ADVERTISEMENT

ಬಂದ್ ಬೆಂಬಲಕ್ಕೆ ಮನವಿ; ರೈತರಿಂದ ಪಾದಯಾತ್ರೆ

ಕೇಂದ್ರ ಸರ್ಕಾರದ ಕೃಷಿ ಕಾಯ್ದೆ ವಿರೋಧಿಸಿ ‘ಭಾರತ್‌ ಬಂದ್‌’ ಇಂದು

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2021, 13:39 IST
Last Updated 26 ಸೆಪ್ಟೆಂಬರ್ 2021, 13:39 IST
ವಿಜಯಪುರ ಜಿಲ್ಲೆಯ ರೈತ ಮುಖಂಡರು ಭಾನುವಾರ ನಗರದಲ್ಲಿ ಪಾದಯಾತ್ರೆ ಮಾಡಿ, ಸೋಮವಾರ ಕರೆ ನೀಡಲಾಗಿರುವ ‘ಭಾರತ್ ಬಂದ್‌’ಗೆ ಬೆಂಬಲ ನೀಡುವಂತೆ ಕೋರಿ ವ್ಯಾಪರಸ್ಥರು, ಅಂಗಡಿ ಮಾಲೀಕರು, ಸಾರ್ವಜನಿಕರಲ್ಲಿ ಮನವಿ ಮಾಡಿದರು
ವಿಜಯಪುರ ಜಿಲ್ಲೆಯ ರೈತ ಮುಖಂಡರು ಭಾನುವಾರ ನಗರದಲ್ಲಿ ಪಾದಯಾತ್ರೆ ಮಾಡಿ, ಸೋಮವಾರ ಕರೆ ನೀಡಲಾಗಿರುವ ‘ಭಾರತ್ ಬಂದ್‌’ಗೆ ಬೆಂಬಲ ನೀಡುವಂತೆ ಕೋರಿ ವ್ಯಾಪರಸ್ಥರು, ಅಂಗಡಿ ಮಾಲೀಕರು, ಸಾರ್ವಜನಿಕರಲ್ಲಿ ಮನವಿ ಮಾಡಿದರು   

ವಿಜಯಪುರ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೂರು ಕರಾಳ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಸೆ.27ರಂದು ಕರೆ ನೀಡಲಾಗಿರುವ ‘ಭಾರತ್ ಬಂದ್‌’ಗೆ ಸ್ವಯಂ ಪ್ರೇರಿತ ಬೆಂಬಲ ನೀಡುವ ಮೂಲಕ ಯಶಸ್ವಿಗೊಳಿಸುವಂತೆ ಜಿಲ್ಲೆಯ ರೈತ ಮುಖಂಡರು ನಗರದಲ್ಲಿ ಭಾನುವಾರ ಪಾದಯಾತ್ರೆ ಮಾಡಿ ವ್ಯಾಪರಸ್ಥರು, ಅಂಗಡಿ ಮಾಲೀಕರು, ಸಾರ್ವಜನಿಕರಲ್ಲಿ ಮನವಿ ಮಾಡಿದರು.

ನಗರದ ಬಾಗಲಕೋಟೆ ರಸ್ತೆ, ಬಸ್ ನಿಲ್ದಾಣ, ಕೆ.ಸಿ. ಮಾರುಕಟ್ಟೆ, ಗಾಂಧಿಚೌಕ್, ಸಿದ್ದೇಶ್ವರ ದೇವಸ್ಥಾನ, ಕಿರಾಣಾ ಬಜಾರ, ಸರಾಫ್‌ ಬಜಾರ್, ಶಾಸ್ತ್ರಿ ಮಾರುಕಟ್ಟೆಯಲ್ಲಿ ಪಾದಯಾತ್ರೆ ಮೂಲಕ ಸಂಚರಿಸಿ ವ್ಯಾಪಾರಸ್ಥರು, ಅಂಗಡಿಕಾರರು, ಸಾರ್ವಜನಿಕರಿಗೆ ಕರಪತ್ರಗಳನ್ನು ನೀಡಿ ಬಂದ್‌ ಬೆಂಬಲಿಸಲು ಮನವಿ ಮಾಡಿದರು.

ಭಾನುವಾರ ಬೆಳಗಿನ ಜಾವ ನಗರದ ಎ.ಪಿ.ಎಂ.ಸಿಗೂ ತೆರಳಿ ಅಲ್ಲಿಯ ವ್ಯಾಪಾರಸ್ಥರನ್ನು ಭೇಟಿಯಾಗಿ ಬಂದ್‌ಗೆ ಬೆಂಬಲ ಕೋರಿದರು.

ADVERTISEMENT

ವ್ಯಾಪಕ ಪ್ರಚಾರ: ಸೋಮವಾರ ಕರೆ ನೀಡಲಾಗಿರುವ ಭಾರತ್‌ ಬಂದ್ ಬೆಂಬಲಿಸಿ ವಿಜಯಪುರ ಜಿಲ್ಲೆ ಸಂಪೂರ್ಣ ಬಂದ್ ಮಾಡಲು ಸಂಘಟಿಕರು ಜಿಲ್ಲೆಯಾದ್ಯಂತ ವ್ಯಾಪಕ ಪ್ರಚಾರ ನಡೆಸಿದರು.

ಭಿತ್ತಿಪತ್ರ ಅಂಟಿಸುವುದು, ಗೋಡೆಬರಹ ಮಾಡುವುದು, ಕರಪತ್ರ ಹಂಚುವುದು, ಬೀದಿ ಬದಿ ಸಭೆ ಮಾಡುವ ಮೂಲಕ ಬೆಂಬಲ ಕೋರಿದ್ದಾರೆ.

ಹಾಲು, ದಿನಪತ್ರಿಕೆ ಮತ್ತು ಆಸ್ಪತ್ರೆ ಹಾಗೂ ಔಷಧ ಅಂಗಡಿ ಹೊರತುಪಡಿಸಿ ಇನ್ನುಳಿದ ಎಲ್ಲ ವ್ಯಾಪಾರ, ವಹಿವಾಟು ವಾಹನಗಳ ಓಡಾಟ ಸ್ವಯಂ ಪ್ರೇರಿತವಾಗಿ ಬಂದ್ ಆಗುವ ಎಲ್ಲಾ ಸಾಧ್ಯತೆಗಳಿವೆ ಎಂದು ಆರ್.ಕೆ.ಎಸ್ ಜಿಲ್ಲಾ ಸಂಚಾಲಕ ಬಾಳು ಜೇವೂರ ಮತ್ತು ರೈತ ಮುಖಂಡ ಭೀಮಶಿ ಕಲಾದಗಿ ಹೇಳಿದರು.

ಪ್ರಾಂತ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಭೀಮಶಿ ಕಲಾದಗಿ, ರೈತ ಕೃಷಿ ಕಾರ್ಮಿಕ ಸಂಘಟನೆಯ ರಾಜ್ಯ ಉಪಾಧ್ಯಕ್ಷ ಬಿ.ಭಗವಾನರೆಡ್ಡಿ, ಹಸಿರು ಸೇನೆಯ ಜಿಲ್ಲಾಧ್ಯಕ್ಷ ಶಕ್ತಿಕುಮಾರ ಉಕುಮನಾಳ, ಸುಜಾತಾ, ಭೀಮ್‌ ಆರ್ಮಿಯ ಮುಖಂಡರಾದ ನಿರ್ಮಲಾ ಹೊಸಮನಿ, ಜನ ಶಕ್ತಿ ಸಂಘಟನೆಯ ಶ್ರೀನಾಥ ಪೂಜಾರಿ, ಸದಾನಂದ ಮೋದಿ, ಸ್ಲಂ ಅಭಿವೃದ್ಧಿ ಸಮಿತಿ ಅಧ್ಯಕ್ಷ ಅಕ್ರಂ ಮಾಶಾಳಕರ, ಸಂಯುಕ್ತ ಕಿಸಾನ್ ಮೋರ್ಚಾದ ಸಂಘಟನಾಕಾರ ಬಾಳು ಜೇವೂರ, ಅನೌಪಚಾರಿಕ ಶಿಕ್ಷಣ ಸಂಸ್ಥೆಯ ದಸ್ತಗಿರ್‌ ಉಕ್ಕಲಿ ಹಾಗೂ ಸಿಐಟಿಯುನ ಅಧ್ಯಕ್ಷ ಲಕ್ಮಣ ಹಂದ್ರಾಳ, ಎ.ಐ.ಯು.ಟಿ.ಯುಸಿ ಜಿಲ್ಲಾ ಅಧ್ಯಕ್ಷ ಮಲ್ಲಿಕಾರ್ಜುನ, ದಲಿತ ವಿದ್ಯಾರ್ಥಿ ಪರಿಷತ್‌ನ ಮುಖಂಡರಾದ ಅಕ್ಷಯ್, ಎ.ಐ.ಡಿ.ಎಸ್.ಓ ನ ಉಪಾಧ್ಯಕ್ಷರಾದ ಕಾವೇರಿ ರಜಪೂತ, ಸುರೇಖಾ ಕಡಪಟ್ಟಿ, ದೀಪಾ, ಎ.ಐ.ಎಂ.ಎಸ್.ಎಸ್.ನ ಮುಖಂಡರಾದ ಶಿವಬಾಳಮ್ಮ, ಗೀತಾ, ಶಿವರಂಜಿನಿ ದಲಿತ ಸಂಘಟನೆಯ ಮುಖಂಡರಾದ ಅಕ್ಷಯಕುಮಾರ, ನಬಿಸಾಬ, ರಿಯಾಜ್,ಎಸ್.ಎಂ, ಕಾಶಿಬಾಯಿ, ಅಗಸಿಮನಿ ಪಾದಯಾತ್ರೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.