
ದೇವರಹಿಪ್ಪರಗಿ: ಸಾತಿಹಾಳ ಗ್ರಾಮದಿಂದ ದಿಂಡವಾರ ಮೂಲಕ ಹೂವಿನಹಿಪ್ಪರಗಿ ಸಂಪರ್ಕ ಕಲ್ಪಿಸುವ ರಸ್ತೆ ಮಳೆಯಿಂದ ಸಂಪೂರ್ಣ ಹಾಳಾಗಿದ್ದು, ರಸ್ತೆಯಲ್ಲಿನ ತಗ್ಗು, ಗುಂಡಿಗಳಿಂದ ಪ್ರಯಾಣಿಕರು ಪರದಾಡುವಂತಾಗಿದೆ.
ತಾಲ್ಲೂಕಿನ ಸಾತಿಹಾಳ ಗ್ರಾಮದಿಂದ ದಿಂಡವಾರ ಮೂಲಕ ಹೂವಿನಹಿಪ್ಪರಗಿವರೆಗಿನ ರಸ್ತೆ ಹಾಳಾದ ಪರಿಣಾಮ ಬಸ್, ಕಾರು, ಬೈಕ್‌ಗಳ ಮೂಲಕ ತೆರಳುವವರ ಪಾಡು ಹೇಳತೀರದಂತಾಗಿದೆ. ಈ ಬಗ್ಗೆ ದಿಂಡವಾರ ಗ್ರಾಮದ ವಿನಯಗೌಡ ಪಾಟೀಲ ಮಾತನಾಡಿ, ಕಳೆದ 2 ವರ್ಷಗಳ ಹಿಂದೆ ನಿರ್ಮಿಸಲಾಗಿದ್ದ ರಸ್ತೆ ಈಗ ಸಂಪೂರ್ಣ ತಗ್ಗು, ದಿನ್ನೆಗಳಿಂದ ಕೂಡಿ ಪ್ರಯಾಣಿಸಲು ಬಾರದಂತಾಗಿದೆ. ನೀವು ರಸ್ತೆಯಲ್ಲಿ ಯಾವುದೇ ವಾಹನದಲ್ಲಿ ಚಲಿಸಿದರೂ ಸರಿ ಇವುಗಳಿಂದ ಪಾರಾಗಿ ತೆರಳಲು ಸಾಧ್ಯವೇ ಇಲ್ಲದಂತಾಗಿದೆ. ಅಮವಾಸ್ಯೆಯಂದು ಬೈಕ್‌ಗಳ ಮೂಲಕ ದೇವಸ್ಥಾನಗಳಿಗೆ ತೆರಳುವ ಅದೆಷ್ಟೋ ಭಕ್ತರು ಬಿದ್ದು ಗಾಯಗೊಂಡ ಘಟನೆಗಳು ಸಹ ಸಂಭವಿಸಿವೆ ಎಂದು ಘಟನೆಗಳ ಕುರಿತು ಮಾಹಿತಿ ನೀಡುತ್ತಾರೆ.
ಇನ್ನು ಸ್ವಂತ ಕಾರು ಹೊಂದಿದವರು ದೂರುತ್ತಲೇ ಪ್ರಯಾಣಿಸುವ ಸಂದರ್ಭಗಳು ಸಾಮಾನ್ಯವಾಗಿವೆ. ಜೊತೆಗೆ ಪ್ರಯಾಣದ ನಂತರ ಕಾರುಗಳು ನೇರವಾಗಿ ರಿಪೇರಿಗಾಗಿ ತೆರಳಿದ ಘಟನೆಗಳು ಸಹ ಜರುಗಿವೆ ಎನ್ನುತ್ತಾರೆ ನಾಗೂರ ಗ್ರಾಮದ ಅಮರಯ್ಯ ಹಿರೇಮಠ.
ಹಿಂದಿನ ಸರ್ಕಾರದ ಅವಧಿಯಲ್ಲಿನ ಬಹುತೇಕ ರಸ್ತೆಗಳ ಸ್ಥಿತಿ ಈಗ ಹೇಳತೀರದಾಗಿದೆ. ಅದರಲ್ಲೂ ಸತತ ಮಳೆಯಿಂದ ರಸ್ತೆಯಲ್ಲಿ ತೆಗ್ಗು, ಗುಂಡಿಗಳ ನಿರ್ಮಾಣವಾಗಿ ಪ್ರಯಾಣ ದುಸ್ತರವಾಗಿದ್ದಂತೂ ಸತ್ಯ. ಜೊತೆಗೆ 2ರಿಂದ 3 ಕಡೆಗಳಲ್ಲಿ ಸೇತುವೆ ನಿರ್ಮಿಸದ ಕಾರಣ ನೀರು ಹರಿದು ದ್ವಿಚಕ್ರ ವಾಹನ ಸವಾರರಿಗೆ ತೊಂದರೆಯಾದ ಸನ್ನಿವೇಶಗಳು ಸಾಕಷ್ಟು ಇವೆ. ಇವುಗಳನ್ನು ಪರಿಶೀಲಿಸಿ ಕೂಡಲೇ ರಸ್ತೆಯ ತಗ್ಗು, ಗುಂಡಿಗಳನ್ನು ತಾತ್ಕಾಲಿಕವಾಗಿ ಮುಚ್ಚಲು ಕ್ರಮವಹಿಸುವಂತೆ ಸಾತಿಹಾಳ ಗ್ರಾಮದ ಪ್ರಕಾಶ ಡೋಣೂರ, ದಿಂಡವಾರ ಗ್ರಾಮದ ಚಂದ್ರಕಾಂತ ಮಟ್ಟಿ, ಬಸವರಾಜ ಪಾಟೀಲ, ಅಲ್ತಾಫ್ ವಾಲಿಕಾರ, ಮಲ್ಲು ಹಿರೇಕುರುಬರ, ಲಗಮಣ್ಣ ಯಾಳವಾರ, ಅಜೀಜ್ ವಾಲೀಕಾರ, ರೇವಣಸಿದ್ಧ ಮಣೂರ ಆಗ್ರಹಿಸುತ್ತಾರೆ.
ರಸ್ತೆಯಲ್ಲಿ ಪ್ರತಿದಿನ ಪ್ರಯಾಣಿಸುವ ನನಗೆ ವಾಸ್ತವ ಸ್ಥಿತಿಗತಿ ತಿಳಿದಿದೆ. ಸುಧಾರಣೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು.-ರಾಜುಗೌಡ ಪಾಟೀಲ(ಕುದರಿ ಸಾಲವಾಡಗಿ). ಶಾಸಕರು, ದೇವರಹಿಪ್ಪರಗಿ ಮತಕ್ಷೇತ್ರ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.