ADVERTISEMENT

ವಿಜಯಪುರ| ಬಂಜಾರ ಸಮುದಾಯದ ಉಡುಪು ತಯಾರಿಕೆಗೆ ಯೋಜನೆ: ಎಂ.ಬಿ.ಪಾಟೀಲ

ಹಾಮುಲಾಲ್ ನೂತನ ದೇವಸ್ಥಾನ, ಮೂರ್ತಿ ಪ್ರತಿಷ್ಠಾಪನೆ, ಕಳಸಾರೋಹಣ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2023, 16:06 IST
Last Updated 19 ಮಾರ್ಚ್ 2023, 16:06 IST
ವಿಜಯಪುರ ನಗರದ ಸೋಲಾಪುರ ಬೈಪಾಸ್ ರಸ್ತೆಯಲ್ಲಿ ನಿರ್ಮಿಸಲಾಗಿರುವ ಶ್ರೀ ಹಾಮುಲಾಲ್ ನೂತನ ದೇವಸ್ಥಾನ, ಮೂರ್ತಿ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣ ಕಾರ್ಯಕ್ರಮವನ್ನು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ. ಬಿ. ಪಾಟೀಲ ಉದ್ಘಾಟಿಸಿದರು
ವಿಜಯಪುರ ನಗರದ ಸೋಲಾಪುರ ಬೈಪಾಸ್ ರಸ್ತೆಯಲ್ಲಿ ನಿರ್ಮಿಸಲಾಗಿರುವ ಶ್ರೀ ಹಾಮುಲಾಲ್ ನೂತನ ದೇವಸ್ಥಾನ, ಮೂರ್ತಿ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣ ಕಾರ್ಯಕ್ರಮವನ್ನು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ. ಬಿ. ಪಾಟೀಲ ಉದ್ಘಾಟಿಸಿದರು   

ವಿಜಯಪುರ: ಬಂಜಾರಾ ಸಮುದಾಯದ ಉಡುಪು ಮತ್ತು ಅದನ್ನು ತಯಾರಿಸುವ ಕಲೆಯನ್ನು ಜಗತ್ತಿಗೆ ಪರಿಚಯಿಸಲು ಯೋಜನೆ ರೂಪಿಸಲಾಗಿದೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ. ಬಿ. ಪಾಟೀಲ ತಿಳಿಸಿದರು.

ನಗರದ ಸೋಲಾಪುರ ಬೈಪಾಸ್ ರಸ್ತೆಯಲ್ಲಿ ನಿರ್ಮಿಸಲಾಗಿರುವ ಶ್ರೀ ಹಾಮುಲಾಲ್ ನೂತನ ದೇವಸ್ಥಾನ, ಮೂರ್ತಿ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣ ಉದ್ಘಾಟನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಬಂಜಾರಾ ಸಮುದಾಯದ ಉಡುಪು ತಯಾರಿಕೆ ನಿಟ್ಟಿನಲ್ಲಿ ದೊಡ್ಡ ಮಟ್ಟದಲ್ಲಿ ಗುಡಿ ಕೈಗಾರಿಕೆಗೆ ಪ್ರೋತ್ಸಾಹ ನೀಡಿ ಅವುಗಳ ಮಾರುಕಟ್ಟೆ ವ್ಯವಸ್ಥೆ ಒದಗಿಸಲಾಗುವುದು. ಈ ಹೊಸ ಯೋಜನೆಯಿಂದ ಬಂಜಾರಾ ಸಮುದಾಯದ ಮಹಿಳೆಯರು ಆರ್ಥಿಕವಾಗಿ ಹೆಚ್ಚು ಸ್ವಾವಲಂಬಿಯಾಗಲಿದ್ದಾರೆ. ಅಲ್ಲದೇ, ಉದ್ಯೋಗ ಸೃಷ್ಠಿಗೂ ಇದು ನೆರವಾಗಲಿದೆ. ಈ ಯೋಜನೆ ಅನುಷ್ಠಾನಕ್ಕೆ ಆಶಾ ಎಂ. ಪಾಟೀಲ ಅವರೂ ಕಾರ್ಯೋನ್ಮುಖರಾಗಿದ್ದಾರೆ ಎಂದರು.

ADVERTISEMENT

ಹಾಮುಲಾಲ್ ದೇವಸ್ಥಾನ ನಿರ್ಮಾಣಕ್ಕೆ ಬಿ.ಎಲ್.ಡಿ.ಇ ಸಂಸ್ಥೆಗೆ ಸೇರಿದ ₹10 ಕೋಟಿ ಮೌಲ್ಯದ ನಿವೇಶನ ನೀಡಿ ದೇವಸ್ಥಾನ ನಿರ್ಮಾಣಕ್ಕೆ ₹3.50 ಕೋಟಿ ಅನುದಾನ ಕೊಟ್ಟಿದ್ದೇವೆ. ಈ ಮೂಲಕ ಬಂಜಾರ ಸಮುದಾಯದ ಆರಾಧ್ಯದೈವ ಹಾಮುಲಾಲರಿಗೆ ಅಳಿಲು ಸೇವೆ ಸಲ್ಲಿಸಿದ್ದೇನೆ ಎಂದು ಹೇಳಿದರು.

ವಿಜಯಪುರ ನಗರದ ಆದರ್ಶ ನಗರದಲ್ಲಿ ರಾಮರಾವ್‌ ಮಹಾರಾಜರ ಹೆಸರಿನಲ್ಲಿ ₹3.50 ಕೋಟಿ ಅನುದಾನದಲ್ಲಿ ಸಮುದಾಯ ಭವನ ನಿರ್ಮಸಲು ಸಹಾಯ ಮಾಡಿದ್ದೇನೆ. ವಿಜಯಪುರ ಜಿಲ್ಲೆಯಲ್ಲಿ ಪ್ರತಿಯೊಂದು ತಾಂಡಾಗಳಲ್ಲಿ ಕನಿಷ್ಠ ₹25 ಸಾವಿರದಿಂದ ₹1 ಕೋಟಿ ವರೆಗೆ ಅನುದಾನ ನೀಡಿ, ದುರ್ಗಾದೇವಿ ದೇವಸ್ಥಾನ, ಸೇವಾಲಾಲ, ಹಾಮುಲಾಲ ಸುಮುದಾಯ ಭವನ ನಿರ್ಮಾಣಕ್ಕೆ ಹಣಕಾಸಿನ ನೆರವು ನೀಡಿದ್ದೇನೆ ಎಂದು ಅವರು ತಿಳಿಸಿದರು.

ಕಾಂಗ್ರೆಸ್‌ ಸರ್ಕಾರ ಮತ್ತೆ ರಾಜ್ಯದಲ್ಲಿ ಅಧಿಕಾರಕ್ಕೆ ಬರಲಿದ್ದು, ಆಗ ಸಮಾಜದ ಬೇಡಿಕೆಯಾದ ಬಂಜಾರಾ ಪ್ರಾಧಿಕಾರ ರಚಿಸಲಾಗುವುದು ಎಂದು ಭರವಸೆ ನೀಡಿದರು.

ವಿಧಾನ ಪರಿಷತ್‌ ಸದಸ್ಯ ಸುನೀಲಗೌಡ ಪಾಟೀಲ ಮಾತನಾಡಿ, ವಿಜಯಪುರ ಹಾಮುಲಾಲ ದೇವಸ್ಥಾನವನ್ನು ಅಥಣಿ ಮಂದಿರದ ಮಾದರಿಯಲ್ಲಿ ಧಾರ್ಮಿಕ ಸ್ಥಳವಾಗಿ ಅಭಿವೃದ್ಧಿ ಮಾಡಲಾಗುವುದು. ಅಲ್ಲದೇ, ಪ್ರತಿ ವರ್ಷ ದೊಡ್ಡ ಜಾತ್ರೆ ಮಾಡಲು ದಿನಾಂಕ ನಿಗದಿ ಮಾಡಲಾಗವುದು ಎಂದು ಹೇಳಿದರು.

ಜಿ. ಪಂ. ಮಾಜಿ ಅಧ್ಯಕ್ಷ ಅರ್ಜುನ ಹೀರು ರಾಠೋಡ, ದಾವಣಗೆರೆಯ ರಾಘವೇಂದ್ರ ನಾಯಕ, ಸೋಮದೇವರಹಟ್ಟಿ ದುರ್ಗಾದೇವಿ ಶಕ್ತಿಪೀಠದ ಜಗನು ಮಹಾರಾಜರು ಮಾತನಾಡಿದರು.

ಆಶಾ ಎಂ. ಪಾಟೀಲ, ರೇಣುಕಾ ಎಸ್. ಪಾಟೀಲ, ಕಲ್ಪನಾ ಪಾಟೀಲ, ಧನಸಿಂಗ್ ಮಹಾರಾಜರು, ಅಮರಸಿಂಗ್ ಮಹಾರಾಜರು, ಮುಖಂಡರಾದ ಡಿ. ಎಲ್. ಚವ್ವಾಣ, ರಾಜಪಾಲ ಚವ್ಹಾಣ, ಬಿ. ಬಿ. ಲಮಾಣಿ, ವಾಮನ ಚವ್ಹಾಣ, ರಾಜು ಜಾಧವ, ರಾಜು ಪವಾರ, ಚಂದ್ರಶೇಖರ ರಾಠೋಡ, ರಾಜು ಚವ್ಹಾಣ, ದೇವರಾಜ ರಾಠೋಡ, ವಿದ್ಯಾರಾಣಿ ತುಂಗಳ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.