
ವಿಜಯಪುರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಅಂಬಿಗರ ಚೌಡಯ್ಯ ಜಯಂತಿ ಕಾರ್ಯಕ್ರಮ ನಡೆಯಿತು
ವಿಜಯಪುರ: ‘ವಚನ ಪರಂಪರೆ, ತಮ್ಮ ನೇರ ವಚನಗಳ ಮೂಲಕ ಸಾಮಾಜಿಕ ಸಮಾನತೆಯನ್ನು ಸಾರಿದವರು ನಿಜಶರಣ ಅಂಬಿಗರ ಚೌಡಯ್ಯನವರು’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಔದ್ರಾಮ ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯಿತಿ ಸಹಯೋಗದಲ್ಲಿ ಬುಧವಾರ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ನಿಜಶರಣ ಅಂಬಿಗರ ಚೌಡಯ್ಯ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ಅಂಬಿಗರ ಚೌಡಯ್ಯ ಅವರು ಕೇವಲ ವಚನಕಾರರು ಮಾತ್ರವಲ್ಲ. ಶ್ರಮಜೀವಿಗಳ ಆಶಯ ಮತ್ತು ಧ್ವನಿಯಾಗಿದ್ದರು. ದುಡಿಯುವ ವರ್ಗದ ಗೌರವ, ಸಮಾನತೆ, ಮಾನವೀಯತೆ ಹಾಗೂ ಸಮಾಜದಲ್ಲಿನ ಅಸಮಾನತೆಗಳ ವಿರುದ್ಧದ ಹೋರಾಟ ಅವರ ವಚನಗಳಲ್ಲಿ ಸ್ಪಷ್ಟವಾಗಿ ವ್ಯಕ್ತವಾಗುತ್ತದೆ. ಶರಣರ ವಚನ ಸಾಹಿತ್ಯವು ಇಂದಿನ ಸಮಾಜಕ್ಕೆ ದಿಕ್ಕು ತೋರಿಸುವ ಶಾಶ್ವತ ಮೌಲ್ಯಗಳ ಭಂಡಾರವಾಗಿದೆ’ ಎಂದು ಹೇಳಿದರು.
ಶಿವಶರಣಪ್ಪ ಶಿರೂರ ಅವರು ಉಪನ್ಯಾಸ ನೀಡಿ, ಅಂಬಿಗರ ಚೌಡಯ್ಯನವರ ಜೀವನ ಮತ್ತು ವಚನಗಳ ಸಾಮಾಜಿಕ ಹಿನ್ನೆಲೆಯನ್ನು ವಿವರಿಸಿದರು. ಅವರ ವಚನಗಳು ಶೋಷಿತ ವರ್ಗದ ಪರವಾಗಿ ಮಾತನಾಡುವ ಶಕ್ತಿಶಾಲಿ ಸಾಹಿತ್ಯವಾಗಿದ್ದು, ಇಂದಿಗೂ ಸಮಕಾಲೀನವಾಗಿದೆ. ಯುವಜನತೆ ವಚನ ಸಾಹಿತ್ಯದ ಮೂಲಕ ಜೀವನ ಮೌಲ್ಯಗಳನ್ನು ಅರಿಯಬೇಕು. ಶರಣರ ವಚನಗಳ ಸಾರ ಅರಿಯುವ ಮೂಲಕ ಜೀವನದಲ್ಲಿ ಅಳವಡಿಸಿಕೊಳ್ಳೋಣ’ ಎಂದು ಹೇಳಿದರು.
ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ರಾಜಶೇಖರ ಧೈವಾಡಿ, ಕನ್ನಡ ಮತ್ತು ಸಂಸ್ಕೃತ ಇಲಾಖೆಯ ಅಧೀಕ್ಷಕಿ ಶ್ರೀದೇವಿ, ಎಂ.ಆರ್. ಗುರಿಕರ, ಜಿಲ್ಲಾಧಿಕಾರಿ ಕಚೇರಿ ಅಧಿಕಾರಿ, ಸಿಬ್ಬಂದಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ವಿವಿಧ ಸಂಘ–ಸಂಸ್ಥೆಗಳ ಪದಾಧಿಕಾರಿಗಳು, ವಿವಿಧ ಸಮುದಾಯದ ಮುಖಂಡರು ಇದ್ದರು.
‘ಮೌಢ್ಯ ಕಿತ್ತು ಹಾಕಲು ಶ್ರಮಿಸಿದ ಚೌಡಯ್ಯ’
ಸಿಂದಗಿ: ‘12ನೇ ಶತಮಾನದ ಶರಣಶ್ರೇಷ್ಠ ಅಂಬಿಗರ ಚೌಡಯ್ಯನವರು ನಿಷ್ಠುರ ವಚನಕಾರರಾಗಿದ್ದರು. ವಚನಗಳ ಚಾಟಿಯೇಟಿನಿಂದ ಸಮಾಜದಲ್ಲಿಯ ಮೌಢ್ಯಗಳನ್ನು ಕಿತ್ತು ಹಾಕಲು ಶ್ರಮಿಸಿದರು’ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.
ಪಟ್ಟಣದ ಅಂಬಿಗರ ಚೌಡಯ್ಯನವರ ವೃತ್ತದಲ್ಲಿ ಬುಧವಾರ ಅಂಬಿಗರ ಚೌಡಯ್ಯನವರ ಜಯಂತ್ಯುತ್ಸವ ಅಂಗವಾಗಿ ಅವರ ಪುತ್ಥಳಿಗೆ ಗೌರವಾರ್ಪಣೆ ಸಲ್ಲಿಸಿ ಮಾತನಾಡಿದರು.
ತಹಶೀಲ್ದಾರ್ ಕರೆಪ್ಪ ಬೆಳ್ಳಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶ ಪೂಜಾರಿ, ನೀಲಮ್ಮ ಯಡ್ರಾಮಿ, ಜಯಶ್ರೀ ಹದನೂರ, ಸಂತೋಷ ಹರನಾಳ, ಬಸವರಾಜ ಯರನಾಳ, ಭೀಮೂ ರೋಡಗಿ, ಕೋಲಿ ಕಬ್ಬಲಿಗ ಸಮುದಾಯದ ಮುಖಂಡರು ಭಾಗವಹಿಸಿದ್ದರು.
ತಾಲ್ಲೂಕು ಆಡಳಿತದಿಂದ ಜಯಂತ್ಯುತ್ಸವ: ಇಲ್ಲಿಯ ತಾಲ್ಲೂಕು ಪ್ರಜಾಸೌಧ ಆವರಣದಲ್ಲಿ ತಾಲ್ಲೂಕು ಆಡಳಿತದಿಂದ ನಡೆದ ಅಂಬಿಗರ ಚೌಡಯ್ಯನವರ ಜಯಂತ್ಯುತ್ಸವ ಸಮಾರಂಭದಲ್ಲಿ ಕೋಲಿ ಕಬ್ಬಲಿಗ ಸಮುದಾಯದ ಮುಖಂಡ, ವಕೀಲ ಮಲ್ಲೂ ಗತ್ತರಗಿ ಉಪನ್ಯಾಸ ನೀಡಿ, ‘12ನೇ ಶತಮಾನದಲ್ಲಿ ಅಣ್ಣ ಬಸವಣ್ಣವರಿಂದ ಶರಣರಲ್ಲಿಯೇ ಶ್ರೇಷ್ಠ ಶರಣ ಎಂದು ಕರೆಯಿಸಿಕೊಂಡ ಅಂಬಿಗರ ಚೌಡಯ್ಯನವರು ಸಮಾಜದ ಓರೆಕೋರೆ ತಿದ್ದಲು ಅತ್ಯಂತ ಕಠೋರವಾದ ವಚನಗಳನ್ನು ರಚಿಸಿದ್ದಾರೆ’ ಎಂದು ತಿಳಿಸಿದರು.
ಕೋಲಿ ಕಬ್ಬಲಿಗ ಸಮುದಾಯದ ರಾಜ್ಯ ಮುಖಂಡರಾಗಿದ್ದ ವಿಠ್ಠಲ ಹೆರೂರ ಅವರನ್ನು ಸ್ಮರಿಸಿದ ಅವರು, ‘ಅವರ ಪರಿಶ್ರಮದಿಂದಾಗಿ ಅಂಬಿಗರ ಚೌಡಯ್ಯಗುರುಪೀಠ ಸ್ಥಾಪನೆಗೊಂಡಿತು. ಅಂಬಿಗರ ಚೌಡಯ್ಯನವರ ಜಯಂತಿ ಸರ್ಕಾರಿ ಆಚರಣೆಯಾಯಿತು. ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ಅಂಬಿಗರ ಚೌಡಯ್ಯ ಅಧ್ಯಯನಪೀಠ ಆರಂಭಗೊಂಡಿತು’ ಎಂದು ವಿವರಿಸಿದರು.
ತಹಶೀಲ್ದಾರ್ ಕರೆಪ್ಪ ಬೆಳ್ಳಿ, ಲಿಂಬೆ ಅಭಿವೃದ್ಧಿ ಮಂಡಳಿ ಮಾಜಿ ಅಧ್ಯಕ್ಷ ಅಶೋಕ ಅಲ್ಲಾಪುರ, ಕಸಾಪ ತಾಲ್ಲೂಕು ಶಾಖೆ ಅಧ್ಯಕ್ಷ ವೈ.ಸಿ. ಮಯೂರ, ಶೈಲಜಾ ಸ್ಥಾವರಮಠ ಮಾತನಾಡಿದರು. ಪರಶು ಗೂಳುರ, ನಿವೃತ್ತ ಪ್ರಾಚಾರ್ಯ ಬಿ.ಎಂ. ಬಿರಾದಾರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.