
ಆಲಮಟ್ಟಿಗೆ ಭಾನುವಾರ ಆಗಮಿಸಿದ್ದ ಪ್ರವಾಸೋದ್ಯಮ, ಕಾನೂನು ಮತ್ತು ಸಂಸದಿಯ ಸಚಿವ ಎಚ್.ಕೆ. ಪಾಟೀಲ ಹಾಗೂ ಕೈಗಾರಿಕಾ ಮೂಲಸೌಲಭ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್.ಜೆ. ನಂಜಯ್ಯನಮಠ ಅವರನ್ನು ಶಿಕ್ಷಕರ ಸಂಘದ ವತಿಯಿಂದ ಸನ್ಮಾನಿಸಲಾಯಿತು
ಆಲಮಟ್ಟಿ: ‘ಆಲಮಟ್ಟಿಯಲ್ಲಿ ಇನ್ನಷ್ಟು ಪ್ರವಾಸೋದ್ಯಮ ಪೂರಕ ಚಟುವಟಿಕೆ ಹೆಚ್ಚಿಸಲು, ವಿಜಯಪುರ ಜಿಲ್ಲಾಧಿಕಾರಿ, ಪ್ರವಾಸೋದ್ಯಮ ಇಲಾಖೆ ಹಾಗೂ ಕೆಬಿಜೆಎನ್‌ಎಲ್ ಅಧಿಕಾರಿಗಳು ಜಂಟಿಯಾಗಿ ಸಭೆ ನಡೆಸಿ ಕೈಗೊಳ್ಳಬಹುದಾದ ಯೋಜನೆಗಳ ಬಗ್ಗೆ ಪ್ರಸ್ತಾವ ಸಲ್ಲಿಸಲು ಸೂಚಿಸಿದ್ದೇನೆ’ ಎಂದು ಸಚಿವ ಎಚ್.ಕೆ. ಪಾಟೀಲ ಹೇಳಿದರು.
ಆಲಮಟ್ಟಿಯಲ್ಲಿ ಭಾನುವಾರ ಸುದ್ದಿಗಾರರಿಗೆ ಈ ವಿಷಯ ತಿಳಿಸಿದ ಅವರು, ‘ಈ ಕುರಿತು ಈಗಾಗಲೇ ಕೆಬಿಜೆಎನ್‌ಎಲ್ ಮುಖ್ಯ ಎಂಜಿನಿಯರ್ ಡಿ.ಬಸವರಾಜ ಅವರೊಂದಿಗೆ ಚರ್ಚಿಸಿದ್ದೇನೆ, ಕೆಬಿಜೆಎನ್‌ಎಲ್ ಹಾಗೂ ಪ್ರವಾಸೋದ್ಯಮ ಇಲಾಖೆ ಜಂಟಿಯಾಗಿ ಆಯಾ ಇಲಾಖೆಯ ಅನುದಾನದಲ್ಲಿ ಪ್ರವಾಸಿ ಪೂರಕ ಚಟುವಟಿಕೆಗಳನ್ನು ಹೆಚ್ಚಿಸಬೇಕಿದೆ’ ಎಂದರು.
ಆಲಮಟ್ಟಿ ಗುಡ್ಡ ಹಾಗೂ ಸೀತಿಮ್ಮನಗಿರಿ ಗುಡ್ಡ ಮಧ್ಯೆ ಆಲಮಟ್ಟಿ ಜಲಾಶಯದ ಎದುರು ರೋಪ್ ವೇ ನಿರ್ಮಿಸಬೇಕೆಂಬ ಚಿಂತನೆಯಿದೆ. ಅದಕ್ಕಾಗಿ ಪ್ರಾಥಮಿಕ ಸರ್ವೆ ಕೂಡಾ ಕೆಬಿಜೆಎನ್‌ಎಲ್ ವತಿಯಿಂದ ಹತ್ತು ವರ್ಷದ ಹಿಂದೆಯೇ ನಡೆದಿದೆ, ಅದನ್ನು ಪ್ರವಾಸೋದ್ಯಮ ಇಲಾಖೆಯಿಂದ ಜಾರಿಗೊಳಿಸಲು ಚಿಂತನೆ ನಡೆದಿದೆ. ಈಗಾಗಲೇ ಆಲಮಟ್ಟಿಯಲ್ಲಿ ನಿರ್ಮಾಣಗೊಂಡಿರುವ ವಾಟರ್ ಅಮ್ಯೂಸ್‌ಮೆಂಟ್ ಪಾರ್ಕ್, ಬೋಟಿಂಗ್ ಶೀಘ್ರವೇ ಆರಂಭಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಆಲಮಟ್ಟಿಯಲ್ಲಿ ನಿಗಮಕ್ಕೆ 10 ಎಕರೆ ಜಾಗ 30 ವರ್ಷ ಲೀಸ್‌ಗೆ ನೀಡಿದರೇ, ನಿಗಮದ ವತಿಯಿಂದ ಪ್ರವಾಸಿಗರಿಗೆ ಅನುಕೂಲವಾಗಲು ಯಾತ್ರಿ ನಿವಾಸ, ಡಾರ್ಮೇಟರಿ, ಶೌಚಾಲಯ, ಸ್ನಾನಗೃಹ ಕಟ್ಟಡ ಕಟ್ಟಲಾಗುವುದು ಎಂದು ಕರ್ನಾಟಕ ರಾಜ್ಯ ಕೈಗಾರಿಕಾ ಮೂಲಸೌಲಭ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್.ಜೆ. ನಂಜಯ್ಯನಮಠ ಹೇಳಿದರು.
ಈಗಾಗಲೇ ಕೆಬಿಜೆಎನ್‌ಎಲ್ ಎಂ.ಡಿ ಅವರಿಗೆ ಪತ್ರ ಬರೆದು ನಿಗಮಕ್ಕೆ ಜಾಗ ನೀಡುವಂತೆ ಕೋರಲಾಗಿದೆ ಎಂದರು. ಶಿಕ್ಷಕರಿಗೆ ಕಡ್ಡಾಯ ಟಿಇಟಿ ರದ್ದುಗೊಳಿಸಲು ಕ್ರಮ ಕೈಗೊಂಡಿರುವ ಕಾನೂನು ಸಚಿವ ಎಚ್.ಕೆ. ಪಾಟೀಲ ಅವರನ್ನು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವತಿಯಿಂದ ಜಿಲ್ಲಾ ಘಟಕದ ಅಧ್ಯಕ್ಷ ಅರ್ಜುನ ಲಮಾಣಿ ನೇತೃತ್ವದಲ್ಲಿ ಶಿಕ್ಷಕರು ಸನ್ಮಾನಿಸಿದರು.
ಮುಖ್ಯ ಎಂಜಿನಿಯರ್ ಡಿ.ಬಸವರಾಜ, ಪಟ್ಟಣ ಸಹಕಾರಿ ಬ್ಯಾಂಕ್‌ಗಳ ಮಹಾಮಂಡಳ ಬೆಂಗಳೂರಿನ ನಿರ್ದೇಶಕ ಆನಂದಗೌಡ ಬಿರಾದಾರ, ಜಿಓಸಿಸಿ ಬ್ಯಾಂಕ್ ನಿರ್ದೇಶಕ ಅರವಿಂದ ಹೂಗಾರ, ಹನುಮಂತ ಕೊಣದಿ, ಅಲ್ಲಾಭಕ್ಷ ವಾಲೀಕಾರ, ಚನ್ನಬಸು, ಮಲ್ಲು ಟಕ್ಕಳಕಿ, ಎಂ.ಎಂ.ಮುಲ್ಲಾ, ಸಲೀಂ ದಡೆದ, ಆನಂದ ಗೌಡರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.