ಶಿಸ್ತು ಹಾಗೂ ಬದ್ದತೆಗೆ ಹೆಸರಾದ ಕಂಪನಿ, ದೂರದ ಜಪಾನ್ ಮೂಲದ ಈ ಕಂಪನಿ ಮಮದಾಪೂರದ ಮಕ್ಕಳ ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಲು ಅನುಕೂಲವಾಗಲಿದೆ ಎಂದರು.
ಟೊಯೊಟಾ ಸಿ.ಎಸ್.ಆರ್ ಅನುದಾನದಲ್ಲಿ ಶಾಲಾ ಕೊಠಡಿ ನಿರ್ಮಾಣ, ಶೈಕ್ಷಣಿಕ ಕಿಟ್ ವಿತರಣೆ, ಶೌಚಾಲಯ, ಶುದ್ಧ ಕುಡಿಯುವ ನೀರು ಹಾಗೂ ಇತರ ಮೂಲ ಸೌಕರ್ಯ ಒದಗಿಸಲು ಮುಂದಾಗಿದೆ ಎಂದು ಹೇಳಿದರು.
ಕೆರೆ ತುಂಬುವ ಯೋಜನೆ ಫಲವಾಗಿ ಮಮದಾಪೂರ ಐತಿಹಾಸಿಕ ಕೆರೆ ಭರ್ತಿಯಾಗಿದೆ. ಅಷ್ಟೇ ಅಲ್ಲದೇ, ರಾಜ್ಯದ ಸಾವಿರಾರು ಕೆರೆ ಭರ್ತಿಯಾಗಿವೆ ಎಂದರು.
ರಾಜಸ್ಥಾನದ ಜೈಸಲ್ಮೇರ್ ಹಾಗೂ ವಿಜಯಪುರ ದೇಶದಲ್ಲೇ ಅತ್ಯಂತ ಭೀಕರ ಬರಗಾಲ ಎದುರಿಸುವ ಜಿಲ್ಲೆಗಳು ಎಂದು ಬ್ರಿಟಿಷರು ದಾಖಲಿಸಿದ್ದರು. ಆದರೆ, ಈಗ ಕೆರೆ ನೀರು ತುಂಬುವ ಯೋಜನೆ ಫಲವಾಗಿ ಜಿಲ್ಲೆಯ ಅಂತರ್ಜಲ ಹೆಚ್ಚಿದ್ದು ಸಮೃದ್ದತೆಯ ದಾಪುಗಾಲು ಇರಿಸಿದೆ ಎಂದರು.
ಕೃಷ್ಟಾ ನದಿ ನೀರಿನ ನ್ಯಾಯಾಧೀಕರಣ ತೀರ್ಪಿನ ನೋಟಿಫಿಕೇಷನ್ ಆದ ನಂತರ ಮಾಡಬೇಕಾದ ಕಾಲುವೆ ನಿರ್ಮಾಣ ಮೊದಲಾದ ಭೌತಿಕ ಕೆಲಸವನ್ನು ಮುಂಚಿತವಾಗಿಯೇ ಮಾಡಿದ್ದೇವೆ. ಈ ಪೂರ್ವ ತಯಾರಿಯ ಕೆಲಸವನ್ನೇ ಸದ್ಬಳಕೆ ಮಾಡಿಕೊಂಡು ಮುನ್ನಡೆದಿದ್ದೇವೆ ಎಂದರು.
ಮುಂದಿನ ದಿನದಲ್ಲಿ ಉದ್ಯಮ ಸಂಸ್ಥೆಯ ವತಿಯಿಂದ ಬಬಲೇಶ್ವರದಲ್ಲಿ ಹೈಟೆಕ್ ಆಸ್ಪತ್ರೆ ನಿರ್ಮಾಣಕ್ಕೆ ಮನವಿ ಮಾಡಿಕೊಳ್ಳಲಾಗುವುದು ಎಂದರು.
ಕಿರ್ಲೋಸ್ಕರ್ ಉದ್ಯಮ ಸಂಸ್ಥೆಯ ಸುದೀಪ್ ಶಾಂತಾರಾಮ ದಳವಿ, ಮಕ್ಕಳು ದೇಶದ ಭವಿಷ್ಯ. ಹೀಗಾಗಿ ಮಕ್ಕಳ ಶೈಕ್ಷಣಿಕ ಸೌಲಭ್ಯಗಳನ್ನು ಉನ್ನತಿಕರಿಸುವ ಕಾರ್ಯದಲ್ಲಿ ಸಮಾಜ ಸೇವೆಯ ರೂಪದಲ್ಲಿ ಸಂಸ್ಥೆ ತೊಡಗಿಸಿಕೊಂಡಿದೆ ಎಂದರು.
ಕಿರ್ಲೋಸ್ಕರ್ ಟೊಯೊಟಾ ಮತ್ತು ಬಿ.ಎಲ್.ಡಿ.ಇ ಎಂಜಿನಿಯರಿಂಗ್ ಕಾಲೇಜು ನಡುವೆ ಒಡಂಬಡಿಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಅವರು ಹೇಳಿದರು.
ಜಿಲ್ಲಾ ಪಂಚಾಯ್ತಿ ಸಿಇಒ ರಿಷಿ ಆನಂದ್, ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ, ಗ್ರಾಮ ಪಂಚಾಯಿತಿ ಅಧ್ಯಕ್ಷ ಮಲ್ಲಿಕಾರ್ಜುನ ಗಂಗೂರ, ವಕ್ಫ್ ಬೋರ್ಡ್‌ನ ಡಾ. ನಿಯಾಜ ಅಹಮ್ಮದ ಕೌಸರ, ಟೊಯೊಟಾ ಸಂಸ್ಥೆಯ ರಮೇಶ, ರೈತ ಮುಖಂಡ ಅರವಿಂದ ಕುಲಕರ್ಣಿ, ಬಸವರಾಜ ದೇಸಾಯಿ, ಕುಮಾರ ದೇಸಾಯಿ ಬಿ.ಎಲ್.ಡಿ.ಇ ಎಂಜಿನಿಯರಿಂಗ್ ಕಾಲೇಜಿನ ಪ್ರಾಚಾರ್ಯ ವಿ.ಜಿ. ಸಂಗಮ, ಮಹಾಂತೇಶ ಬಿರಾದಾರ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.