ADVERTISEMENT

ವಿಜಯಪುರ: ಪ್ರಾಣಿಬಲಿ ತಡೆಗೆ ದಯಾನಂದ ಸ್ವಾಮೀಜಿ ಆಗ್ರಹ

​ಪ್ರಜಾವಾಣಿ ವಾರ್ತೆ
Published 23 ಜನವರಿ 2026, 2:19 IST
Last Updated 23 ಜನವರಿ 2026, 2:19 IST
ದಯಾನಂದ ಸ್ವಾಮೀಜಿ
ದಯಾನಂದ ಸ್ವಾಮೀಜಿ   

ವಿಜಯಪುರ: ಸಿಂದಗಿ ತಾಲ್ಲೂಕಿನ ಯಂಕಂಚಿಯ ದಾವಲ್‌ ಮಲಿಕ್ ದರ್ಗಾದಲ್ಲಿ ನಡೆಯುತ್ತಿರುವ ಉರುಸ್‌(ಜಾತ್ರೆ)ನಲ್ಲಿ ದರ್ಗಾದ ಮುಂಭಾಗ ಸುತ್ತಮುತ್ತಲಿನ ಜಾತ್ರಾ ಪರಿಸರ ಹಾಗೂ ರಸ್ತೆಯ ಇಕ್ಕೆಲಗಳಲ್ಲಿ, ಹೊರವಲಯ ಹಾಗೂ ಸಾರ್ವಜನಿಕ ಧಾರ್ಮಿಕ ಸಮಾವೇಶದಲ್ಲಿ ಆಡು, ಕುರಿ, ಕೋಳಿ ಮುಂತಾದ ಯಾವುದೇ ಪ್ರಾಣಿಗಳ ಬಲಿ ನಡೆಯದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಎಂದು ವಿಶ್ವ ಪ್ರಾಣಿ ಕಲ್ಯಾಣ ಮಂಡಳಿ ಮತ್ತು ಪಶು ಪ್ರಾಣಿಬಲಿ ನಿರ್ಮೂಲನ ಜಾಗೃತಿ ಮಹಾಸಂಘ ಹಾಗೂ ಬಸವ ಧರ್ಮ ಜ್ಞಾನ ಪೀಠದ ಅಧ್ಯಕ್ಷ ದಯಾನಂದ ಸ್ವಾಮೀಜಿ ಆಗ್ರಹಿಸಿದ್ದಾರೆ.

ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದರ್ಗಾ ಹಾಗೂ ದೇವಾಲಯದ ಮೇಲೆ ಪ್ರಾಣಿಗಳ ತೂರಾಟ, ಪ್ರಾಣಿ ಅಂಗಾಗಗಳ ನೈವೇದ್ಯ ಸಲ್ಲಿಕೆ, ಪ್ರದರ್ಶನ ಇತ್ಯಾದಿ ಕಾನೂನು ಬಾಹಿರ ಕೃತ್ಯಗಳು ಜರುಗಿಸದಂತೆ ಹೈಕೋರ್ಟ್ ಆದೇಶವಿದ್ದು, ರಾಜ್ಯ ಸರ್ಕಾರ, ವಿಜಯಪುರ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.

ಪ್ರಾಣಿಬಲಿಯು ಅನಾಗರಿಕವೂ, ಅಂಧಶ್ರದ್ಧೆಯೂ, ಪರಿಸರ ಮಾಲಿನ್ಯಕಾರಕವೂ ಆಗಿದೆ. ಇದು ಕಾನೂನು ಮತ್ತು ಧರ್ಮ ವಿರೋಧಿಯಾಗಿದೆ. ಆದ್ದರಿಂದ ಭಕ್ತರು ಪ್ರಾಣಿಬಲಿ ತ್ಯಜಿಸಿ ಅಹಿಂಸಾತ್ಮಕವಾಗಿ ಸಾತ್ವಿಕ ಪೂಜೆ ಸಲ್ಲಿಸಬೇಕು ಎಂದು  ವಿನಂತಿಸಿದರು.

ADVERTISEMENT

ದೇವಾಲಯಗಳು, ದರ್ಗಾಗಳು ವಧಾಲಯಗಳಾಗದೇ ದಿವ್ಯಾಲಯವಾಗಬೇಕು. ಜಾತ್ರಾ ಪರಿಸರಗಳ ಧಾರ್ಮಿಕ ಸ್ಥಾನಗಳು ಕಟುಕರ ಕೇರಿಗಳಾಗಬಾರದು. ಜೀವ ತೆಗೆಯುವ ಮೃತ್ಯು ಕೂಪವಾಗಬಾರದು. ಪ್ರಾಣಿಹಿಂಸೆ ಮತ್ತು ಮದ್ಯ–ಮಾದಕ ಪದಾರ್ಥಗಳಿಂದ ಮುಕ್ತವಾಗಿರಬೇಕು ಎಂದರು.

ಸಂದೇಶ ಯಾತ್ರೆ: ಈ ಪ್ರಾಣಿಬಲಿ ತಡೆ ಕುರಿತು ಜನ ಜಾಗೃತಿ ಮೂಡಿಸಲು ಅಹಿಂಸಾ ಪ್ರಾಣಿದಯಾ ಆಧ್ಯಾತ್ಮ ಸಂದೇಶಯಾತ್ರೆಯನ್ನು ಸಿಂದಗಿಯ ವಿವಿಧ ಭಾಗಗಳಲ್ಲಿ ಹಾಗೂ ಯಂಕಂಚಿಯ ದಾವಲ್ ಮಲಿಕ್ ದರ್ಗಾದ ಉರಸ್ ಪರಿಸರದಲ್ಲಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕೈಗೊಳ್ಳಲಿದ್ದು, ಸೂಕ್ತ ಪೊಲೀಸ್ ಭದ್ರತೆ ನೀಡಬೇಕು ಎಂದು ದಯಾನಂದ ಸ್ವಾಮೀಜಿ ಮನವಿ ಮಾಡಿದರು.

ದೇವಾಲಯ ದರ್ಗಾಗಳು ಅಹಿಂಸೆ ಕರುಣೆ ಪ್ರೇಮ ಜೀವದಯೆ ಮಾನವೀಯತೆ ಆಧ್ಯಾತ್ಮಿಕತೆ ಮುಂತಾದ ದಿವ್ಯ ಮೌಲ್ಯಗಳನ್ನು ಸಾರುವ ಸುಸಂಸ್ಕಾರ ನೀಡುವ ದಿವ್ಯ ಧಾಮಗಳಾಗಬೇಕು 
ದಯಾನಂದ ಸ್ವಾಮೀಜಿ ಅಧ್ಯಕ್ಷ ಬಸವ ಧರ್ಮ ಜ್ಞಾನ ಪೀಠ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.