ADVERTISEMENT

ವಿಜಯಪುರ | ‘ಸಾಮಾಜಿಕ ಸಮಾನತೆ’ ಸಮಾವೇಶ ನಾಳೆ: ರಮೇಶ ಆಸಂಗಿ

​ಪ್ರಜಾವಾಣಿ ವಾರ್ತೆ
Published 21 ಜುಲೈ 2025, 6:08 IST
Last Updated 21 ಜುಲೈ 2025, 6:08 IST
ರಮೇಶ ಆಸಂಗಿ
ರಮೇಶ ಆಸಂಗಿ   

ವಿಜಯಪುರ: ‘ಸಂವಿಧಾನ ಮತ್ತು ಅಂಬೇಡ್ಕರ್’ ಸಾಮಾಜಿಕ ಸಮಾನತೆಗಾಗಿ ಜನ ಆಂದೋಲನ ಸಮಾವೇಶ ಜುಲೈ 22ರಂದು ಮಧ್ಯಾಹ್ನ 12.30ಕ್ಕೆ ನಗರದ ಕಂದಗಲ್ ಹುನುಮಂತರಾಯ ರಂಗಮಂದಿರದಲ್ಲಿ ಆಯೋಜಿಸಲಾಗಿದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ. ಬಿ.ಕೃಷ್ಣಪ್ಪ ಬಣ) ರಾಜ್ಯ ಸಂಘಟನಾ ಸಂಚಾಲಕ ರಮೇಶ ಆಸಂಗಿ ತಿಳಿಸಿದರು.

ನಗರದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಅವರು ಸಮಾವೇಶ ಉದ್ಘಾಟಿಸಲಿದ್ದಾರೆ ಎಂದರು.

ಸಮಾವೇಶಕ್ಕೂ ಮುನ್ನಾ ಬೆಳಿಗ್ಗೆ 11ಕ್ಕೆ ಜಲನಗರದ ಬೌದ್ಧ ವಿಹಾರದಿಂದ ಆರಂಭವಾಗುವ ಮೆರವಣಿಗೆಗೆ ಮಾಜಿ ಶಾಸಕ ಪ್ರೊ.ರಾಜು ಆಲಗೂರ ಚಾಲನೆ ನೀಡಲಿದ್ದಾರೆ. ರಾಯಚೂರು ತಂಡದಿಂದ ಹೋರಾಟದ ಹಾಡುಗಳು ಮತ್ತು ವಾದ್ಯಗಳ ಮೆರವಣಿಗೆ ನಡೆಯಲಿದೆ, ಸಮಾವೇಶದಲ್ಲಿ ಐದು ಸಾವಿರಕ್ಕೂ ಅಧಿಕ ಜನ ಭಾಗವಹಿಸಲಿದ್ದಾರೆ ಎಂದು ಹೇಳಿದರು.

ADVERTISEMENT

ಸಮಾವೇಶದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ, ವಿಧಾನ ಪರಿಷತ್ ಸದಸ್ಯ ಎಚ್.ಪಿ.ಸುಧಾಮದಾಸ, ಶಂಕರ ದೇವನೂರ, ಹೆಣ್ಣೂರು ಶ್ರೀನಿವಾಸ, ಸುಜಾತಾ ಚಲವಾದಿ, ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ, ಶಾಸಕ ಅಶೋಕ ಮನಗೂಳಿ, ಮಾಜಿ ಶಾಸಕ ಶರಣಪ್ಪ ಸುಣಗಾರ, ಅಬ್ದುಲ್ ಹಮೀದ್ ಮುಶ್ರಫ್, ಪ್ರಭುಗೌಡ ಪಾಟೀಲ ಮತ್ತಿತರರು ಭಾಗವಹಿಸಲಿದ್ದಾರೆ ಎಂದರು.

‘ಡಾ.ಬಿ.ಆರ್‌.ಅಂಬೇಡ್ಕರ್‌ ಪರಿಕಲ್ಪನೆಯ ಸಂವಿಧಾನದಲ್ಲಿ ಸಮಾನತೆ, ಸಾಮಾಜಿಕ ನ್ಯಾಯ, ಜಾತ್ಯತೀತ ಸ್ವರೂಪ, ಬ್ರಾತೃತ್ವ ಹಾಗೂ ಒಕ್ಕೂಟ ಪ್ರಭುತ್ವಕ್ಕೆ ಭದ್ರವಾದ ಅಡಿಪಾಯ ಹಾಕಲಾಗಿದೆ. ಈ ಮೂಲಭೂತ ಆಶಯಗಳಿಗೆ ಧಕ್ಕೆ ಉಂಟು ಮಾಡುವ ಯಾವುದೇ ಕೃತ್ಯಗಳನ್ನು ಯಾರೂ ಸಹಿಸಲು ಸಾಧ್ಯವಿಲ್ಲ’ ಎಂದರು.

‘ವಿಶ್ವದಲ್ಲೇ ಅತ್ಯಂತ ಬಲಿಷ್ಠವಾದ ಭಾರತದ ಸಂವಿಧಾನವನ್ನು ಕೆಲವರು ಸುಡುವುದು, ಅಂಬೇಡ್ಕರ್ ವಿರುದ್ಧ ಘೋಷಣೆ ಕೂಗುವುದು ಮಾಡುತ್ತಿದ್ದಾರೆ. ಸಂವಿಧಾನ ಸುಡುವುದು ಎಂದರೆ ಸಮಾನತೆ, ಪ್ರಜಾಪ್ರಭುತ್ವ, ಸಾಮಾಜಿಕ ನ್ಯಾಯ ಸೋದರತೆಯನ್ನು ಸುಟ್ಟಂತೆ’ ಎಂದರು. 

‘ಡಾ.ಬಿ.ಆರ್‌.ಅಂಬೇಡ್ಕರ್ ವಿಷಯದಲ್ಲಿ ಪ್ರೀತಿ ತೋರಿಸುವ ನಾಟಕ ಮಾಡುತ್ತಿರುವ ಆರ್‌ಎಸ್‌ಎಸ್‌ನವರು ಸಂವಿಧಾನದ ಆಶಯಕ್ಕೆ ವಿರುದ್ಧವಾಗಿ ಮಾತನಾಡುತ್ತಿರುವ ದತ್ತಾತ್ರೇಯ ಹೊಸಬಾಳೆ ಅವರನ್ನು ಸಂಘದಿಂದ ಹೊರಹಾಕಿ, ಅವರ ಮೇಲೆ ಕ್ರಮ ಕೈಗೊಳ್ಳಬೇಕು, ಇಲ್ಲವಾದರೆ ಆರ್‌ಎಸ್‌ಎಸ್‌ ದೇಶದ್ರೋಹಿ ಸಂಘಟನೆ ಎಂಬುದು ಬಹಿರಂಗವಾಗಿ ಒಪ್ಪಿಕೊಳ್ಳಬೇಕು’ ಎಂದು ಸವಾಲು ಹಾಕಿದರು.

ಡಿಎಸ್‌ಎಸ್‌ ಪ್ರಮುಖರಾದ ರೇಣುಕಾ ಮಾದರ, ಯಶೋಧಾ ಮೇಲಿನಕೇರಿ, ಶರಣು ಸಿಂದೆ, ಪ್ರಕಾಶ ಗುಡಿಮನಿ, ಲಕ್ಕಪ್ಪ ಬಡಿಗೇರ, ಪರಶುರಾಂ ದಿಂಡವಾರ, ಸುರೇಶ ನಡಗಡ್ಡಿ, ಅಶೋಕ ಚಲವಾದಿ, ವಿನಾಯಕ ಗುಣಸಾಗರ, ಅನೀಲ ಕೊಡತೆ, ಬಿ.ಎಸ್‌.ತಳವಾರ, ಸುಭದ್ರಾ ಮೇಲಿನಮನಿ, ಚಂದ್ರಕಲಾ ಮಸಳಿಕೇರಿ, ರಾಜಕುಮಾರ ಸಿಂದಗೇರಿ, ಲಕ್ಷ್ಮಣ ಹಾಲಿಹಾಳ, ಸಾಯಿನಾಥ ಬನಸೋಡೆ, ರವಿಚಂದ್ರ ಚಲವಾದಿ ಇದ್ದರು.

ಸಂವಿಧಾನ ಉಳಿದರೆ ಮಾತ್ರ ಭಾರತ ಉಳಿಯಲಿದೆ. ಸಂವಿಧಾನದಲ್ಲಿ ಮಾನವೀಯತೆ ಮನುಷ್ಯತ್ವ ಸಾಮಾಜಿಕ ನ್ಯಾಯಕ್ಕೆ ಒತ್ತು ನೀಡಲಾಗದೆ. ಅಂಬೇಡ್ಕರ್‌ ಪರಿಕಲ್ಪನೆ ಸಹಿಸಲಾಗದವರಿಗೆ ಸಂವಿಧಾನ ಪಾಠ ಹೇಳಬೇಕಿದೆ
ರಮೇಶ ಆಸಂಗಿ ರಾಜ್ಯ ಸಂಘಟನಾ ಸಂಚಾಲಕ ಡಿಎಸ್‌ಎಸ್‌  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.