ADVERTISEMENT

ಆಲಮಟ್ಟಿ ಜಲಾಶಯ: ಒಳಹರಿವು ಕ್ಷೀಣ; ಕಾಲುವೆಗೆ 26 ರಿಂದ ನೀರು ಸ್ಥಗಿತ

ಆಲಮಟ್ಟಿ ಜಲಾಶಯ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2025, 5:56 IST
Last Updated 24 ಅಕ್ಟೋಬರ್ 2025, 5:56 IST
ಆಲಮಟ್ಟಿ ಎಡದಂಡೆ ಮುಖ್ಯ ಕಾಲುವೆಗೆ ನೀರು ಹರಿಯುತ್ತಿರುವುದು
ಆಲಮಟ್ಟಿ ಎಡದಂಡೆ ಮುಖ್ಯ ಕಾಲುವೆಗೆ ನೀರು ಹರಿಯುತ್ತಿರುವುದು   

ಆಲಮಟ್ಟಿ: ಆಲಮಟ್ಟಿ ಜಲಾಶಯದ ಒಳಹರಿವು ಕಳೆದ ನಾಲ್ಕೈದು ದಿನಗಳಿಂದ ಕ್ಷೀಣಗೊಂಡಿದ್ದು ಕೇವಲ ಒಂದು ಸಾವಿರ ಕ್ಯೂಸೆಕ್ ಆಸುಪಾಸು ಇದೆ.

ಜುಲೈ 8 ರಿಂದ ಕೃಷ್ಣಾ ಮೇಲ್ದಂಡೆ ಯೋಜನೆ (ಯುಕೆಪಿ) ಅಚ್ಚುಕಟ್ಟು ಪ್ರದೇಶದ ಕಾಲುವೆಗಳಿಗೆ ವಾರಾಬಂಧಿ ಇಲ್ಲದೇ ಮುಂಗಾರು ಬೆಳೆಗೆ ನಿರಂತರವಾಗಿ ಹರಿಯುತ್ತಿದ್ದ ನೀರು ಇದೇ 26 ರಿಂದ ಸ್ಥಗಿತಗೊಳ್ಳಲಿದೆ.

ಯುಕೆಪಿಯ ಮುಂಗಾರು ಹಂಗಾಮಿನ ನೀರಾವರಿ ಸಲಹಾ ಸಮಿತಿ (ಐಸಿಸಿ) ಸಭೆಯಲ್ಲಿ ನ.4 ರವರೆಗೆ 14 ದಿನ ಚಾಲು ಹಾಗೂ 10 ದಿನ ಬಂದ್ ಪದ್ಧತಿಗೆ ಅನುಸಾರ ನೀರು ಹರಿಸುವುದು, ಆದರೆ ಆಲಮಟ್ಟಿ ಜಲಾಶಯಕ್ಕೆ ಒಳಹರಿವು ಇರುವವರೆಗೂ ರೈತರ ಬೇಡಿಕೆಗೆ ತಕ್ಕಂತೆ (ಯಾವುದೇ ವಾರಾಬಂಧಿ ಇಲ್ಲದೆ) ನಿರಂತರ ನೀರು ಹರಿಸಲು ನಿರ್ಧರಿಸಲಾಗಿತ್ತು. ಸದ್ಯ ಆಲಮಟ್ಟಿ ಜಲಾಶಯದ ಒಳಹರಿವು ಕ್ಷೀಣಗೊಂಡಿದ್ದು ವಾರಾಬಂಧಿ ಅಳವಡಿಸಬೇಕಿದೆ.

ADVERTISEMENT

ವಾರಾಬಂಧಿ ಪ್ರಕಾರ ಅ.26 ರಿಂದ ನ.4 ರವರೆಗೆ ಬಂದ್ ಅವಧಿಯಿದ್ದು, ಇದು ಮುಂಗಾರು ಹಂಗಾಮಿನ ಕೊನೆಯ ಕಂತಾಗಿದೆ. ಇಲ್ಲಿಯವರೆಗೆ ನಿರಂತರ ನೀರು ಹರಿಸಲಾಗಿದ್ದು ಅ.25 ರವರೆಗೆ ನೀರು ಹರಿಸಿ, ಅ.26 ರಿಂದ ಕಾಲುವೆಗೆ ನೀರು ಹರಿಸುವುದನ್ನು ನಿಲ್ಲಿಸಲಾಗುವುದು ಎಂದು ಅಣೆಕಟ್ಟು ವೃತ್ತ ವಲಯದ ಸೂಪರಿಂಟೆಂಡೆಂಟ್ ಎಂಜಿನಿಯರ್ ವಿ.ಆರ್. ಹಿರೇಗೌಡರ ತಿಳಿಸಿದರು.

ಹಿಂಗಾರು ಹಂಗಾಮಿಗೆ ಇಲ್ಲ ನೀರಿನ ಕೊರತೆ; ನ.4 ರಿಂದ ಮುಂಗಾರು ಹಂಗಾಮಿನ ನೀರು ಹರಿಸುವ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ, ಹೀಗಾಗಿ ಹಿಂಗಾರು ಹಂಗಾಮಿಗೆ ನೀರು ಹರಿಸುವ ಅವಧಿ ನಿರ್ಧರಿಸುವ ಐಸಿಸಿ ಸಭೆ ನಡೆಸಲು ಪ್ರಸ್ತಾವನೆ ಸಲ್ಲಿಸಲಾಗಿದ್ದು ಶೀಘ್ರವೇ ನಿಗದಿಯಾಗಲಿದೆ ಎಂದು ಕೆಬಿಜೆಎನ್ಎಲ್ ಅಧಿಕಾರಿಗಳು ತಿಳಿಸಿದರು.

ಸದ್ಯ ಆಲಮಟ್ಟಿ ಜಲಾಶಯ ಸಂಪೂರ್ಣ ಭರ್ತಿಯಾಗಿದ್ದು, 123.081 ಟಿಎಂಸಿ ಅಡಿ ನೀರು ಸಂಗ್ರಹಗೊಂಡರೂ ಬಳಕೆ ಯೋಗ್ಯ 105 ಟಿಎಂಸಿ ಅಡಿ ನೀರು ಇದೆ. ನಾರಾಯಣಪುರ ಜಲಾಶಯದಲ್ಲೂ 27 ಟಿಎಂಸಿ ಅಡಿ ನೀರಿದೆ. ಕುಡಿಯುವ ನೀರು, ವಿದ್ಯುತ್ ಉತ್ಪಾದನಾ ಕೇಂದ್ರ ಮತ್ತಿತರ ಬಳಕೆಗೆ ನೀರು ಸಂಗ್ರಹಿಸಿಟ್ಟುಕೊಂಡು, ವಾರಾಬಂಧಿ ಅಳವಡಿಸಿ ಹಿಂಗಾರು ಹಂಗಾಮಿಗೆ 2026 ರ ಮಾರ್ಚ್‌ವ ರೆಗೆ ನೀರು ಹರಿಸುವ ಸಾಧ್ಯತೆಯಿದೆ ಎನ್ನಲಾಗಿದೆ. ಇದು ಐಸಿಸಿಯಲ್ಲಿ ತೀರ್ಮಾನವಾಗಬೇಕಿದೆ.

ಕಳೆದ ಒಂದು ವಾರದಿಂದ ಒಳಹರಿವು ಕ್ಷೀಣಗೊಂಡಿದ್ದು ಗುರುವಾರ 1288 ಕ್ಯೂಸೆಕ್ ಇದೆ. ಕೆಲ ಕಡೆ ಮಳೆಯಾದರೂ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಿಲ್ಲ, ಹೀಗಾಗಿ ಒಳಹರಿವು ಹೆಚ್ಚಳವಾಗುವ ಸಾಧ್ಯತೆ ಸದ್ಯಕ್ಕಿಲ್ಲ ಎಂದು ಕೆಬಿಜೆಎನ್ಎಲ್ ಅಧಿಕಾರಿಗಳು ತಿಳಿಸಿದರು.

ನ.4 ರೊಳಗೆ ಐಸಿಸಿ ಸಭೆ ನಡೆದು ಹಿಂಗಾರು ಹಂಗಾಮಿಗೆ ನೀರು ಹರಿಸಲು ತೀರ್ಮಾನಿಸಲಾಗುತ್ತದೆ.ಅ.26 ರಿಂದ ಎಲ್ಲಾ ಕಾಲುವೆಗಳಿಗೂ ನೀರು ಹರಿಸುವುದನ್ನು ನಿಲ್ಲಿಸಲಾಗುತ್ತದೆ

ಪ್ರೇಮಸಿಂಗ್ಸದಸ್ಯ ಕಾರ್ಯದರ್ಶಿ, ಐಸಿಸಿ ಸಮಿತಿಮುಖ್ಯ ಎಂಜಿನಿಯರ್ಭೀಮರಾಯನಗುಡಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.