
ವಿಜಯಪುರ: ಪ್ರಸ್ತುತ ಸಮಾಜದಲ್ಲಿ ಅಂಕ ಗಳಿಕೆಗೆ ಮಹತ್ವ ನೀಡಲಾಗಿದೆ, ಮಕ್ಕಳಿಗೆ ನೈತಿಕ ಹಾಗೂ ಮೌಲ್ಯಾಧಾರಿತ ಶಿಕ್ಷಣ, ಭಾರತೀಯ ಸಂಸ್ಕೃತಿ ಹಾಗೂ ಸಂಸ್ಕಾರಕ್ಕೆ ಮಹತ್ವ ನೀಡುವುದು ಪಾಲಕರ ಹಾಗೂ ಶಿಕ್ಷಕರ ಆದ್ಯ ಕರ್ತವ್ಯವಾಗಬೇಕಿದೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಅರುಣ ಶಹಾಪುರ ಹೇಳಿದರು.
ಇಟ್ಟಂಗಿಹಾಳದ ವೇದ ಇಂಟರ್ ನ್ಯಾಷನಲ್ ಪಬ್ಲಿಕ್ ಶಾಲೆಯಲ್ಲಿ ಮಂಗಳವಾರ ಆಯೋಜಿಸಿದ್ದ ‘ವೇದ ಸಿರಿ 2026’ ವಾರ್ಷಿಕ ಸ್ನೇಹ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.
‘ವೇದ ಸಿರಿ’ ಕಾರ್ಯಕ್ರಮವು ಭಾರತೀಯ ಶ್ರೀಮಂತ ಸಂಸ್ಕೃತಿ ಮತ್ತು ಆದರ್ಶಗಳನ್ನು ಬಿಂಬಿಸುವ ಕಾರ್ಯಕ್ರಮವಾಗಿ ಆಯೋಜನೆ ಮಾಡಿರುವುದು ಶ್ಲಾಘನೀಯ ಎಂದರು.
ನಿವೃತ್ತ ಪೊಲೀಸ್ ಅಧಿಕಾರಿ ಬಿ.ಆರ್.ಚೌಕಿಮಠ, ಕೇವಲ ಮೂರು ವರ್ಷಗಳಲ್ಲಿ ಈ ಸಂಸ್ಥೆಯು ಮೌಲ್ಯಾಧಾರಿತ ಶಿಕ್ಷಣ ನೀಡುವಲ್ಲಿ ಹೆಸರು ವಾಸಿಯಾಗಿದೆ. ವಿಜಯಪುರದಲ್ಲಿ ಶೈಕ್ಷಣಿಕ ಕ್ಷೇತ್ರಕ್ಕೆ ವೇದ ಸಮೂಹ ಸಂಸ್ಥೆಗಳು ನೀಡುತ್ತಿರುವ ಕೊಡುಗೆ ಅಪಾರವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ವೇದ ಸಂಸ್ಥೆ ಅಧ್ಯಕ್ಷ ಡಾ. ಶಿವಾನಂದ ಕೆಲೂರ, ನಮ್ಮ ಶಿಕ್ಷಣ ಸಂಸ್ಥೆಗಳು ಕೇವಲ ಪಠ್ಯ ಬೋಧನೆಗೆ ಸೀಮಿತವಾಗದೆ, ಭಾರತೀಯ ಶ್ರೀಮಂತ ಮತ್ತು ಅಪರೂಪದ ಆದರ್ಶಗಳನ್ನು ಎತ್ತಿಹಿಡಿಯುವ ಹಾಗೂ ಉತ್ತಮ ಸಮಾಜ ನಿರ್ಮಾಣಕ್ಕೆ ಕೊಡುಗೆ ನೀಡುವಲ್ಲಿ ಕಾರ್ಯಪ್ರವೃತ್ತವಾಗಿದೆ. ಆ ನಿಟ್ಟಿನಲ್ಲಿ ಮಕ್ಕಳಿಗೆ ಇಂತಹ ಸಂಸ್ಕೃತಿಯ ಹಬ್ಬವನ್ನು ‘ವೇದ ಸಿರಿ’ ಎಂಬ ಹೆಸರಿನಲ್ಲಿ ಆಯೋಜನೆಗೊಂಡಿದೆ ಹಾಗೂ ಇದು ನಿರಂತರ ಎಂದರು.
ಬಂಥನಾಳದ ವೃಷಭಲಿಂಗೇಶ್ವರ ಸ್ವಾಮೀಜಿ, ಯರನಾಳ ಮಠದ ಗುರುಸಂಗನಬಸವ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಅರಕೇರಿಯ ಅಮಗೊಂಡ ಮಹಾರಾಯರು, ಸಮಾಜ ಸೇವಕ ರೂಪಸಿಂಗ್ ಲೊನಾರಿ, ತಾ.ಪಂ.ಮಾಜಿ ಸದಸ್ಯ ರಾಜು ಜಾಧವ, ಸುಧೀರ ಚಿಂಚಲಿ, ಸಂಸ್ಥೆ ಉಪಾಧ್ಯಕ್ಷ ದಯಾನಂದ ಕೆಲೂರ, ಕಾರ್ಯದರ್ಶಿ ನಂದಬಸಪ್ಪ ಯರನಾಳ, ಶಿವಲೀಲಾ ಕೆಲೂರ, ಡಾ.ಕ್ಷಮಾ ಕೆಲೂರ, ಡಾ.ಕೃಪಾ ಕೆಲೂರ, ಪ್ರಾಚಾರ್ಯರಾದ ಸುನೀಲ ಬಿ.ಎಂ., ಮಧ್ವಪ್ರಸಾದ ಜಿ.ಕೆ. ಹಾಗೂ ರಶ್ಮೀ ಕವಟಗಿಮಠ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.