ADVERTISEMENT

ತಳ ಸಮುದಾಯದ ರಕ್ಷಕ ಸಂವಿಧಾನ: ಎಲ್.ಎನ್. ಮುಕುಂದರಾಜ್

‘ನಮ್ಮ ಸಂವಿಧಾನ ನಮ್ಮ ಹೆಮ್ಮೆ’, ‘ದೇವರಗೆಣ್ಣೂರು’ ಪುಸ್ತಕಗಳ ಲೋಕಾರ್ಪಣೆ

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2025, 6:43 IST
Last Updated 1 ಸೆಪ್ಟೆಂಬರ್ 2025, 6:43 IST
ವಿಜಯಪುರದ ಕಂದಗಲ್‌ ಹನುಮಂತರಾಯ ರಂಗಮಂದಿರದಲ್ಲಿ ಭಾನುವಾರ ಸೋಮಲಿಂಗ ಗೆಣ್ಣೂರ ರಚಿತ ‘ನಮ್ಮ ಸಂವಿಧಾನ ನಮ್ಮ ಹೆಮ್ಮೆ’ ಹಾಗೂ ‘ದೇವರಗೆಣ್ಣೂರು’ ಪುಸ್ತಕಗಳನ್ನು ಗಣ್ಯರು ಲೋಕಾರ್ಪಣೆ ಮಾಡಿದರು
ವಿಜಯಪುರದ ಕಂದಗಲ್‌ ಹನುಮಂತರಾಯ ರಂಗಮಂದಿರದಲ್ಲಿ ಭಾನುವಾರ ಸೋಮಲಿಂಗ ಗೆಣ್ಣೂರ ರಚಿತ ‘ನಮ್ಮ ಸಂವಿಧಾನ ನಮ್ಮ ಹೆಮ್ಮೆ’ ಹಾಗೂ ‘ದೇವರಗೆಣ್ಣೂರು’ ಪುಸ್ತಕಗಳನ್ನು ಗಣ್ಯರು ಲೋಕಾರ್ಪಣೆ ಮಾಡಿದರು   

ವಿಜಯಪುರ: ತುಳಿತಕ್ಕೊಳಗಾದ, ಶೋಷಿತ ತಳ ಸಮುದಾಯವನ್ನು ಇಂದು ಮೇಲಕ್ಕೆತ್ತಿ ಕಾಪಾಡುತ್ತಿರುವುದು ಅಂಬೇಡ್ಕರ್‌ ರಚಿಸಿದ ಸಂವಿಧಾನವೇ ಹೊರತು, ಯಾವುದೇ ದೇವರಲ್ಲ. ಹೀಗಾಗಿ ಅಂಬೇಡ್ಕರ್ ಅವರನ್ನು ಪದೆ ಪದೇ ನೆನಪಿಸಿಕೊಳ್ಳಬೇಕು ಮತ್ತು ಸಂವಿಧಾನ ಕಾಪಾಡಿಕೊಳ್ಳಬೇಕು ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್.ಎನ್. ಮುಕುಂದರಾಜ್ ಹೇಳಿದರು.

ನಗರದ ಕಂದಗಲ್‌ ಹನುಮಂತರಾಯ ರಂಗಮಂದಿರದಲ್ಲಿ ಭಾನುವಾರ ವಿಜಯಪುರ ಹೆಚ್ಚುವರಿ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಅವರು ರಚಿಸಿರುವ ‘ನಮ್ಮ ಸಂವಿಧಾನ ನಮ್ಮ ಹೆಮ್ಮೆ’ ಹಾಗೂ ‘ದೇವರಗೆಣ್ಣೂರು’ ಪುಸ್ತಕಗಳ ಲೋಕಾರ್ಪಣೆ ಸಮಾರಂಭದಲ್ಲಿ ಮಾತನಾಡಿದ ಅವರು, ದೇಶದ ಸಮೃದ್ಧತೆ, ಸೌಹಾರ್ದತೆ ಮೂಡಲು ಯಾವುದೇ ದೇವರು ಕಾರಣವಲ್ಲ, ಅಂಬೇಡ್ಕರ್ ಕಾರಣ ಎಂದರು.

‘ಭಾರತೀಯರು ಸ್ವಾತಂತ್ರ್ಯ ಕಳೆದುಕೊಂಡಿದ್ದು ಬ್ರಿಟೀಷರಿಂದಲೋ ಅಥವಾ ಇನ್ನಾರಿಂದಲೋ ಎಂಬುದೇ ಗೊತ್ತಿಲ್ಲ. ಸಾವಿರಾರು ವರ್ಷಗಳಿಂದ ಸ್ವಾತಂತ್ರ್ಯ, ವಿದ್ಯೆ, ಹಕ್ಕು ಇಲ್ಲದೆ ಬದುಕಿದ್ದೆವು, ಇದೆಲ್ಲವನ್ನೂ ಪಡೆಯಲು ಸಾಧ್ಯವಾಗಿದ್ದು ಸಂವಿಧಾನದಿಂದ’ ಎಂದರು.

ADVERTISEMENT

‘ವ್ಯಕ್ತಿಯೊಬ್ಬ ಪ್ರಾಮಾಣಿಕನಾಗಿದ್ದಾಗ ಮಾತ್ರ ಆತನಿಂದ ಉತ್ತಮ ಸಾಹಿತ್ಯ ಬರೆಯಲು ಸಾಧ್ಯ. ಗೆಣ್ಣೂರ ಪ್ರಾಮಾಣಿಕ ಎಂಬುದನ್ನು ಅರ್ಥ ಮಾಡಿಕೊಳ್ಳಲು ಕೃತಿಗಳು ಸಾಕು’ ಎಂದರು.

ಗುಲ್ಬರ್ಗಾ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥ ಪ್ರೊ.ಎಚ್.ಟಿ.ಪೋತೆ, ಸರ್ಕಾರಿ ಅಧಿಕಾರಿಗಳಿಗೆ ಕುವೆಂಪು ಗಾಂಧಿ, ಬಸವಣ್ಣ, ಅಂಬೇಡ್ಕರ್ ಮನಸ್ಥಿತಿ ಬರಬೇಕು. ದರ್ಪ ತೋರಿಸದೆ ಜನರ ಸೇವೆ ಮಾಡಬೇಕು ಎಂದು ಸಲಹೆ ನೀಡಿದರು.

‘ಅಂಬೇಡ್ಕರ್ ಸಂವಿಧಾನದ ಬದಲು ದೇಶದಲ್ಲಿ ಮನು ಸ್ಮೃತಿ ತರಲು ಪ್ರಯತ್ನ ನಡೆದಿದೆ. ಅಂಬೇಡ್ಕರ್‌ಗೆ ಅಪಮಾನ ಆದಾಗ ಅಕ್ಷರವಂತರು, ಶೋಷಿತರು ಮಾತನಾಡುತ್ತಿಲ್ಲದಿರುವುದು ವಿಷಾದನೀಯ’ ಎಂದರು.

ಜಿಲ್ಲಾಧಿಕಾರಿ ಡಾ.ಆನಂದ ಕೆ., ಸರ್ಕಾರಿ ಕೆಲಸದ ಒತ್ತಡದ ನಡುವೆ ಸಾಹಿತ್ಯ ಬರೆಯುವದು ಕಷ್ಟದ ಕೆಲಸ. ಜನರ ಕೆಲಸದ ನಡುವೆ ಗೆಣ್ಣೂರ ಅವರು ಸಾಹಿತ್ಯ ರಚಿಸಿರುವುದು ಶ್ಲಾಘನೀಯ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ, ‘ದೇವರಗೆಣ್ಣೂರು’ ಕೃತಿಯಲ್ಲಿ ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವದ ಆಶಯ ಎದ್ದು ಕಾಣುತ್ತದೆ. ಕೃತಿಯಲ್ಲಿ ಬಿಜಾಪುರದ ಭಾಷೆ ಚನ್ನಾಗಿ ಬಳಕೆಯಾಗಿದೆ. ಅವಮಾನಗಳ ಸರಮಾಲೆ ಕೃತಿಯಲ್ಲಿ ಇದೆ. ಈ ಆತ್ಮಕಥೆ ನಾಟಕದ ರೂಪದಲ್ಲಿ ಬರಬೇಕು’ ಎಂದರು. 

ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ವಿಜಯಾ ಕೋರಿಶೆಟ್ಟಿ, ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಹಾಸಿಂಪೀರ ವಾಲಿಕಾರ, ಮೇಜರ್ ಸಿದ್ದಲಿಂಗಯ್ಯ ಹಿರೇಮಠ, ಅಡಿವೆಪ್ಪ ಸಾಲಗಲ್, ರಾಜಶೇಖರ ಯಡಹಳ್ಳಿ, ಸುರೇಶ ಶೆಡಶ್ಯಾಳ, ನಾಗರಾಜ ಲಂಬು, ಪ್ರಕಾಶಕ ಗಣೇಶ ಅಮೀನಗಡ, ಪ್ರೊ.ದೊಡ್ಡಣ್ಣ ಭಜಂತ್ರಿ, ಸುಜಾತಾ ಚಲುವಾದಿ, ನಾಗರಾಜ ಲಂಬು, ರಮೇಶ ಆಸಂಗಿ, ಮಲ್ಲಿಕಾರ್ಜುನ ಸಂದಿಮನಿ, ಅಭಿಷೇಕ ಚಕ್ರವರ್ತಿ ಇದ್ದರು.

ಬಸವಣ್ಣನ ನಾಡನ ಜನರು ವಿಭೂತಿ ಹಚ್ಚಿಕೊಳ್ಳಬೇಕು ಆದರೆ ಎಲ್ಲರೂ ಕುಂಕುಮ ಇಟ್ಟುಕೊಂಡು ತಿರುಗಾಡುವುದು ಬೇಸರದ ಸಂಗತಿ 
–ಎಲ್.ಎನ್.ಮುಕುಂದರಾಜ್ಅಧ್ಯಕ್ಷ ಕರ್ನಾಟಕ ಸಾಹಿತ್ಯ ಅಕಾಡೆಮಿ
ಶಾಲೆಗಳಲ್ಲಿ ಇಂದು ಹೋಮ ಹವನ ಮಾಡುವುದು ಕಲಿಸಲಾಗುತ್ತದೆ. ‌ಆದರೆ ಸಂವಿಧಾನ ಓದುವುದನ್ನು ಕಲಿಸುತ್ತಿಲ್ಲ ಎಂಬುದು ಬೇಸರದ ಸಂಗತಿ
  -ಪ್ರೊ.ಎಚ್.ಟಿ.ಪೋತೆ ಮುಖ್ಯಸ್ಥ ಕನ್ನಡ ವಿಭಾಗ ಗುಲ್ಬರ್ಗಾ ವಿಶ್ವವಿದ್ಯಾಲಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.