ಆಲಮಟ್ಟಿ: ಉದ್ಯಾನಗಳ ನಗರಿ ಆಲಮಟ್ಟಿ ವೀಕ್ಷಣೆಗೆ ನಿತ್ಯ ಆಗಮಿಸುವ ಸಹಸ್ರಾರು ಪ್ರವಾಸಿಗರಿಗೆ ಆಲಮಟ್ಟಿ ಜಲಾಶಯ ವೀಕ್ಷಣೆ ಬಲು ಕಷ್ಟವಾಗಿದೆ.
ಜಲಾಶಯದ ಎಲ್ಲಾ 26 ಗೇಟ್ ಗಳ ಮೂಲಕ ಭೋರ್ಗರೆಯುವ ಕೃಷ್ಣೆಯ ಸುಂದರ ಪರಿಸರವನ್ನು ಕಣ್ತುಂಬಿಕೊಳ್ಳಬೇಕೆಂಬ ಪ್ರತಿಯೊಬ್ಬ ಪ್ರವಾಸಿಗರ ಆಸೆ ಈಡೇರದಂತಾಗಿದೆ.
ಹತ್ತಿರದಿಂದ ಹೋಗಿ ನೋಡಬೇಕೆಂಬ ಬಯಕೆ ಈಡೇರುವುದಿಲ್ಲ. ಜಲಾಶಯದ ಸಮೀಪ ಹೋಗಲು ಎಲ್ಲಿಯೂ ಸಾಧ್ಯವಿಲ್ಲ. ಹೋದರೂ ಅದನ್ನು ವೀಕ್ಷಿಸುವುದು ಅಸಾಧ್ಯ. ಜಲಾಶಯದ ಕೆಳಭಾಗದ ಸಂಗೀತ ಕಾರಂಜಿ, ಲೇಸರ್ ಫೌಂಟೇನ್ ಬಳಿ ತೆರಳಿ, ಅಲ್ಲಿನ ಗೋಡೆಗಳ ಮೇಲೆ ನಿಂತು ದೂರದಿಂದ ಜಲಾಶಯ ವೀಕ್ಷಿಸಲು ಹರಸಾಹಸ ಪಡುತ್ತಾರೆ. ಆದರೂ ಜಲಾಶಯದ ಸೌಂದರ್ಯ ಪೂರ್ತಿಯಾಗಿ ಕಣ್ತುಂಬಿಕೊಳ್ಳಲು ಸಾಧ್ಯವಿಲ್ಲ.
ತಡೆಗೋಡೆ ಅಡ್ಡಿ: ಮೊದಲೆಲ್ಲಾ ಜಲಾಶಯದ ಮುಂಭಾಗದಲ್ಲಿ (ಸಂಗೀತ ಕಾರಂಜಿ ಹಿಂಭಾಗ) ಇದ್ದ ತಡೆಗೋಡೆ ಮೇಲಿದ್ದ ವೀಕ್ಷಣಾ ಗ್ಯಾಲರಿ ಮೇಲೆ ನಿಂತು ಜಲಾಶಯ ನೋಡುತ್ತಿದ್ದರು.
ಆದರೆ, 2019 ಆಗಸ್ಟ್ 13 ರಂದು ಜಲಾಶಯದ ನೀರಿನ ಸಂಗ್ರಹದ ಇತಿಹಾಸದಲ್ಲಿಯೇ ಅತಿ ಗರಿಷ್ಠ 5,70,000 ಕ್ಯೂಸೆಕ್ ನೀರು ಬಿಟ್ಟ ಕಾರಣ, ಜಲಾಶಯಕ್ಕೆ ಹತ್ತಿಕೊಂಡೇ ಎಡಭಾಗಕ್ಕೆ ನೀರು ಹೊಕ್ಕು ಪಕ್ಕದಲ್ಲಿನ ಸಂಗೀತ ಕಾರಂಜಿ, ಲೇಸರ್ ಫೌಂಟೇನ್ ಸೇರಿ ಇಡೀ ಉದ್ಯಾನ ಜಲಾವೃತಗೊಂಡಿತ್ತು. ಅದಕ್ಕಾಗಿ ಜಲಾಶಯದ ಮೊದಲಿದ್ದ ತಡೆಗೋಡೆಯನ್ನು ಸುಮಾರು ಆರು ಅಡಿಯಿಂದ 15 ಅಡಿಯವರೆಗೆ ಎತ್ತರಿಸಲಾಗಿದೆ. ಜಲಾಶಯ ವೀಕ್ಷಣೆಗೆ ಈ ತಡೆಗೋಡೆ ಅಡ್ಡಿಯಾಗಿದೆ.
ಈಗ ಜಲಾಶಯದ ಸುಂದರ ವೈಭವ ದೃಶ್ಯ ನೋಡಲು ಪ್ರವಾಸಿಗರು ಪಡುವ ಪಾಡು ಹೇಳತೀರದು. ಜಲಾಶಯ ನೋಡಬೇಕೆಂದರೆ ಜಲಾಶಯದ ಬಲಭಾಗದ ಸೀತಮ್ಮನಗುಡ್ಡಕ್ಕೆ, ಅಂದಾಜು ಐದು ಕಿ.ಮೀ ದೂರ ತೆರಳಿ, ಮಯೂರ ಕೃಷ್ಣಾ ಹೋಟೆಲ್ ಬಳಿಯಿಂದ ವೀಕ್ಷಿಸಬೇಕು.
ಹೀಗಾಗಿ ತಡೆಗೋಡೆ ಮೇಲೆಯೇ ಪ್ರವಾಸಿಗರಿಗಾಗಿ ವೀಕ್ಷಣಾ ಗ್ಯಾಲರಿ ನಿರ್ಮಿಸಬೇಕು ಎಂಬುದು ಪ್ರವಾಸಿಗರ ಒತ್ತಾಯ.
ಆಲಮಟ್ಟಿ ಜಲಾಶಯ ಹತ್ತಿರದಿಂದ ವೀಕ್ಷಿಸಬೇಕೆಂಬುದು ಪ್ರತಿಯೊಬ್ಬ ಪ್ರವಾಸಿಗನ ಆಸೆ, ಅದಕ್ಕಾಗಿ ವೀಕ್ಷಣಾ ಗ್ಯಾಲರಿ ನಿರ್ಮಿಸಿ, ಜಲಾಶಯ ವೀಕ್ಷಣೆಗೆ ಅವಕಾಶ ಕಲ್ಪಿಸಿ- ಕಿರಣ ಹಿಬಾರೆ ಪ್ರವಾಸಿಗ, ಕಲಬುರಗಿ
ವೀಕ್ಷಣಾ ಗ್ಯಾಲರಿ ನಿರ್ಮಾಣಕ್ಕೆ ಕೆಲ ತಾಂತ್ರಿಕ ತೊಂದರೆಗಳು ಇವೆ. ಪ್ರವಾಸಿಗರ ಸುರಕ್ಷತಾ ಕ್ರಮಗಳನ್ನು ಅನುಸರಿಸಬೇಕಿದೆ. ತುರ್ತಾಗಿ ನಿರ್ಮಿಸುವ ಯಾವುದೇ ಪ್ರಸ್ತಾವ ಸದ್ಯಕ್ಕಿಲ್ಲ- ವಿ.ಎಸ್. ಹಿರೇಗೌಡರ, ಸೂಪರಿಂಟೆಂಡಿಂಗ್ ಎಂಜಿನಿಯರ್ ಅಣೆಕಟ್ಟು ವೃತ್ತ ಆಲಮಟ್ಟಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.