ADVERTISEMENT

ಹಳ್ಳಗಳಿಗೆ ನೀರು ಹರಿಸುವ ಯೋಜನೆಗೆ ಅನುಮೋದನೆ

ನನಸಾದ ಕನಸು; ಶಾಸಕ ಎಂ.ಬಿ.ಪಾಟೀಲ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2020, 12:45 IST
Last Updated 7 ಅಕ್ಟೋಬರ್ 2020, 12:45 IST
ಎಂ.ಬಿ.ಪಾಟೀಲ
ಎಂ.ಬಿ.ಪಾಟೀಲ   

ವಿಜಯಪುರ: ಜಿಲ್ಲೆಯ ಕೃಷ್ಣಾ ನದಿ ತೀರದಿಂದ ಭೀಮಾ ನದಿ ತೀರದ ವರೆಗಿನ 159 ಹಳ್ಳಗಳಿಗೆ ಮುಳವಾಡ, ಚಿಮ್ಮಲಗಿ, ತುಬಚಿ ಮತ್ತು ಬಬಲೇಶ್ವರ ಏತ ನೀರಾವರಿ ಯೋಜನೆಗಳ ಮೂಲಕ ನೀರು ಹರಿಸುವ ಯೋಜನೆಗೆ ಕೃಷ್ಣ ಭಾಗ್ಯ ಜಲನಿಗಮದ ನಿರ್ದೇಶಕರ ಮಂಡಳಿಯು ಅನುಮೋದನೆ ನೀಡಿದೆ ಎಂದು ಶಾಸಕ ಎಂ.ಬಿ.ಪಾಟೀಲ ಹೇಳಿದರು.

ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ₹ 59 ಕೋಟಿ ಮೊತ್ತದ ಈ ಯೋಜನೆಯ ಅನ್ವಯ ಹಳ್ಳಗಳಿಗೆ ನೀರು ಹರಿಸಲಾಗುವುದು. ಜೊತೆಗೆ ಅಲ್ಲಲ್ಲಿ ಚೆಕ್‌ ಡ್ಯಾಂ, ಇಂಗು ಗುಂಡಿಗಳನ್ನು ನಿರ್ಮಿಸಲಾಗುವುದು. ಇದರಿಂದ ಅಂತರ್ಜಲ ಮಟ್ಟ ಹೆಚ್ಚಾಗುವ ಮೂಲಕ ಜಿಲ್ಲೆಯ 400ಕ್ಕೂ ಅಧಿಕ ಹಳ್ಳಿಗಳಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.
ಯೋಜನೆ ಕಾಮಗಾರಿಯು ಮುಂದಿನ ಐದಾರು ತಿಂಗಳಲ್ಲಿ ಆರಂಭವಾಗಲಿದೆ. ಯೋಜನೆಯ ಅನುಷ್ಠಾನದ ಆರಂಭದಲ್ಲಿ ಹಳ್ಳಗಳ ಒತ್ತುವರಿಯನ್ನು ತೆರವುಗೊಳಿಸಿ, ಹೂಳು ತೆಗೆಯಲಾಗುವುದು ಎಂದರು.

ತಿಡಗುಂದಿ ನಾಲೆಯಿಂದ ಇಂಡಿ ತಾಲ್ಲೂಕಿನ 16 ಸಣ್ಣ ನೀರಾವರಿ ಕೆರೆಗಳಿಗೆ 51 ದಿನಗಳಲ್ಲಿ ನೀರು ತುಂಬಿಸುವ ಪ್ರಸ್ತಾವನೆಗೂ ನಿಗಮದ ನಿರ್ದೇಶಕರ ಮಂಡಳಿ ಅನುಮೋದನೆ ನೀಡಿದೆ. ₹ 140 ಕೋಟಿ ಅನುದಾನದಲ್ಲಿ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗುತ್ತಿದೆ. ಇದರಿಂದ ಇಂಡಿ ಮತ್ತು ನಾಗಠಾಣ ವ್ಯಾಪ್ತಿಯ ರೈತರಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.

ADVERTISEMENT

ಇದು ಸಹ ಐದಾರು ತಿಂಗಳಲ್ಲಿ ಕಾಮಗಾರಿ ಆರಂಭವಾಗಲಿದೆ. ಭವಿಷ್ಯದಲ್ಲಿ ಹಳ್ಳಗಳ ಇಕ್ಕೆಲಗಳಲ್ಲಿ ಮೂರರಿಂದ ಐದು ಕೋಟಿ ಸಸ್ಯಗಳನ್ನು ನೆಟ್ಟು, ಬೆಳಸುವ ಗುರಿ ಹೊಂದಲಾಗಿದೆ ಎಂದು ಹೇಳಿದರು.

ಈ ಮೂಲಕ ಜಿಲ್ಲೆಯ ಶೇ 95ರಷ್ಟು ಕೆರೆಗಳಿಗೆ ನೀರು ತುಂಬಿಸಿದಂತಾಗಲಿದೆ. ಈ ಯೋಜನೆಗೆ ಸಹಕರಿಸಿದ ಜಿಲ್ಲೆಯ ಶಾಸಕರು, ಸಚಿವರು, ಸಂಸದರು ಹಾಗೂ ಅಧಿಕಾರಿಗಳಿಗೆ ಧನ್ಯವಾದ ಅರ್ಪಿಸುವುದಾಗಿ ಹೇಳಿದರು.

ಆಲಮಟ್ಟಿ ಜಲಾಶಯದ ಎತ್ತರವನ್ನು 524 ಮೀಟರ್‌ಗೆ ಎತ್ತರಿಸಿದಾಗ ಮಾತ್ರ ರಾಜ್ಯದ ಪಾಲಿನ ನೀರನ್ನು ಸಮಪರ್ಕವಾಗಿ ಬಳಸಿಕೊಳ್ಳಲು ಸಾಧ್ಯ. ಅಲ್ಲಿಯ ವರೆಗೆ ಜಿಲ್ಲೆಯ ಜನತೆ ಕಾಯಬೇಕು ಎಂದರು.

ಏತ ನೀರಾವರಿ ಯೋಜನೆಯ ನಾಲೆಗಳ ಮೂಲಕ ಜಿಲ್ಲೆಯ ಕೆರೆಗಳಿಗೆ ಹಾಗೂ ಹಳ್ಳಗಳಿಗೆ ನೀರು ಹರಿಸುವುದು ನನ್ನ ಕನಸಗಾತ್ತು. ಜಲಸಂಪನ್ಮೂಲ ಸಚಿವನಾಗಿದ್ದಾಗ ಈ ಯೋಜನೆಗಳನ್ನು ರೂಪಿಸಿದ್ದೆ. ಇದೀಗ ಕನಸು ಪೂರ್ಣವಾಗಿದೆ ಎಂದು ಹೇಳಿದರು.

ರಾಜಕೀಯ ಪ್ರೇರಿತ ದಾಳಿ: ಎಂಬಿ ಖಂಡನೆ

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರ ಮನೆ ಮೇಲೆ ಸಿಬಿಐ ದಾಳಿ ನಡೆಸಿರುವುದು ರಾಜಕೀಯ ಪ್ರೇರಿತ ಮತ್ತು ದುರುದ್ದೇಶದಿಂದ ಕೂಡಿದೆ ಎಂದು ಶಾಸಕ ಎಂ.ಬಿ.ಪಾಟೀಲ ಆರೋಪಿಸಿದರು.

ಸಿಬಿಐಗೆ ಎಲ್ಲರ ಮೇಲೂ ದಾಳಿ ಮಾಡಲು ಅವಕಾಶ ಇದೆ. ಆದರೆ, ಇದೀಗ ರಾಜ್ಯದಲ್ಲಿ ನಡೆಯುತ್ತಿರುವ ಉಪ ಚುನಾವಣೆಯನ್ನು ಗುರಿಯಾಗಿಸಿಕೊಂಡು ಡಿ.ಕೆ.ಶಿವಕುಮಾರ್‌ ಮೇಲೆ ಉದ್ದೇಶ ಪೂರ್ವಕವಾಗಿ ದಾಳಿ ನಡೆದಿದೆ ಎಂದರು.

ಕೇಂದ್ರ ಸರ್ಕಾರವು ತನಿಖಾ ಸಂಸ್ಥೆಗಳನ್ನು ದುರುಪಯೋಗ ಪಡಿಸಿಕೊಳ್ಳುತ್ತಿದೆ. ಆದರೂ ಸಹ ಎರಡೂ ಕ್ಷೇತ್ರಗಳಿಗೆ ನಡೆಯುತ್ತಿರುವ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ ಜಯ ಗಳಿಸಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಹಂತ, ಹಂತವಾಗಿ ಆರಂಭಿಸಿ

ಕೋವಿಡ್‌ ಹಿನ್ನೆಲೆಯಲ್ಲಿ ಶಾಲಾ, ಕಾಲೇಜುಗಳನ್ನು ಹಂತಹಂತವಾಗಿ ಆರಂಭಿಸಬೇಕು. ಆರಂಭದಲ್ಲಿ ಪದವಿ, ಪದವಿ ಪೂರ್ವ ಕಾಲೇಜು, ಬಳಿಕ ಪ್ರೌಢಶಾಲೆ, ತದ ನಂತರ ಮಾಧ್ಯಮಿಕ, ಪ್ರಾಥಮಿಕ ತರಗತಿಗಳು ಆರಂಭವಾಗಬೇಕು ಎಂದು ಸಲಹೆ ನೀಡಿದರು.

ಶಾಲಾ, ಕಾಲೇಜುಗಳಲ್ಲಿ ಕೋವಿಡ್‌ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಮಾಸ್ಕ್‌, ಸ್ಯಾನಿಟೈಜ್‌, ಪರಸ್ಪರ ಅಂತರ ಕಾಪಾಡಲು, ಅನಾರೋಗ್ಯ ಪೀಡಿತರ ಪರೀಕ್ಷೆ, ಚಿಕಿತ್ಸೆಗೂ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.