
ವಿಜಯಪುರ: ಜಿಲ್ಲಾ ‘ಕಾಂಗ್ರೆಸ್ ಶಕ್ತಿ ಕೇಂದ್ರ’ವಾದ ಕಾಂಗ್ರೆಸ್ ಕಚೇರಿ ಇರುವ ಹಾಗೂ ಮಹಾನಗರ ಪಾಲಿಕೆಯಿಂದ ಕೂಗಳತೆ ದೂರದಲ್ಲಿರುವ ನಗರದ ಕೋರ್ಟ್ ಸರ್ಕಲ್‌ನಿಂದ ರಾಮನಗರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣ ಹದಗೆಟ್ಟಿದೆ. ಇದರಿಂದ ಸಾರ್ವಜನಿಕರು ಹಾಗೂ ವಾಹನಗಳ ಸಂಚಾರಕ್ಕೆ ತೀವ್ರ ಅಡಚಣೆಯಾಗಿದೆ.
ಕಾಂಗ್ರೆಸ್ ಕಚೇರಿಗೆ ಜಿಲ್ಲೆಯ ಘಟನಾಘಟಿ ಸಚಿವರು, ಶಾಸಕರು, ಮಾಜಿ ಶಾಸಕರು, ಮಹಾನಗರ ಪಾಲಿಕೆ ಕಾಂಗ್ರೆಸ್ ಸದಸ್ಯರು ಸೇರಿದಂತೆ ಪ್ರಮುಖರು ಹಾದುಹೋಗುವ ಈ ರಸ್ತೆಯ ಪರಿಸ್ಥಿತಿಯೇ ಹೀಗಾದರೆ, ನಗರದ ಇನ್ನುಳಿದ ರಸ್ತೆಗಳ ಪರಿಸ್ಥಿತಿ ಕೇಳುವವರಾರು ಎಂಬ ಪ್ರಶ್ನೆ ಮೂಡಿದೆ.
ಕೇವಲ 100 ಮೀಟರ್ ಉದ್ದ ಇರುವ ಈ ರಸ್ತೆಯಲ್ಲಿ ಕಳೆದ ಮಳೆಗಾಲದಲ್ಲಿ ಗುಂಡಿಗಳು ಬಿದ್ದು, ನೀರು ನಿಂತು ಹದಗೆಟ್ಟಿದೆ. ಬೈಕ್, ಆಟೊ ರಿಕ್ಷಾ, ಕಾರುಗಳು ಸಂಚರಿಸಲು ಪರದಾಡಬೇಕಾಗಿದೆ. ಇದೇ ರಸ್ತೆಯಲ್ಲಿ ವಿಜಯಪುರ ಬಸ್ ನಿಲ್ದಾಣದಿಂದ ತಾಳಿಕೋಟೆ, ಮುದ್ದೇಬಿಹಾಳ, ಬಸವನ ಬಾಗೇವಾಡಿ, ನಿಡಗುಂದಿ ಸೇರಿದಂತೆ ಪ್ರಮುಖ ಮಾರ್ಗಗಳಿಗೆ ಬಸ್‌ಗಳು ಪ್ರತಿದಿನ ಸಂಚರಿಸುತ್ತವೆ.
ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷರ ಒಡೆತನದ ಸಹಕಾರ ಬ್ಯಾಂಕ್, ಖಾಸಗಿ ಕ್ಲಿನಿಕ್, ಝೆರಾಕ್ಸ್ ಅಂಗಡಿ, ಕಿರಾಣಿ ಅಂಗಡಿ ಸೇರಿದಂತೆ ಅನೇಕ ವಕೀಲರ ಕಚೇರಿಗಳು ಸಹ ಈ ಮಾರ್ಗದಲ್ಲಿವೆ. ಹತ್ತಾರು ಮನೆಗಳೂ ಇದ್ದು, ಹದಗೆಟ್ಟ ರಸ್ತೆಯಿಂದೇಳುವ ದೂಳಿನಿಂದ ಆರೋಗ್ಯ ಸಮಸ್ಯೆ ಉಂಟಾಗುತ್ತಿದೆ.
‘ಗುಂಡಿಗಳ ನಡುವೆ ರಸ್ತೆ ಇದೆಯೋ ಅಥವಾ ರಸ್ತೆಯ ನಡುವೆ ಗುಂಡಿ ಇದೆಯೋ ಎಂದು ಹುಡುಕಬೇಕಾಗಿದೆ. ಪ್ರತಿ ದಿನ ಅನೇಕ ಬೈಕ್ ಸವಾರರು ಇಲ್ಲಿ ಬಿದ್ದು ಗಾಯಗೊಂಡಿದ್ದಾರೆ. ಈ ಮಾರ್ಗದಲ್ಲಿ ನಡೆದುಕೊಂಡು ಹೋಗುವವರು ಮೂಗಿ ಮುಚ್ಚಿಕೊಂಡು ಸಂಚರಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ’ ಎನ್ನುತ್ತಾರೆ ಸಾರ್ವಜನಿಕರು.
ಕಾಂಗ್ರೆಸ್ ರಸ್ತೆ ಹದಗೆಟ್ಟಿರುವುದರಿಂದ ಜನರಿಗೆ ತುಂಬಾ ತೊಂದರೆ ಆಗಿದೆ. ಸ್ಥಳೀಯ ನಿವಾಸಿಗಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆವಿಶ್ವನಾಥ ಕುಲಕರ್ಣಿ ಸ್ಥಳೀಯ ನಿವಾಸಿ ವಿಜಯಪುರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.