ಇಂಡಿ: ಒಳಮೀಸಲಾತಿ ಜಾರಿಗೆ ವಿರೋಧಿಸಿ ಪಟ್ಟಣದಲ್ಲಿ ಬಂಜಾರಾ ಸಮುದಾಯದವರು ಪ್ರತಿಭಟನೆ ನಡೆಸಿದರು. ಪ್ರತಿಭಟನೆ ಸೇವಾಲಾಲ ವೃತ್ತದಿಂದ ಬಸವೇಶ್ವರ ವೃತ್ತದ ಮಾರ್ಗವಾಗಿ ಆಡಳಿತಸೌಧ ತಲುಪಿತು.
ಬಂಜಾರಾ ಸಮುದಾಯದ ತಾಲ್ಲೂಕು ಘಟಕದ ಅಧ್ಯಕ್ಷ ಸಂಜೀವ ಚವ್ಹಾಣ ಮಾತನಾಡಿ, ‘ಸ್ಪೃಶ್ಯ, ಅಸ್ಪೃಶ್ಯ ಪದಗಳನ್ನು ಸರ್ಕಾರ ಕಡತಗಳಿಂದ ತೆಗೆಯಬೇಕು. ಪರಿಶಿಷ್ಟ ಜಾತಿಯವರಿಗೆ ಒಳಮೀಸಲಾತಿ ನೀಡುವ ಸಂಬಂಧ ನಿವೃತ್ತ ನ್ಯಾ.ಎಚ್.ಎನ್. ನಾಗಮೋಹನ್ ದಾಸ್ ಆಯೋಗದ ವರದಿ ಸಂಪೂರ್ಣ ಸುಳ್ಳು ವರದಿಯಾಗಿದೆ. ಇದನ್ನು ಸಮುದಾಯ ತೀವ್ರವಾಗಿ ಖಂಡಿಸುತ್ತದೆ’ ಎಂದರು.
ಪುರಸಭೆ ಅಧ್ಯಕ್ಷ ಲಿಂಬಾಜಿ ರಾಠೋಡ ಮಾತನಾಡಿ, ‘ನಾಗಮೋಹನ್ ದಾಸ್ ವರದಿಯಲ್ಲಿ 101 ಜಾತಿಗಳ ಪೈಕಿ ಬಂಜಾರಾ ಜಾತಿ ಸೇರಿಸಿ ‘ಡಿ’ ವರ್ಗದಲ್ಲಿ ಆಯಾ ಜಾತಿಗಳಿಗೆ ಒಟ್ಟು ಶೇ4 ರಷ್ಟು ಮೀಸಲಾತಿ ನೀಡಿರುವುದು ಆರ್ಟಿಕಲ್ 341 (2) ಕ್ಕೆ ವಿರುದ್ಧವಾಗಿದೆ. ಬಂಜಾರಾ ಸಮುದಾಯ ಬಡತನದಿಂದ ಜೀವನ ಸಾಗಿಸುತ್ತಿದ್ದು ಕುಲ ಕಸಬು ಕಳೆದುಕೊಂಡು ಹೀನಾಯ ಪರಿಸ್ಥಿತಿಯಲ್ಲಿದೆ. ಇದನ್ನು ಸರ್ಕಾರ ಪರಿಗಣಿಸಿ ಸಮುದಾಯಕ್ಕೆ ನ್ಯಾಯ ದೊರಕಿಸಬೇಕು’ ಎಂದರು.
ಪ್ರಾಧ್ಯಾಪಕ ವಿಜಯಕುಮಾರ ರಾಠೋಡ ಮಾತನಾಡಿ, ‘ಸರ್ಕಾರ ಹಿಂದುಳಿದ ಸಮುದಾಯಗಳನ್ನು ಬಿಟ್ಟು ಅರ್ಥಿಕವಾಗಿ ಸುಧಾರಣೆಯಾಗಿರುವ ಸಮುದಾಯವನ್ನು ಶೇ 6ರಷ್ಟು ಒಳ ಮೀಸಲಾತಿ ನೀಡಿದೆ. ತೀವ್ರವಾಗಿ ಹಿಂದುಳಿದ ಸಮುದಾಯಕ್ಕೆ 63 ಸಮುದಾಯಕ್ಕೆ ಶೇ5 ರಷ್ಟು ನೀಡಿ ಅನ್ಯಾಯ ಮಾಡಿದೆ’ ಎಂದರು.
ಭೀಮು ರಾಠೋಡ, ಸಂಜೀವ ಜಾಧವ, ಧರ್ಮಸಿಂಗ ರಾಠೋಡ, ರಂಗನಾಥ ಚವ್ಹಾಣ, ಮೋಹನ ರಾಠೋಡ, ಹರಿಶ್ಚಂದ್ರ ರಾಠೋಡ, ಲಕ್ಷ್ಮಣ ಚವ್ಹಾಣ, ಸೋಮು ರಾಠೋಡ, ವಿಜಯ ರಾಠೋಡ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.