
ಬಸವನಬಾಗೇವಾಡಿ: ‘ತಾಲ್ಲೂಕಿನ ಬಂಜಾರ ಸಮುದಾಯದ ಅನುಕೂಲಕ್ಕಾಗಿ ಬಸವನಬಾಗೇವಾಡಿಯಲ್ಲಿ ಶೀಘ್ರದಲ್ಲೇ ಬಂಜಾರಾ ಸಮುದಾಯ ಭವನ ನಿರ್ಮಿಸಿ ಸಮುದಾಯದ ಬಹುದಿನಗಳ ಬೇಡಿಕೆ ಈಡೇರಿಸುತ್ತೇನೆ’ ಎಂದು ಸಚಿವ ಶಿವಾನಂದ ಪಾಟೀಲ ಭರವಸೆ ನೀಡಿದರು.
ಕರ್ನಾಟಕ ಪ್ರದೇಶ ಬಂಜಾರಾ ಸೇವಾ ಸಂಘದ ತಾಲ್ಲೂಕು ಘಟಕದಿಂದ ಪಟ್ಟಣದ ಬಸವಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸಂತ ಸೇವಾಲಾಲರ ಜಯಂತ್ಯುತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
‘ಅನೇಕ ದಾರ್ಶನಿಕರು, ಸಂತರು ಮಾನವೀಯ ಮೌಲ್ಯಗಳನ್ನು ಬಿತ್ತುವ ಮೂಲಕ ಸಮಾಜದ ದಿಕ್ಕನ್ನು ಬದಲಾಯಿಸಿದ ಕಾರಣ ಇಂದು ಭಾರತ ವಿಶ್ವಕ್ಕೆ ಗುರುವಾಗಿದೆ. ಬಹುದಿನಗಳಿಂದ ಈ ಜಾತಿ ವ್ಯವಸ್ಥೆ ನಮ್ಮನ್ನು ವಿಘಟನೆ ಮಾಡುತ್ತಿದೆ. ಆದರೆ ಎಲ್ಲರನ್ನು ಒಗ್ಗೂಡಿಸುವ ಶ್ರೇಷ್ಠ ಸಂವಿಧಾನವನ್ನು ಬಿ.ಆರ್. ಅಂಬೇಡ್ಕರ್ ನಮಗೆ ಕೊಟ್ಟು ಹೋಗಿದ್ದಾರೆ. ಸರ್ವ ರೀತಿಯಲ್ಲೂ ಅತ್ಯಂತ ಹಿಂದುಳಿದಿದ್ದ ಬಂಜಾರಾ ಸಮುದಾಯ ಇಂದು ಶೈಕ್ಷಣಿಕ, ಸಾಮಾಜಿಕ ಹಾಗೂ ಔದ್ಯೋಗಿಕವಾಗಿ ಸಾಕಷ್ಟು ಮುಂದುವರಿಯುತ್ತಿದೆ. ಸಂತ ಸೇವಾಲಾಲರು ನಮ್ಮವರು ಎಂಬುದು ನಮ್ಮೆಲ್ಲರ ಆತ್ಮದ ಅಭಿಮಾನ’ ಎಂದರು.
ಕೌಶಲಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷೆ ಕಾಂತಾ ನಾಯಕ ಮಾತನಾಡಿ, ‘ಸೇವಾಲಾಲರ ಜಯಂತಿ ಕೇವಲ ಜಯಂತಿಗಷ್ಟೇ ಸಿಮಿತವಾಗಬಾರದು. ಅವರ ತತ್ವಾದರ್ಶಗಳ ಪಾಲನೆಯೂ ಆಗಬೇಕು. ಸರ್ಕಾರದಿಂದ ಸಿಗುವ ಎಲ್ಲಾ ಸೌಲಭ್ಯಗಳನ್ನು ಬಳಸಿಕೊಂಡು ಸಮುದಾಯದ ಪ್ರತಿಯೊಬ್ಬರೂ ಸುಂದರ ಬದುಕು ಕಟ್ಟಿಕೊಳ್ಳಬೇಕು’ ಎಂದು ಕರೆ ನೀಡಿದರು.
ದೇವರಹಿಪ್ಪರಗಿ ಶಾಸಕ ರಾಜುಗೌಡ ಪಾಟೀಲ, ರಾಜ್ಯ ಸಹಕಾರಿ ಮಹಾಮಂಡಲದ ನಿರ್ದೇಶಕ ಈರಣ್ಣ ಪಟ್ಟಣಶೆಟ್ಟಿ, ಕೆಪಿಸಿಸಿ ರಾಜ್ಯ ಸಂಯೋಜಕ ಪ್ರಭುಗೌಡ ಪಾಟೀಲ ಲಿಂಗದಳ್ಳಿ, ಬಂಜಾರಾ ಸೇವಾ ಸಂಘದ ಜಿಲ್ಲಾಧ್ಯಕ್ಷ ಬಸವರಾಜ ಚವ್ಹಾಣ, ಸಮುದಾಯದ ಮುಖಂಡ ರವಿ ರಾಠೋಡ ಮಾತನಾಡಿದರು.
ಕೆಸರಟ್ಟಿ ಸೋಮಲಿಂಗ ಸ್ವಾಮೀಜಿ, ನರಸಲಗಿಯ ಶ್ರೀಕಾಂತ ಗುರೂಜಿ ಸಾನ್ನಿಧ್ಯ ವಹಿಸಿದ್ದರು. ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಅಪ್ಪುಗೌಡ ಪಾಟೀಲ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶ ಹಾರಿವಾಳ, ಮುಖಂಡರಾದ ಅನಿಲ ಅಗರವಾಲ, ತಹಶೀಲ್ದಾರ ವೈ.ಎಸ್.ಸೋಮನಕಟ್ಟಿ, ತಾ.ಪಂ ಇಓ ಪ್ರಕಾಶ ದೇಸಾಯಿ, ಬಂಜಾರಾ ಸಮುದಾಯದ ಮುಖಂಡರಾದ ಮಲ್ಲು ನಾಯಕ್, ಪ್ರಶಾಂತ ಪವಾರ, ಹರಿಲಾಲ ನಾಯಕ, ರುಕ್ಮಿಣಿ ರಾಠೋಡ, ಸುನಿತಾ ಪವಾರ, ಮಲ್ಲು ಪವಾರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.