
ಆಲಮಟ್ಟಿ: ನಿರ್ಮಾಣಗೊಂಡು ಎರಡು ವರ್ಷ ಕಳೆದರೂ ಉದ್ಘಾಟನೆಯಾಗದೇ ಉಳಿದಿದ್ದ ‘ಆಲಮಟ್ಟಿ ವಾಟರ್ ಅಮ್ಯೂಸ್‌ಮೆಂಟ್ ಪಾರ್ಕ್’ ಉದ್ಘಾಟನೆಗೆ ಮಾರ್ಚ್ 1ರಂದು ಮಹೂರ್ತ ನಿಗದಿಯಾಗಿದೆ.
ವಾಟರ್ ಪಾರ್ಕ್ ನಿರ್ವಹಣೆಗೆ ಮೂರು ಬಾರಿ ಟೆಂಡರ್ ಕರೆದರೂ ಯಾರೂ ಮುಂದೆ ಬಾರದ ಕಾರಣ, ಉದ್ಘಾಟನೆ ವಿಳಂಬವಾಗಿತ್ತು. ನಾಲ್ಕನೇ ಬಾರಿಗೆ ಸೋಲಾಪುರದ ಶೋವರ್ ಆ್ಯಂಡ್ ಟೋವರ್ ಏಜೆನ್ಸಿಯವರಿಗೆ ಗುತ್ತಿಗೆ ನೀಡಲಾಗಿದೆ.
‘₹60 ಲಕ್ಷ ವಾರ್ಷಿಕ ಮೊತ್ತವನ್ನು ಕೆಬಿಜೆಎನ್ಎಲ್‌ಗೆ ಅವರು ಪಾವತಿಸಿ, ವಾಟರ್ ಪಾರ್ಕ್ ನಿರ್ವಹಣೆ ಮಾಡುವ ಷರತ್ತಿನೊಂದಿಗೆ ಗುತ್ತಿಗೆ ನೀಡಲಾಗಿದೆ’ ಎಂದು ಕಾರ್ಯನಿರ್ವಾಹಕ ಎಂಜಿನಿಯರ್ ತಾರಾಸಿಂಗ್ ದೊಡಮನಿ ಹೇಳಿದರು.
ಉದ್ಘಾಟನೆಗೆ ಸಚಿವರು: ವಾಟರ್ ಪಾರ್ಕ್ ಉದ್ಘಾಟನೆಗೆ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಹಾಗೂ ಸ್ಥಳೀಯ ಶಾಸಕರೂ ಆದ ಸಚಿವ ಶಿವಾನಂದ ಪಾಟೀಲ ಆಗಮಿಸಲಿದ್ದು ಮಾರ್ಚ್ 1ರಂದು ಬೆಳಿಗ್ಗೆ 11ಕ್ಕೆ ಉದ್ಘಾಟನೆಯಾಗಲಿದೆ ಎಂದು ಅಣೆಕಟ್ಟು ವಲಯದ ಮುಖ್ಯ ಎಂಜಿನಿಯರ್ ಡಿ. ಬಸವರಾಜ ತಿಳಿಸಿದರು.
ಕೃಷ್ಣಾ ಭಾಗ್ಯ ಜಲ ನಿಗಮದ ವತಿಯಿಂದ ಇಲ್ಲಿಯ ಹೆಲಿಪ್ಯಾಡ್ ಹಿಂಬದಿಯಲ್ಲಿ ₹9.45 ಕೋಟಿ ವೆಚ್ಚದಲ್ಲಿ 5 ಎಕರೆ ಪ್ರದೇಶದಲ್ಲಿ ನಿರ್ಮಾಣಗೊಂಡಿರುವ ಈ ವಾಟರ್ ಪಾರ್ಕ್ ನಿರ್ಮಾಣ ಆರಂಭಗೊಂಡಿದ್ದು 2022ರಲ್ಲಿ, ಬಹುತೇಕ ಪೂರ್ಣಗೊಂಡಿದ್ದು 2024ರಲ್ಲಿ. ಆಗ ನಾಲ್ಕೈದು ಬಾರಿ ಪ್ರಾಯೋಗಿಕವಾಗಿ ಚಾಲನೆ ಮಾಡಿ ಪರೀಕ್ಷೆ ಮಾಡಲಾಗಿತ್ತು. ಅಂದಿನಿಂದಲೂ ನಾನಾ ಕಾರಣಗಳಿಂದ ಉದ್ಘಾಟನೆಯಾಗದೇ ಪ್ರವಾಸಿಗರಿಗೆ ತೀವ್ರ ನಿರಾಶೆಯಾಗಿತ್ತು.
ಶುಲ್ಕ ನಿಗದಿ: ವಾಟರ್ ಪಾರ್ಕ್ ಪ್ರವೇಶಕ್ಕೆ ಹಿರಿಯರಿಗೆ ₹400, ಚಿಕ್ಕಮಕ್ಕಳಿಗೆ ₹200 ಶುಲ್ಕ ನಿಗದಿಪಡಿಸಲಾಗಿದೆ.
ವೈಶಿಷ್ಟ್ಯ: ಐದು ವಿಭಾಗಗಳಲ್ಲಿ ವಾಟರ್ ಪಾರ್ಕ್‌ನಲ್ಲಿ ವಿವಿಧ ಜಲ ಕ್ರೀಡೆಗಳಿವೆ. ಐದು ರೀತಿಯ ಪಾಂಡ್‌ಗಳಿದ್ದು, ಅದರೊಳಗೆ ಟ್ಯಾಂಕ್ ನಿರ್ಮಿಸಲಾಗಿದೆ. ಪಾಂಡ್‌ನೊಳಗೆ ಉಪಯೋಗಿಸಿದ ನೀರು ಶುದ್ಧೀಕರಿಸಿ, ಅದೇ ನೀರು ಮತ್ತೆ ಪಾಂಡ್‌ಗೆ ಬರುವಂತೆ ವ್ಯವಸ್ಥೆ ಮಾಡಲಾಗಿದೆ.
9 ಮೀಟರ್ ಎತ್ತರದಿಂದ ನೀರಿನೊಂದಿಗೆ ಜಾರುವ 150 ಮೀಟರ್ ಉದ್ದದ ಸ್ಲೈಡಿಂಗ್, 6 ಮೀಟರ್ ಎತ್ತರದ 90 ಮೀಟರ್ ಉದ್ದದ ಸ್ಲೈಡಿಂಗ್‌ಗಳು ಇವೆ. ಇನ್ನು ವಾಟರ್ ಪಾರ್ಕ್ ಪ್ರವೇಶದ್ವಾರ, ಪ್ರತೀಕ್ಷಣಾಲಯ, ಟಿಕೆಟ್ ಕೌಂಟರ್, ಲಾಕರ್ ಕೊಠಡಿ, ಮಹಿಳೆ ಮತ್ತು ಪುರುಷರಿಗೆ ಪ್ರತ್ಯೇಕ ಸ್ನಾನ ಗ್ರಹಗಳು (ಶಾವರ್), ಶೌಚಾಲಯಗಳು, ಕೆಫೆಟೇರಿಯಾ (ಕ್ಯಾಂಟಿನ್), ಪ್ರಾಥಮಿಕ ಚಿಕಿತ್ಸಾ ಕೇಂದ್ರದ ಕಟ್ಟಡವೂ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.