ADVERTISEMENT

ನುಡಿನಮನ: ಅಸ್ಪೃಶ್ಯತೆಯ ವಿರುದ್ಧ ಹೋರಾಟ ಸಂಘಟಿಸಿದ್ದ ಮುದೂರ

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2025, 3:26 IST
Last Updated 25 ಡಿಸೆಂಬರ್ 2025, 3:26 IST
ಮುದ್ದೇಬಿಹಾಳ ಪಟ್ಟಣದ ಟಾಪ್ ಇನ್ ಟೌನ್ ಫಂಕ್ಷನ್ ಹಾಲ್‌ನಲ್ಲಿ ಬುಧವಾರ ಹಮ್ಮಿಕೊಂಡಿದ್ದ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಘಟನಾ ಸಂಚಾಲಕ ಡಿ.ಬಿ.ಮುದೂರ ನುಡಿನಮನ ಕಾರ್ಯಕ್ರಮದಲ್ಲಿ ಶಾಸಕ ಸಿ.ಎಸ್.ನಾಡಗೌಡ ಮಾತನಾಡಿದರು
ಮುದ್ದೇಬಿಹಾಳ ಪಟ್ಟಣದ ಟಾಪ್ ಇನ್ ಟೌನ್ ಫಂಕ್ಷನ್ ಹಾಲ್‌ನಲ್ಲಿ ಬುಧವಾರ ಹಮ್ಮಿಕೊಂಡಿದ್ದ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಘಟನಾ ಸಂಚಾಲಕ ಡಿ.ಬಿ.ಮುದೂರ ನುಡಿನಮನ ಕಾರ್ಯಕ್ರಮದಲ್ಲಿ ಶಾಸಕ ಸಿ.ಎಸ್.ನಾಡಗೌಡ ಮಾತನಾಡಿದರು   

ಮುದ್ದೇಬಿಹಾಳ: ಮತಕ್ಷೇತ್ರದಲ್ಲಿ ಬೇರೂರಿದ್ದ ಅಸ್ಪೃಶ್ಯತೆಯ ವಿರುದ್ಧ ದಿಟ್ಟತನದ ಹೋರಾಟ ಸಂಘಟಿಸಿ ಅದರಲ್ಲಿ ಯಶಸ್ವಿಯಾಗಿದ್ದವರು ದಲಿತ ನಾಯಕ ಡಿ.ಬಿ.ಮುದೂರ ಆಗಿದ್ದರು ಎಂದು ಶಾಸಕ ಸಿ.ಎಸ್.ನಾಡಗೌಡ ಹೇಳಿದರು.

ವಿವಿಧ ದಲಿತಪರ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ಬುಧವಾರ ಇಲ್ಲಿನ ಟಾಪ್ ಇನ್ ಟೌನ್ ಫಂಕ್ಷನ್ ಹಾಲ್‌ನಲ್ಲಿ ಹಮ್ಮಿಕೊಂಡಿದ್ದ ದಲಿತ ಸಂಘರ್ಷ ಸಮೀತಿ ರಾಜ್ಯ ಸಂಘಟನಾ ಸಂಚಾಲಕ ಡಿ.ಬಿ.ಮುದೂರ ನುಡಿನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಹೆಚ್ಚು ಓದದಿದ್ದರೂ ಅನುಭವದಿಂದ ವಿದ್ಯೆಯನ್ನು ಸಂಪಾದನೆ ಮಾಡಿದ್ದರು. ಅವರು ಮಾತುಗಳಿಂದ ಆಳವಾದ ವಿಚಾರಧಾರೆಗಳನ್ನು ಹೊಂದಿದ್ದರು ಎಂಬುದು ಅರ್ಥವಾಗುತ್ತದೆ. ಅವರು ಅಂಬೇಡ್ಕರ್ ವಿಚಾರಧಾರೆಗಳನ್ನು ಅಳವಡಿಸಿಕೊಂಡಿದ್ದರು. ಸಮಾನತೆಗೋಸ್ಕರ ಹೋರಾಟ ಮಾಡುವುದು ಜನ್ಮಸಿದ್ಧ ಹಕ್ಕು. ಸಮಾಜದಲ್ಲಿ ತಾರತಮ್ಯ ಹೋಗಲಾಡಿಸಲು ಆರ್ಥಿಕ, ಶೈಕ್ಷಣಿಕ ಸಾಮಾಜಿಕ ಬದಲಾವಣೆ ತರಬೇಕು ಎಂಬ ದಿಟ್ಟವಾದ ಹೋರಾಟವನ್ನು ಮುದೂರ ತಮ್ಮ ಸಂಗಡಿಗರೊಂದಿಗೆ ಸಂಘಟಿಸಿದ್ದರು ಎಂದು ಹೇಳಿದರು.

ADVERTISEMENT

ಮಾಜಿ ಶಾಸಕ ರಾಜು ಆಲಗೂರ ಮಾತನಾಡಿ, ಡಿ.ಬಿ.ಮುದೂರ ಕಠೋರ ಸ್ವಭಾವದ ವ್ಯಕ್ತಿ. ಆದರೆ ಒಳ್ಳೆಯ ಮನಸ್ಸುಳ್ಳವರು. ರಾಮಣ್ಣ ಚಲವಾದಿ, ಬಸವರಾಜ ನಾಗರಾಳ, ಡಿ.ಬಿ.ಮುದೂರ ಈ ಭಾಗದಲ್ಲಿ ದಲಿತ ಸಂಘಟನೆ ಕಟ್ಟಿದ್ದಾರೆ. ನೀಲಿ ಶಾಲು ಹಾಕಿಕೊಂಡು ಒಬ್ಬೊಬ್ಬರು ಎಂಎಲ್‌ಎ ಕರೆದು ವೈಯಕ್ತಿಕ ಪ್ರತಿಷ್ಠೆಯನ್ನಿಟ್ಟುಕೊಂಡು ಸಂಘಟನೆ ಕಟ್ಟಿದರೆ ಸಾಮಾಜಿಕ ಜವಾಬ್ದಾರಿ ಈಡೇರಿಸಲು ಆಗುವುದಿಲ್ಲ. ಒಂದೇ ಬ್ಯಾನರ್‌ದಲ್ಲಿ ತಾಲ್ಲೂಕಿನಲ್ಲಿ ಗಂಭೀರವಾಗಿ ಹೋರಾಟ ನಡೆಸಬೇಕು. ದಲಿತರು ಒಂದಾದರೆ ಮತ್ತೆ ಸಂಘಟನೆಗೆ ಬಲಿಷ್ಠತೆ ಬರುತ್ತದೆ ಎಂದರು.

ಹೋರಾಟಗಾರ ರಮೇಶ ಆಸಂಗಿ, ದಲಿತರ ಹಕ್ಕುಗಳಿಗೆ ಧಕ್ಕೆಯಾದಾಗ ಗಟ್ಟಿ ಧ್ವನಿ ಎತ್ತಿದ್ದು ಡಿ.ಬಿ.ಮುದೂರ. ಗೆಜ್ಜೆಪುಜೆ, ದೇವದಾಸಿ ಪದ್ಧತಿ, ಬೆತ್ತಲೆ ಸೇವೆಯ ವಿರುದ್ಧ ಹೋರಾಟ ಮಾಡಿ ಸಾಮಾಜಿಕ ನ್ಯಾಯ ಒದಗಿಸಿದ್ದಾರೆ. ಸಂವಿಧಾನದ ಮೂಲ ಆಶಯವನ್ನು ಎತ್ತಿ ಹಿಡಿಯುವ ಕೆಲಸ ಅವರು ಮಾಡಿದ್ದಾರೆ ಎಂದರು.

ಮುಖಂಡ ಅಭಿಷೇಕ ಚಕ್ರವರ್ತಿ ಮಾತನಾಡಿ, ಮೂಢನಂಬಿಕೆಗಳ ವಿರುದ್ದ ಡಿ.ಬಿ.ಮುದೂರ ಹೋರಾಟ ಮಾಡಿದರು. ದೇವಿಗೆ ಕೋಣಗಳ ಬಲಿ, ಬೆತ್ತಲೆ ಸೇವೆ, ಬಾವಿ ನೀರು ಮುಟ್ಟದಿರುವುದು ಇಂತಹ ಅನಿಷ್ಟ ಪದ್ಧತಿಗಳ ವಿರುದ್ಧ ಹೋರಾಟ ಮಾಡಿದವರು ಡಿ.ಬಿ.ಮುದೂರ ಅವರಾಗಿದ್ದಾರೆ ಎಂದರು.

‘ಮುದೂರ ಅವರು ಸಮಾಜಕ್ಕೆ ಸರ್ವಸ್ವವನ್ನು ಅರ್ಪಿಸಿದ್ದಾರೆ. ಅವರ ಮಗಳ ನಿಶ್ಚಿತಾರ್ಥ ಆಗಿದ್ದು ಆಕೆಯ ವಿವಾಹಕ್ಕೆ ಕುಟುಂಬದವರು ಮಾಡಿರುವ ಯಾದಿಯನ್ನು ನಮ್ಮ ಶಿವಾಚಾರ್ಯ ಸಂಸ್ಥೆಯಿಂದ ಭರಿಸುವ ಕಾರ್ಯ ಮಾಡುತ್ತೇವೆ’ ಎಂದು ಎಸ್.ಎಸ್.ಶಿವಾಚಾರ್ಯ ವಿದ್ಯಾಸಂಸ್ಥೆಯ ಆಡಳಿತಾಧಿಕಾರಿ ರವಿ ನಾಯಕ ಹೇಳಿದರು.

ಸಂಸದ ರಮೇಶ ಜಿಗಜಿಣಗಿ, ಬಾಗಲಕೋಟದ ಧಮ್ಮಪಾಲ ಬಂತೇಜಿ, ತಹಶೀಲ್ದಾರ್ ಕೀರ್ತಿ ಚಾಲಕ್, ಸಮಾಜ ಕಲ್ಯಾಣ ನಿರ್ದೇಶಕಿ ಬಿ.ಜಿ.ಮಠ, ಸೋಮನಗೌಡ ಪಾಟೀಲ ನಡಹಳ್ಳಿ, ವಕೀಲ ಎಂ.ಎಚ್. ಹಾಲಣ್ಣವರ, ಪ್ರಮುಖರಾದ ಮುತ್ತಪ್ಪ ಚಮಲಾಪೂರ, ಕೆ.ಬಿ.ದೊಡಮನಿ, ತಿಪ್ಪಣ್ಣ ದೊಡಮನಿ, ಆರ್.ಎನ್.ಹಾದಿಮನಿ, ಎಸ್.ಎಚ್.ಲೊಟಗೇರಿ,ದೇವೇಂದ್ರ ಹಾದಿಮನಿ, ಅರವಿಂದ ಸಾಲವಾಡಗಿ,ಶಾಂತಮ್ಮ ಡಿ. ಮುದೂರ, ರೇವಣೆಪ್ಪ ಹರಿಜನ,ಬಲಭೀಮ ನಾಯ್ಕಮಕ್ಕಳ,ಅಶೋಕ ಇರಕಲ್, ಯಮನಪ್ಪ ಹಂಗರಗಿ, ಮಲ್ಲಪ್ಪ ಬಸರಕೋಡ,ನಾಗೇಶ ಭಜಂತ್ರಿ, ಚನ್ನಪ್ಪ ವಿಜಯಕರ್,ಪರಶುರಾಮ ದಿಂಡವಾರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುರು ತಾರನಾಳ,ತಿಪ್ಪಣ್ಣ ಗೋನಾಳ, ಹರೀಶ ನಾಟೀಕಾರ, ಪ್ರಕಾಶ ಚಲವಾದಿ, ದೇವರಾಜ ಹಂಗರಗಿ ಸೇರಿದಂತೆ ಹಲವು ಮುಖಂಡರು ಇದ್ದರು.

ದಲಿತ ಹೋರಾಟಗಾರ ದಿ.ಡಿ.ಬಿ.ಮುದೂರ ಅವರು ನೇರ ನುಡಿ ನಿಷ್ಠುರ ನಾಯಕ. ಸ್ವಂತಕ್ಕಾಗಿ ಏನೂ ಮಾಡಿಕೊಂಡವರಲ್ಲ. ಅನ್ಯಾಯವಾದಾಗ ದಿಟ್ಟ ಧ್ವನಿ ಎತ್ತಿದವರು
ರವಿ ನಾಯಕ ಶಿರೋಳ-ಮುದ್ದೇಬಿಹಾಳ ಎಸ್.ಎಸ್.ಶಿವಾಚಾರ್ಯ ವಿದ್ಯಾಸಂಸ್ಥೆ ಆಡಳಿತಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.