ADVERTISEMENT

ಆಶಾ ಕಾರ್ಯಕರ್ತೆಯರಿಂದ ಅಹೋರಾತ್ರಿ ಧರಣಿ

ಮಾಸಿಕ ಕನಿಷ್ಠ ₹10 ಸಾವಿರ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2025, 4:59 IST
Last Updated 13 ಆಗಸ್ಟ್ 2025, 4:59 IST
ವಿಜಯಪುರ ನಗರದ ಅಂಬೇಡ್ಕರ್ ಸರ್ಕಲ್‍ನಲ್ಲಿ ಆಶಾ ಕಾರ್ಯಕರ್ತೆಯರು ಮಂಗಳವಾರದಿಂದ ಅಹೋರಾತ್ರಿ ಧರಣಿ ಆರಂಭಿಸಿದರು
ವಿಜಯಪುರ ನಗರದ ಅಂಬೇಡ್ಕರ್ ಸರ್ಕಲ್‍ನಲ್ಲಿ ಆಶಾ ಕಾರ್ಯಕರ್ತೆಯರು ಮಂಗಳವಾರದಿಂದ ಅಹೋರಾತ್ರಿ ಧರಣಿ ಆರಂಭಿಸಿದರು   

ವಿಜಯಪುರ: ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಈ ಹಿಂದೆ ಘೋಷಣೆ ಮಾಡಿರುವಂತೆ ರಾಜ್ಯದ ಗೌರವಧನ ಮತ್ತು ಕೇಂದ್ರದ ಭಾಗಶಃ ಪ್ರೋತ್ಸಾಹ ಧನ ಸೇರಿಸಿ ಮಾಸಿಕ ಕನಿಷ್ಠ ₹10 ಸಾವಿರ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಆಶಾ ಕಾರ್ಯಕರ್ತೆಯರು ನಗರದ ಡಾ.ಬಿ.ಆರ್‌.ಅಂಬೇಡ್ಕರ್‌ ವೃತ್ತದಲ್ಲಿ ಮಂಗಳವಾರದಿಂದ ಆಹೋರಾತ್ರಿ ಧರಣಿ ಆರಂಭಿಸಿದರು.  

ರಾಜ್ಯ ಬಜೆಟ್‍ನಲ್ಲಿ ಎಲ್ಲಾ ಅಂಗನವಾಡಿ ಮತ್ತು ಬಿಸಿಯೂಟ ಕಾರ್ಯಕರ್ತೆಯರಿಗೆ ₹ 1 ಸಾವಿರ ಪ್ರೋತ್ಸಾಹಧನ ಹೆಚ್ಚಳ ಮಾಡಿದಂತೆಯೇ ಎಲ್ಲಾ ಆಶಾ ಕಾರ್ಯಕರ್ತೆಯರಿಗೂ ಸಹ ಹೆಚ್ಚಳ ಮಾಡಬೇಕು ಎಂದು ಧರಣಿ ನಿರತರು ಒತ್ತಾಯಿಸಿದರು.

ಆಶಾ ಕಾರ್ಯಕರ್ತೆಯರು ಕಾರ್ಯನಿರ್ವಹಿಸುವ ಜನಸಂಖ್ಯೆಯ ಮಿತಿಯನ್ನು ಹೆಚ್ಚಿಸುವುದನ್ನು ಕೈಬಿಡಬೇಕು, ಈ ಹೆಸರಲ್ಲಿ ಯಾವುದೇ ಆಶಾ ಕಾರ್ಯಕರ್ತೆಯರನ್ನು ಕೆಲಸದಿಂದ ತೆಗೆಯಬಾರದು ಎಂದು ಆಗ್ರಹಿಸಿದರು.

ADVERTISEMENT

ಆಶಾ ಕಾರ್ಯಕರ್ತೆಯರ ಕಾರ್ಯನಿರ್ವಹಣೆಯ ಅವೈಜ್ಞಾನಿಕ ಮೌಲ್ಯಮಾಪನ ಕೈಬಿಡಬೇಕು, ಆಶಾ ಸುಗಮಕಾರರನ್ನು ಸೂಕ್ತ ವೇತನದೊಂದಿಗೆ ಮುಂದುವರೆಸಬೇಕು, ನಿವೃತ್ತ ಆಶಾಗಳಿಗೆ ಪಶ್ಚಿಮ ಬಂಗಾಳ ಮಾದರಿಯಲ್ಲಿ ಇಡಿಗಂಟು ನೀಡಬೇಕು, ನಗರ ಆಶಾಗಳಿಗೆ ₹2 ಸಾವಿರ ಗೌರವಧನ ಹೆಚ್ಚಿಸಬೇಕು ಎಂದು ಒತ್ತಾಯಿಸಿದರು.

2025ರ ಜೂನ್, ಜುಲೈನಲ್ಲಿ ಕೇಂದ್ರ ಸರ್ಕಾರ ಹೆಚ್ಚಿಸಿದ ಪ್ರೋತ್ಸಾಹ ಧನವನ್ನು ರಾಜ್ಯದಲ್ಲಿ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.

ಆಶಾ ಕಾರ್ಯಕರ್ತೆಯರಾದ ಲಕ್ಷ್ಮೀ ಸೀಮಿಕೇರಿ, ಬಸಮ್ಮ ಹೆಳವರ, ಅಂಬಿಕಾ ಒಳಸಂಗ, ಮಲ್ಲಮ್ಮ ಹರಿಜನ, ಸುಮಂಗಲಾ ಪಡಸಾಲಿ, ಬಸಮ್ಮ ಪಾಟೀಲ, ಮಲ್ಲಮ್ಮ ಕಂಠಿ, ಸಂಘಟನಾಕಾರರಾದ ಶಿವಬಾಳಮ್ಮ ಕೊಂಡಗೂಳಿ, ಶಿವರಂಜನಿ ಎಸ್.ಬಿ., ನಿರ್ಮಲಾ, ಜಯಶ್ರೀ ಕುಂಬಾರ, ಮೆಹರುನ್ನಿಸಾ ಜಬನೂರು, ಮಲ್ಲಮ್ಮ, ರೇಣುಕಾ ಕಲಗುಟಿಕರ, ಲಕ್ಷ್ಮೀ ಸೀಮೆಕೇರಿ ಸೇರಿದಂತೆ 300 ಕ್ಕೂ ಹೆಚ್ಚು ಆಶಾ ಕಾರ್ಯಕರ್ತೆಯರು ಹೋರಾಟದಲ್ಲಿ ಭಾಗವಹಿಸಿದ್ದರು.

ಆಶಾ ಕಾರ್ಯಕರ್ತೆಯರ ದುಡಿತಕ್ಕೆ ನ್ಯಾಯಯುತವಾಗಿ ಸಲ್ಲಬೇಕಾಗದ ಕನಿಷ್ಠ ವೇತನ ₹10 ಸಾವಿರ ಕೂಡಲೇ ಜಾರಿಗೊಳಿಸಬೇಕು ಅಲ್ಲಿಯವರೆಗೆ ನಮ್ಮ ಹೋರಾಟ ಮುಂದುವರಿಸುತ್ತೇವೆ 

-ಎಚ್. ಟಿ. ಭರತಕುಮಾರ ಜಿಲ್ಲಾ ಮುಖಂಡಎಐಯುಟಿಯುಸಿ

ಗ್ರಾಮೀಣ ಪ್ರದೇಶದಲ್ಲಿ ವೈದ್ಯರಂತೆ ಪ್ರಥಮ ಚಿಕಿತ್ಸೆ ಮಾಡುತ್ತಾ ಕಾರ್ಯ ನಿರ್ವಹಿಸುತ್ತಿರುವ ಆಶಾಗಳಿಗೆ ಕನಿಷ್ಠ ಪ್ರೋತ್ಸಾಹಧನ ಕೂಡ ನೀಡುತ್ತಿಲ್ಲ. ಹೆಚ್ಚು ಕೆಲಸ ತೆಗೆದುಕೊಂಡು ಕಡಿಮೆ ಸಂಬಳ ನೀಡುತ್ತಿರುವುದು ಖಂಡನೀಯ

-ಜಿ. ಜಿ. ಗಾಂಧಿನಿವೃತ್ತ  ಬ್ಯಾಂಕ್ ಅಧಿಕಾರಿ 

ಮುಖ್ಯಮಂತ್ರಿ ಆರೋಗ್ಯ ಸಚಿವರು ಹಾಗೂ ಉನ್ನತ ಅಧಿಕಾರಿಗಳು ಜನವರಿಯಲ್ಲಿ ನಡೆದ ಹೋರಾಟದಲ್ಲಿ ಆಶ್ವಾಸನೆ ಕೊಟ್ಟಿದ್ದನ್ನು ಉಳಿಸಿಕೊಳ್ಳಬೇಕು ಇಲ್ಲವಾದರೆ ರಾಜ್ಯವ್ಯಾಪಿ ತೀವ್ರ ಹೋರಾಟ ನಡೆಸಬೇಕಾಗುತ್ತದೆ

-ಬಿ.ಭಗವಾನ್ ರೆಡ್ಡಿ ರಾಜ್ಯ ಕಾರ್ಯದರ್ಶಿಎಐಕೆಕೆಎಂಎಸ್ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.