ADVERTISEMENT

ಅಂಬೇಡ್ಕರ ಅವರನ್ನು ಭಗವಾನ್ ಆಗಿಸುವುದು ಬೇಡ: ಭಾರತೀಯ ಬೌದ್ಧ ಮಹಾಸಭಾ ಅಧ್ಯಕ್ಷ

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2025, 14:47 IST
Last Updated 13 ಏಪ್ರಿಲ್ 2025, 14:47 IST
<div class="paragraphs"><p>ಡಾ.ಬಿ.ಆರ್‌.ಅಂಬೇಡ್ಕರ್‌ ಮೊಮ್ಮಗ, ಭಾರತೀಯ ಬೌದ್ಧ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ರಾಜರತ್ನ ಅಂಬೇಡ್ಕರ್‌</p></div>

ಡಾ.ಬಿ.ಆರ್‌.ಅಂಬೇಡ್ಕರ್‌ ಮೊಮ್ಮಗ, ಭಾರತೀಯ ಬೌದ್ಧ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ರಾಜರತ್ನ ಅಂಬೇಡ್ಕರ್‌

   

ವಿಜಯಪುರ: ‘ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್‌ ಅವರನ್ನು ಭಗವಾನ್ ಆಗಿಸುವುದು ಬೇಡ, ಅವರ ವಿಚಾರಗಳನ್ನು ಪೂಜಿಸಿ, ಅನುಸರಿಸಿ, ಪಾಲಿಸಬೇಕು’ ಎಂದು ಡಾ.ಬಿ.ಆರ್‌.ಅಂಬೇಡ್ಕರ್‌ ಮೊಮ್ಮಗ, ಭಾರತೀಯ ಬೌದ್ಧ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ರಾಜರತ್ನ ಅಂಬೇಡ್ಕರ್‌ ಎಂದರು.

ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಅಂಬೇಡ್ಕರ್‌ ಜಯಂತಿಯಂದು ಅವರ ಭಾವಚಿತ್ರ ಇಟ್ಟು, ಡಿಜೆ ಹಚ್ಚಿ ಕುಣಿಯುವ ಮೂಲಕ ಜಯಂತಿ ಆಚರಣೆ ಮಾಡುವುದು ಬೇಡ, ಕೆಲವು ವ್ಯಕ್ತಿಗಳು ಅಂಬೇಡ್ಕರ್‌ ಜಯಂತಿಗೆ ಡಿಜೆ ಹಚ್ಚಲು ದೇಣಿಗೆ ನೀಡಿ, ಅವರ ಆಶಯಗಳಿಗೆ ವಿರುದ್ಧದ ವಿಚಾರಗಳಿಗೆ ಮನ್ನಣೆ ನೀಡುವ ಷಡ್ಯಂತ್ರ ನಡೆಸಿದ್ದಾರೆ’ ಎಂದು ಆತಂಕ ವ್ಯಕ್ತಪಡಿಸಿದರು.

ADVERTISEMENT

ದಲಿತರಿಗಷ್ಟೇ ಮತದಾನ: ‘ಶಿಕ್ಷಕರು ಹಾಗೂ ಪದವೀಧರರ ಮತಕ್ಷೇತ್ರಗಳಿಗೆ ಶಿಕ್ಷಕರು, ಪದವೀಧರರು ಮಾತ್ರ ಮತದಾರರು, ಉಳಿದವರಿಗೆ ಅಲ್ಲಿ ಮತದಾನಕ್ಕೆ ಅವಕಾಶವಿಲ್ಲ. ಅಂತೆಯೇ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಮೀಸಲು ಮತಕ್ಷೇತ್ರಗಳಲ್ಲಿ ದಲಿತರಿಗಷ್ಟೇ ಮತದಾನ ಮಾಡುವ ಅವಕಾಶ ಕಲ್ಪಿಸಬೇಕು. ಈ ತೆರನಾದ ವ್ಯವಸ್ಥೆ ಜಾರಿಯಾಗಲು ಪ್ರಬಲವಾದ ಜನಾಂದೋಲನ ರೂಪಿತವಾಗಬೇಕಿದೆ’ ಎಂದರು. 

‘ಬಿಹಾರದ ಬುದ್ಧಗಯಾದ ಮಹಾಬೋಧಿ ಮಹಾವಿಹಾರದ ಆಡಳಿತವನ್ನು ಸಂಪೂರ್ಣ ಬೌದ್ಧರ ಕೈಗೆ ನೀಡಬೇಕು. ಅಲ್ಲಿ ಬೇರೆಯವರಿಗೆ ಅವಕಾಶ ನೀಡಬಾರದು’ ಎಂದು ಹೇಳಿದರು.

‘ಬುದ್ಧಗಯಾದಲ್ಲಿ ಇತ್ತೀಚಿನ ದಿನಗಳಲ್ಲಿ ಬುದ್ಧನ ಆಶಯಗಳಿಗೆ ವಿರುದ್ಧವಾದ ಆಚರಣೆಗಳು ನಡೆಯುತ್ತಿವೆ. ಹೀಗಾಗಿ 1949ರ ಬಿ.ಟಿ. (ಬುದ್ಧಗಯಾ ಟ್ರಸ್ಟ್‌ ಆ್ಯಕ್ಟ್‌) ಕಾಯ್ದೆ ಬದಲಾವಣೆ ಮಾಡಬೇಕು, ಈ ನಿಟ್ಟಿನಲ್ಲಿ ಕೇಂದ್ರ ಮತ್ತು ಬಿಹಾರ ಸರ್ಕಾರಕ್ಕೂ ಮನವಿ ಮಾಡಿಕೊಳ್ಳುತ್ತಲೇ ಬಂದಿದ್ದೇವೆ. ಆದರೆ, ಸರ್ಕಾರಗಳು ನಮ್ಮ ಕೂಗಿಗೆ ಮನ್ನಣೆ ನೀಡುತ್ತಿಲ್ಲ. ಈ ವಿಷಯದಲ್ಲಿ ಮಧ್ಯಪ್ರವೇಶಿಸುವಂತೆ ವಿಶ್ವಸಂಸ್ಥೆ ಮೊರೆ ಹೋಗಲಾಗುವುದು’ ಎಂದು ಹೇಳಿದರು.

‘ಕರ್ನಾಟಕದಲ್ಲಿ ದಲಿತ ಮುಖ್ಯಮಂತ್ರಿ ಆಗಬೇಕು ಎನ್ನುವುದಕ್ಕಿಂತ ದಲಿತರ ಉದ್ಧಾರ ಯಾರು ಮಾಡುತ್ತಾರೋ ಅವರು ಮುಖ್ಯಮಂತ್ರಿಯಾಗಬೇಕು. ದಲಿತರು ರಾಷ್ಟ್ರಪತಿಯಾಗಿದ್ದರೂ ದಲಿತರ ಪರಿಸ್ಥಿತಿ ಬದಲಾಗಿಲ್ಲ, ಬದಲಿಗೆ ಡಾ.ಬಿ.ಆರ್. ಅಂಬೇಡ್ಕರ್‌ ಅವರ ಆಶಯ ಆಧರಿಸಿ ಯಾರು ಆಡಳಿತ ನಡೆಸುತ್ತಾರೋ, ಅವರ ವಿಚಾರಗಳಿಗೆ ಮನ್ನಣೆ ನೀಡುತ್ತಾರೋ ಅವರು ಮುಖ್ಯಮಂತ್ರಿಯಾಗಬೇಕು, ಜಾತಿ ಆಧರಿಸಿ ದಲಿತರು ಮುಖ್ಯಮಂತ್ರಿಯಾದರೆ ಏನು ಪ್ರಯೋಜನವಿಲ್ಲ’ ಎಂದರು.

‘ಬ್ರಾಹ್ಮಣ ದಲಿತರ ಉದ್ಧಾರ ಬಯಿಸಿದರೆ ಆತನನ್ನು ಒಪ್ಪಿಕೊಳ್ಳೋಣ, ನಾವು ಬ್ರಾಹ್ಮಣ ವಿರೋಧಿಗಳಲ್ಲ, ಶ್ರೇಣಿಕೃತ ವ್ಯವಸ್ಥೆಯನ್ನು ಪೋಷಿಸುವ ಬ್ರಾಹ್ಮಣವಾದದ ವಿರೋಧಿಗಳು’ ಎಂದರು.

‘ಬಿಜೆಪಿ ಮಾಜಿ ಸಂಸದ ಅನಂತಕುಮಾರ್‌ ಹೆಗಡೆ ಸಂವಿಧಾನ ಬದಲಾವಣೆ ಮಾತುಗಳನ್ನು ಆರಂಭಿಸಿದವರು, ಸಂವಿಧಾನ ಬದಲಾವಣೆ ಆತಂಕಕಾರಿ, ಒಂದೆಡೆ ಖಾಸಗೀಕರಣದ ಮೂಲಕ ಮೀಸಲಾತಿ ಹತ್ತಿಕ್ಕುವ ಕೆಲಸ ನಡೆದಿದೆ, ಸಂವಿಧಾನದ ಆಶಯಗಳನ್ನು ಬುಡಮೇಲು ಮಾಡುವ ಪ್ರಯತ್ನದ ವಿರುದ್ಧ ಪ್ರಬಲ ಧ್ವನಿ ಮೊಳಗಬೇಕಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.