
ಇಂಡಿ: ಬಹುಹಳ್ಳಿ ಕುಡಿಯುವ ನೀರಿನ ಯೋಜನೆ ನಿರ್ವಹಿಸುವ ಗುತ್ತಿಗೆದಾರರಿಗೆ ಎರಡು ವರ್ಷಗಳಿಂದ ಸರ್ಕಾರದ ಅನುದಾನ ಬಾರದ ಕಾರಣ ಒಂದು ವಾರದಿಂದ 148 ಗ್ರಾಮಗಳಿಗೆ ನಳದ ಮೂಲಕ ನೀರು ಪೂರೈಕೆಯನ್ನು ಸ್ಥಗಿತಗೊಳಿಸಿದ್ದಾರೆ.
ಇಂಡಿ ಉಪವಿಭಾಗದ ಇಂಡಿ, ಚಡಚಣ ತಾಲ್ಲೂಕುಗಳಲ್ಲಿ 2016–2017ನೇ ಸಾಲಿನಲ್ಲಿ ಕೇಂದ್ರ ಮತ್ತು ಎನ್‌ಡಿಆರ್‌ಎಫ್ ಅನುದಾನದಲ್ಲಿ ಬಹುಹಳ್ಳಿ ಕಡಿಯುವ ನೀರಿನ ಯೋಜನೆ ಜಾರಿಗೊಳಿಸಲಾಗಿತ್ತು. ಇಂಚಗೇರಿ ಬಹುಹಳ್ಳಿ ಕುಡಿಯುವ ನೀರಿನ ಯೋಜನೆಯಡಿ 42 ಗ್ರಾಮಗಳು, ಧೂಳಖೇಡ ಯೋಜನೆಯಡಿ 7 ಗ್ರಾಮಗಳು, ಅಗರಖೇಡ–ಲಚ್ಯಾಣ ಗ್ರಾಮಗಳ ಯೋಜನೆಯಡಿ 22 ಗ್ರಾಮಗಳು, ಹೊರ್ತಿ ಯೋಜನೆಯಡಿ 32 ಗ್ರಾಮಗಳು, ತಡವಲಗಾ ಯೋಜನೆಯಡಿ 3 ಗ್ರಾಮಗಳು, ಭುಯ್ಯಾರ ಯೋಜನೆಯಡಿ 12 ಗ್ರಾಮಗಳು, ಗೊರನಾಳ ಯೋಜನೆಯಡಿ 6 ಗ್ರಾಮಗಳು, ತಾಂಬಾ ಯೋಜನೆಯಡಿ 10 ಗ್ರಾಮಗಳು, ನಿವರಗಿ ಯೋಜನೆಯಡಿ 4 ಗ್ರಾಮಗಳು, ದಸೂರ ಯೋಜನೆಯಡಿ 5 ಗ್ರಾಮಗಳು, ಗೋಡಿಹಾಳ ಯೋಜನೆಯಡಿ 6 ಗ್ರಾಮಗಳಿಗೆ ಕುಡಿಯುವ ನೀರು ಸರಬರಾಜು ಮಾಡಲು ವ್ಯವಸ್ಥೆ ಮಾಡಲಾಗಿದೆ.
10 ವರ್ಷಗಳಿಂದ ಎಲ್ಲಾ ಗ್ರಾಮಗಳಿಗೆ ಕುಡಿಯುವ ನೀರು ಪೂರೈಕೆಗೆ ಯಾವುದೇ ಸಮಸ್ಯೆಯಾಗಿಲ್ಲ. ಆದರೆ, ಅನುದಾನ ಬಾರದ ಕಾರಣ ಗುತ್ತಿಗೆದಾರರು ನೀರು ಪೂರೈಕೆ ಸ್ಥಗಿತಗೊಳಿಸಿದ್ದಾರೆ.
‘ಅನುದಾನ ಬಿಡುಗಡೆಗೆ ಆಗ್ರಹಿಸಿ, ಗ್ರಾಮೀಣ ನೀರು ಸರಬರಾಜು ಇಲಾಖೆಯ ಎಇಇ ಆರ್.ಎಸ್. ಬಂಡಿ ಅವರಿಗೆ ಮನವಿ ಮಾಡಿದಾಗ, ಒಂದಿಷ್ಟು ಅನುದಾನ ಬಿಡುಗಡೆ ಮಾಡಿಸಿದ್ದರು. ಎರಡು ವರ್ಷಗಳಿಂದ ನಿರ್ವಹಣಾ ಅನುದಾನ ಬಂದಿಲ್ಲ. ನಮ್ಮ ಸಿಬ್ಬಂದಿಗೆ ಸಂಬಳ ನೀಡಲು ಹಣವಿಲ್ಲ. ಅನುದಾನ ಬರುವವರೆಗೆ ನೀರು ಸರಬರಾಜು ಮಾಡಲು ಸಾಧ್ಯವಿಲ್ಲ’ ಎಂದು ಗುತ್ತಿಗೆದಾರ ಹಣಮಂತ ರೆಡ್ಡಿ ತಿಳಿಸಿದರು.
‘ತಾಲ್ಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದ್ದೇವೆ. ಆದರೂ, ಅನುದಾನ ಬಿಡುಗಡೆಯಾಗಿಲ್ಲ. ನೀರು ಸರಬರಾಜು ಸ್ಥಗಿತಗೊಳಿಸುವುದು ಅನಿವಾರ್ಯವಾಗಿದೆ’ ಎಂದು ಹೇಳಿದರು.
ಅನುದಾನ ಬಿಡುಗಡೆ ಆಗುವವರೆಗೆ ನೀರು ಬಂದ್ ಮಾಡುವುದಾಗಿ ಜಿಲ್ಲಾಧಿಕಾರಿ ಶಾಸಕರಿಗೆ ತಿಳಿಸಿಯೇ ಬಂದ್ ಮಾಡಿದ್ದೇವೆನಿಕೇತನ ಗುತ್ತಿಗೆದಾರ
‘₹6 ಕೋಟಿ ಅನುದಾನ ಬಾಕಿ’
‘ಇಂಡಿ ವಿಭಾಗದಲ್ಲಿ 11 ಬಹುಹಳ್ಳಿ ಕುಡಿಯುವ ನೀರಿನ ಯೋಜನೆಗಳು ಜಾರಿಯಲ್ಲಿವೆ. ಅವುಗಳನ್ನು ನಿರ್ವಹಣೆ ಮಾಡುವ ಗುತ್ತಿಗೆದಾರರಿಗೆ ಅಂದಾಜು ₹6 ಕೋಟಿ ಅನುದಾನ ಸರ್ಕಾರದಿಂದ ಬರಬೇಕಿದೆ. ಅದು ಬರುವವರೆಗೆ ನೀರು ಪೂರೈಕೆ ಮಾಡುವುದಿಲ್ಲವೆಂದು ಗುತ್ತಿಗೆದಾರರು ಹೇಳಿದ ಪರಿಣಾಮ ನೀರು ಸರಬರಾಜು ಆಗುತ್ತಿಲ್ಲ’ ಎಂದು ಗ್ರಾಮೀಣ ನೀರು ಸರಬರಾಜು ಇಲಾಖೆ ಎ.ಇ.ಇ ಆರ್.ಎಸ್. ಬಂಡಿ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.