ADVERTISEMENT

ಆಲಮಟ್ಟಿ ಜಲಾಶಯ: ಹೆಚ್ಚಿದ ಹೊರಹರಿವು, ಆತಂಕದಲ್ಲಿ ಗ್ರಾಮಸ್ಥರು

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2025, 5:17 IST
Last Updated 21 ಆಗಸ್ಟ್ 2025, 5:17 IST
ಆಲಮಟ್ಟಿ ಜಲಾಶಯದಿಂದ 2.5 ಲಕ್ಷ ಕ್ಯೂಸೆಕ್ ನೀರು ಬಿಟ್ಟ ಕಾರಣ, ಜಲಾಶಯದ ಮುಂಭಾಗದ ಕೃಷ್ಣಾ ತೀರದ ಜಮೀನುಗಳ ತೀರಕ್ಕೆ ನೀರು ಬಂದಿದೆ.
ಆಲಮಟ್ಟಿ ಜಲಾಶಯದಿಂದ 2.5 ಲಕ್ಷ ಕ್ಯೂಸೆಕ್ ನೀರು ಬಿಟ್ಟ ಕಾರಣ, ಜಲಾಶಯದ ಮುಂಭಾಗದ ಕೃಷ್ಣಾ ತೀರದ ಜಮೀನುಗಳ ತೀರಕ್ಕೆ ನೀರು ಬಂದಿದೆ.   

ಆಲಮಟ್ಟಿ: ಆಲಮಟ್ಟಿ ಜಲಾಶಯದ ಹೊರಹರಿವು ಬುಧವಾರ 2 ಲಕ್ಷ ಕ್ಯೂಸೆಕ್ ನಿಂದ 2.5 ಲಕ್ಷ ಕ್ಯೂಸೆಕ್ ಗೆ ಹೆಚ್ಚಿಸಲಾಗಿದ್ದು, ಆಲಮಟ್ಟಿ ಜಲಾಶಯದ ಮುಂಭಾಗದ ಕೃಷ್ಣಾ ತೀರದ ಗ್ರಾಮಸ್ಥರಿಗೆ ಮತ್ತೆ ಆತಂಕ ಆರಂಭಗೊಂಡಿದೆ.

ಮಹಾರಾಷ್ಟ್ರದಲ್ಲಿ ಮಳೆಯ ಅಬ್ಬರದ ಜತೆಗೆ, ಕರ್ನಾಟಕದ ಘಟಪ್ರಭಾ ನದಿಯಿಂದಲೂ ವ್ಯಾಪಕ ನೀರು ಆಲಮಟ್ಟಿ ಜಲಾಶಯದತ್ತ ಹರಿದು ಬರುತ್ತಿದ್ದು, ಬುಧವಾರ ಜಲಾಶಯದ ಒಳಹರಿವು 1,60,694 ಕ್ಯೂಸೆಕ್‌ಗೆ ಏರಿಕೆಯಾಗಿದೆ. ಜಲಾಶಯ ತನ್ನ ಗರಿಷ್ಠ ಮಟ್ಟ 519.60 ಮೀ ಬಹುತೇಕ ತಲುಪಿತ್ತು. ಆದರೆ ಮಳೆಯ ಅಬ್ಬರ ಹೆಚ್ಚಾಗಿದ್ದರಿಂದ ಮುಂಜಾಗ್ರತೆಯ ಕ್ರಮವಾಗಿ ಒಂದು ಮೀಟರ್ ಅಂದರೆ 518.44 ಮೀ ಗೆ ಕಡಿಮೆ ಮಾಡಲಾಗಿದೆ. ಸದ್ಯಕ್ಕೆ ಹೊರಹರಿವು ಇನ್ನಷ್ಟು ಹೆಚ್ಚುವ ಸಾಧ್ಯತೆ ಕಡಿಮೆ ಎನ್ನಲಾಗಿದೆ. ಕಳೆದ ಮೂರು ದಿನಗಳಿಂದ ಸುರಿದ ಭಾರಿ ಮಳೆ ಆಲಮಟ್ಟಿ ಜಲಾಶಯಕ್ಕೆ ಹರಿದು ಬರುತ್ತಿದೆ. ಹೀಗಾಗಿ ಒಳಹರಿವು ಕ್ಷಣ ಕ್ಷಣಕ್ಕೂ ಹೆಚ್ಚಳವಾಗುತ್ತಿದೆ. 2.5 ಲಕ್ಷ ಕ್ಯೂಸೆಕ್ ನೀರು ಬಿಟ್ಟಿದ್ದು, ಇದು ಈ ವರ್ಷದ ಗರಿಷ್ಠ ಹೊರಹರಿವು.

ಗುರುವಾರ ಜಲಾಶಯ ಮಟ್ಟ ಇನ್ನಷ್ಟು ಇಳಿಕೆಯಾಗಲಿದ್ದು, ಒಳಹರಿವು ಹೆಚ್ಚಳವಾದರೂ ಯಾವುದೇ ತೊಂದರೆಯಾಗದಂತೆ ನಿರ್ವಹಣೆ ಮಾಡಲಾಗುತ್ತಿದೆ. ಮಹಾರಾಷ್ಟ್ರದಲ್ಲಿ ಮಳೆಯ ಅಬ್ಬರ ಮುಂದುವರಿದಿದೆ. ಅಲ್ಲಿನ ಕೊಯ್ನಾ 27 ಸೆಂ.ಮೀ, ಮಹಾಬಳೇಶ್ವರದಲ್ಲಿ 30.8 ಸೆಂ.ಮೀ, ನವಜಾದಲ್ಲಿ 38.7 ಸೆಂ.ಮೀ, ರಾಧಾನಗರಿಯಲ್ಲಿ 17.3 ಸೆಂ.ಮೀ, ಧೋಮದಲ್ಲಿ 19.7 ಸೆಂ.ಮೀ ಮಳೆಯಾಗಿದೆ. ಆದರೆ ಬುಧವಾರ ಸಂಜೆಯ ವೇಳೆಗೆ ಮಳೆಯ ಅಬ್ಬರ ಕಡಿಮೆಯಾಗಿದೆ ಎಂದು ಮೂಲಗಳು ತಿಳಿಸಿವೆ.

ADVERTISEMENT

ಕೊಯ್ನಾ ಜಲಾಶಯದಿಂದ 95,300 ಕ್ಯೂಸೆಕ್, ಕನ್ಹೇರ್ ದಿಂದ 10,468 ಕ್ಯೂಸೆಕ್, ವಾರಣಾದಿಂದ 34,257 ಕ್ಯೂಸೆಕ್ ನೀರು ಸೇರಿ ಮಹಾರಾಷ್ಟ್ರದ ವಿವಿಧ ಜಲಾಶಯಗಳಿಂದ ಕೃಷ್ಣಾ ನದಿಗೆ ಒಟ್ಟಾರೆ 1,41,500 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಘಟಪ್ರಭಾ ನದಿಯಿಂದ 62,244 ಕ್ಯೂಸೆಕ್ ನೀರು ಕೃಷ್ಣಾ ನದಿಗೆ ಬಂದು ಸೇರುತ್ತಿದೆ. ಅದರ ಜತೆಗೆ ಅಚ್ಚುಕಟ್ಟು ಪ್ರದೇಶದಲ್ಲಿ ಸ್ಥಳೀಯವಾಗಿ ಸುರಿಯುತ್ತಿರುವ ಮಳೆಯೂ ನದಿಗೆ ಬಂದು ಸೇರುತ್ತಿದೆ. ಹೀಗಾಗಿ ಇನ್ನೂ ಮೂರ್ನಾಲ್ಕು ದಿನ ಜಲಾಶಯದ ಒಳಹರಿವು ಏರಿಕೆಯಲ್ಲಿಯೇ ಇರಲಿದೆ ಎಂದು ಮುಖ್ಯ ಎಂಜಿನಿಯರ್ ಡಿ.ಬಸವರಾಜ ತಿಳಿಸಿದರು.

ನದಿ ತೀರದಲ್ಲಿ ಆತಂಕ ಸ್ಥಿತಿ:

ಆಲಮಟ್ಟಿ ಜಲಾಶಯದಲ್ಲಿ 2.5 ಲಕ್ಷ ಕ್ಯೂಸೆಕ್ ನೀರು ಬಿಟ್ಟ ಕಾರಣ ಜಲಾಶಯದ ಮುಂಭಾಗದ ಅರಳದಿನ್ನಿ, ಯಲಗೂರು, ಯಲ್ಲಮ್ಮನಬೂದಿಹಾಳ, ಮಸೂತಿ ಗ್ರಾಮದ ಹಲವಾರು ಜಮೀನುಗಳ ಅಂಚಿಗೆ ನೀರು ಬಂದಿದೆ. ಆದರೆ ನೀರು ಜಮೀನಿಗೆ ನುಗ್ಗಿಲ್ಲ. ಜಲಾಶಯದ ಹೊರಹರಿವು ಇನ್ನಷ್ಟು ಹೆಚ್ಚಿದರೇ, ತೀರದ ಜಮೀನುಗಳು ಜಲಾವೃತಗೊಳ್ಳುವ ಸಾಧ್ಯತೆ ಹೆಚ್ಚಿದೆ ಎಂದು ಕಂದಾಯ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದರು. ಜಲಾಶಯದ ಮುಂಭಾಗದ ನಾರಾಯಣಪುರ ಜಲಾಶಯದಿಂದ 2.6 ಲಕ್ಷ ಕ್ಯೂಸೆಕ್ ನೀರನ್ನು ಬಿಡಲಾಗುತ್ತಿದೆ. ಇದರಿಂದ ಪ್ರವಾಹ ಸ್ಥಿತಿಗತಿ ನಿಯಂತ್ರಣದಲ್ಲಿದೆ.

ಆಲಮಟ್ಟಿ ಜಲಾಶಯದಿಂದ 2.5 ಲಕ್ಷ ಕ್ಯೂಸೆಕ್ ನೀರು ಬಿಟ್ಟ ಕಾರಣ ಜಲಾಶಯದ ಮುಂಭಾಗದ ಕೃಷ್ಣಾ ತೀರದ ಜಮೀನುಗಳ ತೀರಕ್ಕೆ ನೀರು ಬಂದಿದೆ.
ವ್ಯಾಪಕವಾಗಿ ಸುರಿಯುತ್ತಿರುವ ಮಳೆಯ ಕಾರಣ ಯಲಗೂರು ಬಳಿಯ ಜಮೀನಿನಲ್ಲಿ ನೀರು ನಿಂತ ದೃಶ್ಯ

ವಿಷ ಜಂತುಗಳ ಕಾಟ

ನದಿಯ ನೀರು ಹೆಚ್ಚಿದ್ದರಿಂದ ಕೃಷ್ಣಾ ತೀರದ ಗ್ರಾಮಗಳಲ್ಲಿ ವಿಷ ಜಂತುಗಳ ಕಾಟ ಹೆಚ್ಚುವ ಆತಂಕ ಆರಂಭಗೊಂಡಿದೆ. ಜತೆಗೆ ಸೊಳ್ಳೆಯ ಕಾಟವೂ ಅಧಿಕ. ಹೀಗಾಗಿ ಫಾಗಿಂಗ್ ಚರಂಡಿ ಸ್ವಚ್ಛತೆ ಸೇರಿದಂತೆ ನಾನಾ ಕ್ರಮಗಳನ್ನು ತಕ್ಷಣವೇ ಗ್ರಾಮ ಪಂಚಾಯ್ತಿ ಆಡಳಿತ ಕೈಗೊಳ್ಳಬೇಕು ಇಲ್ಲದಿದ್ದರೆ ಸಾಂಕ್ರಾಮಿಕ ರೋಗ ಹರಡುವ ಭೀತಿ ಎದುರಾಗುತ್ತದೆ.

ಆರೋಗ್ಯ ಇಲಾಖೆಯೂ ಜ್ವರ ತಪಾಸಣೆ ಲಾರ್ವಾ ತಪಾಸಣೆ ನಡೆಸಬೇಕು ಎಂದು ಅರಳದಿನ್ನಿ ಗ್ರಾಮದ ಯುವ ಮುಖಂಡ ಬಸವರಾಜ ಹೆರಕಲ್ಲ ಆಗ್ರಹಿಸಿದ್ದಾರೆ. ನೀರಿನ ಹರಿವು ವೀಕ್ಷಿಸಲು ದಟ್ಟಣೆ: ಜಲಾಶಯದಿಂದ ನೀರು ಬಿಡುವ ದೃಶ್ಯ ಹಾಗೂ ಕೃಷ್ಣೆಯ ಹರಿವು ಕಣ್ತುಂಬಿಕೊಳ್ಳಲು ಹಲವಾರು ಪ್ರವಾಸಿಗರು ಆಲಮಟ್ಟಿಯತ್ತ ಬರುತ್ತಿದ್ದಾರೆ. ಕೃಷ್ಣಾ ರಸ್ತೆ ಸೇತುವೆ ಬಳಿ ನಿಂತು ಸೆಲ್ಫಿ ಕ್ಲಿಕ್ಕಿಸಿಕೊಳ್ಳುವ ಸಂಖ್ಯೆ ಹೆಚ್ಚುತ್ತಿದೆ. ಇಂದು ಮಳೆ ವಿರಾಮ ನೀಡಿದ್ದರಿಂದ ಬೆಳಿಗ್ಗೆಯಿಂದ ಸಂಜೆಯವರೆಗೂ ಜನರ ದಂಡೆ ಸೇತುವೆ ಬಳಿ ನಿಂತು ನೀರಿನ ಹರಿವು ವೀಕ್ಷಿಸಿ ಖುಷಿ ಪಡುತ್ತಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.