
ವಿಜಯಪುರ: ರಾಜ್ಯ ಸರ್ಕಾರ ಅಕ್ರಮ ಬಾಂಗ್ಲಾ ನುಸುಳುಕೋರರಿಗೆ ಕೆಂಪು ಹಾಸಿನ ಸ್ವಾಗತ ನೀಡುತ್ತಿದೆ ಎಂದು ಎಬಿವಿಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವಿರೇಂದ್ರ ಸೋಲಂಕಿ ಆರೋಪಿಸಿದರು.
ನಗರದ ದರ್ಬಾರ್ ಹೈಸ್ಕೂಲ್ ಮೈದಾನದಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ 45 ನೇ ಪ್ರಾಂತ ಸಮ್ಮೇಳನದ ಅಂಗವಾಗಿ ಭಾನುವಾರ ನಡೆದ ಸಾರ್ವಜನಿಕ ಸಭೆಯಲ್ಲಿ ಅವರು ದಿಕ್ಸೂಚಿ ಭಾಷಣ ಮಾಡಿದರು.
ಬಾಂಗ್ಲಾದೇಶಕ್ಕೆ ಭಾರತವನ್ನು ಎದುರಿಸುವ ಸಾಮರ್ಥ್ಯವಿಲ್ಲ, ಬಾಂಗ್ಲಾ ನುಸುಳುಕೋರರು ಮೇಲೆ ಇಲ್ಲಿ ವ್ಯವಸ್ಥೆಯನ್ನು ಹದಗೆಡಿಸುವ ಕೆಲಸ ಮಾಡುತ್ತಿದ್ದಾರೆ, ಇಂದು ಕರ್ನಾಟಕ ಸೇರಿದಂತೆ ಎಲ್ಲೆಡೆ ಬಾಂಗ್ಲಾ ಅಕ್ರಮ ನಸುಳುಕೋರರು ವ್ಯಾಪಕವಾಗಿದ್ದಾರೆ, ಅವರಿಗೆ ಆಧಾರ್ ಕಾರ್ಡ್ ಸೇರಿದಂತೆ ಸಕಲ ಸೌಲಭ್ಯಗಳನ್ನು ನೀಡಲಾಗುತ್ತಿದೆ, ರಾಜ್ಯ ಸರ್ಕಾರ ಸಹ ಇದಕ್ಕೆ ಕುಮ್ಮಕ್ಕು ನೀಡುತ್ತಿದೆ ಎಂದು ದೂರಿದರು.
ಎಬಿವಿಪಿ ವೋಟ್ ಚೋರಿ ಮಾಡಿ ಗೆದ್ದಿಲ್ಲ, ಅದು ವಿದ್ಯಾರ್ಥಿ- ಯುವಜನತೆಯ ಹೃದಯವನ್ನು ಕದ್ದಿದೆ. ಹೃದಯವನ್ನು ಗೆದ್ದಿದೆ, ಈ ಕಾರಣಕ್ಕಾಗಿಯೇ ಅನೇಕ ವಿಶ್ವವಿದ್ಯಾಲಯಗಳಲ್ಲಿ ಗೆಲುವು ಸಾಧಿಸಲು ಸಾಧ್ಯವಾಗಿಸಿದೆ ಎಂದರು.
ವಿದ್ಯಾರ್ಥಿ ಮುಖಂಡ ಹಣಮಂತ ಬಗಲಿ, ಸನತ್ ತೋಟಗೇರಿ, ಎಬಿವಿಪಿ ರಾಜ್ಯ ಘಟಕದ ಅಧ್ಯಕ್ಷ ಬಸವರಾಜ ಕುಬಕಡ್ಡಿ, ಎಬಿವಿಪಿ ಕಾರ್ಯದರ್ಶಿ ದರ್ಶನ ಹೆಗಡೆ, ಎಬಿವಿಪಿ ಪ್ರಮುಖರಾದ ಸಚೀನ್ ಕುಳಗೇರಿ, ರಾಘವೇಂದ್ರ ದೇಸಾಯಿ ಸೇರಿದಂತೆ ವಿವಿಧ ವಿಭಾಗಗಳಿಂಧ ಆಗಮಿಸಿದ ಪ್ರತಿನಿಧಿಗಳು ಉಪಸ್ಥಿತರಿದ್ದರು.
ಸಭಿಕರ ಸಾಲಿನಲ್ಲಿ ಯತ್ನಾಳ: ಅಖಿಲ ಭಾರತ ವಿದ್ಯಾರ್ಥಿ ಪರಿಷತ್, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಜೊತೆ ನಿಕಟ ಸಂಪರ್ಕ ಹೊಂದಿರುವ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳರು ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಿದ್ದರು. ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಬಾಲಕೃಷ್ಣ, ಎಚ್. ವೆಂಕಟೇಶ ಸೇರಿದಂತೆ ಅನೇಕ ಮುಖಂಡರ ಸಮ್ಮುಖದಲ್ಲಿ ಸಭಿಕರ ಸಾಲಿನಲ್ಲಿ ಕುಳಿತು ಕಾರ್ಯಕ್ರಮ ವೀಕ್ಷಿಸಿದರು.
ಗ್ಯಾರಂಟಿ ಯೋಜನೆಗಳ ಮೂಲಕ ಮಹಿಳೆಯರನ್ನು ಮುಖ್ಯವಾಹಿನಿಯಿಂದ ದೂರ ಇಡುವ ಕೆಲಸ ನಡೆದಿದೆ ಆಲಸ್ಯರನ್ನಾಗಿ ಮಾಡುವ ಪ್ರಯತ್ನ ನಡೆದಿದೆ ನಮಗೆ ಈ ಬಿಟ್ಟಿ ಭಾಗ್ಯಗಳು ಬೇಕಿಲ್ಲ ಮಹಿಳೆಗೆ ಸುರಕ್ಷತೆಯ ಗ್ಯಾರಂಟಿ ಬೇಕಾಗಿದೆ- ಸುಜ್ಞಾತಾ ಕುಲಕರ್ಣಿ ಎಬಿವಿಪಿ ಪ್ರತಿನಿಧಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.