ADVERTISEMENT

ಸರ್ವರೂ ನಮ್ಮವರು ಎನ್ನುವುದೇ ಬಸವ ಸಂಸ್ಕೃತಿ: ಪ್ರಭುಚನ್ನಬಸವ ಸ್ವಾಮೀಜಿ

ಅಥಣಿ ಮೋಟಗಿಮಠದ ಪ್ರಭುಚನ್ನಬಸವ ಸ್ವಾಮೀಜಿ ಅಭಿಮತ

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2025, 5:10 IST
Last Updated 6 ಆಗಸ್ಟ್ 2025, 5:10 IST
ಬಸವನಬಾಗೇವಾಡಿ ತಾಲ್ಲೂಕಿನ ರೆಬಿನಾಳ‌ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಬಸವ ಸಂಸ್ಕೃತಿ‌ ಅಭಿಯಾನದ ಚಿಂತನ ಮಂಥನ ಕಾರ್ಯಕ್ರಮದಲ್ಲಿ ಬಸವೇಶ್ವರರ ಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು
ಬಸವನಬಾಗೇವಾಡಿ ತಾಲ್ಲೂಕಿನ ರೆಬಿನಾಳ‌ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಬಸವ ಸಂಸ್ಕೃತಿ‌ ಅಭಿಯಾನದ ಚಿಂತನ ಮಂಥನ ಕಾರ್ಯಕ್ರಮದಲ್ಲಿ ಬಸವೇಶ್ವರರ ಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು   

ಬಸವನಬಾಗೇವಾಡಿ: ‘ಎನಗಿಂತ‌ ಕಿರಿಯರಿಲ್ಲ ಎನ್ನುತ್ತ ಸರ್ವರೂ ನಮ್ಮವರು ಎಂದು ಅಪ್ಪಿ ಒಪ್ಪಿಕೊಂಡವರು ಬಸವಣ್ಣನವರು. ಸರ್ವರೂ ನಮ್ಮವರು ಎನ್ನುವುದೇ ಬಸವ ಸಂಸ್ಕೃತಿ’ ಎಂದು ಅಥಣಿ ಮೋಟಗಿಮಠದ ಪ್ರಭುಚನ್ನಬಸವ ಸ್ವಾಮೀಜಿ ನುಡಿದರು.

ತಾಲ್ಲೂಕಿನ ರಬಿನಾಳ ಗ್ರಾಮದಲ್ಲಿ ಮಂಗಳವಾರ ರಾಷ್ಟ್ರೀಯ‌ ಬಸವಸೈನ್ಯ ವತಿಯಿಂದ ಹಮ್ಮಿಕೊಂಡಿದ್ದ ಬಸವ ಸಂಸ್ಕೃತಿ ಅಭಿಯಾನದ ಚಿಂತನ ಮಂಥನ ಕಾರ್ಯಕ್ರಮದ ಸಾನಿಧ್ಯವಹಿಸಿ ಅವರು ಮಾತನಾಡಿದರು.

‘ಬಸವ ಸಂಸ್ಕೃತಿ ಬಹಳ ಮೌಲ್ವಿಕವಾದದ್ದು. ದಯಾ ಪರ, ಮಾನವ ಪರ ಇರುವ ಸಂಸ್ಕೃತಿ. ಸರ್ವರಿಗೂ ಬಾಳನ್ನು ಬೆಳಗಿ ಬದುಕಲು ಕಲಿಸುವ ಸಂಸ್ಕೃತಿಯಾಗಿದೆ. ಹಾಗಾಗಿ ಅದು ನಮ್ಮೆಲ್ಲರ ಜೀವನದ ಮೌಲ್ಯ, ಅರಿವು, ಆಚಾರ ಹಾಗೂ ಅನುಭಾವವಾಗಬೇಕು’ ಎಂದು ತಿಳಿಸಿದರು.

ADVERTISEMENT

‘ರಾಜ್ಯ ಸರ್ಕಾರ ಬಸವಣ್ಣನವರನ್ನು ನಾಡಿನ ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದೆ. ಇದರಿಂದ ದೇಶದೆಲ್ಲೆಡೆ ಬಸವಣ್ಣನವರ ತತ್ವಾದರ್ಶಗಳು ಜಾಗತಿಕ ಮಟ್ಟದಲ್ಲಿ ಅತ್ಯುನ್ನತ ಸ್ಥಾನದಲ್ಲಿವೆ. ಇದನ್ನು ನಿರಂತರವಾಗಿ ಜಾಗೃತಗೊಳಿಸಲು ರಾಜ್ಯದಾದ್ಯಂತ ಬಸವ ಸಂಸ್ಕೃತಿ ಅಭಿಯಾನ ಹಮ್ಮಿಕೊಳ್ಳಲಾಗಿದ್ದು, ಸೆ.1ರಂದು ಬಸವ ಜನ್ಮಭೂಮಿ‌ ಬಸವನ ಬಾಗೇವಾಡಿಯಿಂದಲೇ‌ ಚಾಲನೆ ಪಡೆಯುತ್ತಿದೆ. ಎಲ್ಲಾ ಬಸವಭಕ್ತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು’ ಎಂದು ಕರೆ ನೀಡಿದರು.

ರಾಷ್ಟ್ರೀಯ ಬಸವಸೈನ್ಯ ಸಂಸ್ಥಾಪಕ‌ ಅಧ್ಯಕ್ಷ ಶಂಕರಗೌಡ ಬಿರಾದಾರ, ರೈತ ಮುಖಂಡ ಅರವಿಂದ ಕುಲಕರ್ಣಿ ಮಾತನಾಡಿ, ‘ಬಸವಣ್ಣನವರನ್ನು ಎಲ್ಲಾ ಜನಮಾನಸದಲ್ಲಿ ಮೂಡಿಸಲು ರಾಜ್ಯದ ಪ್ರತಿ‌ ಜಿಲ್ಲಾ‌ ಕೇಂದ್ರಗಳಲ್ಲಿ ಬಸವ ಸಂಸ್ಕೃತಿ ಅಭಿಯಾನ ಹಾಗೂ ರಥಯಾತ್ರೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಚಾಲನೆ ಕಾರ್ಯಕ್ರಮದಲ್ಲಿ ಎಲ್ಲರೂ ಭಾಗವಹಿಸಬೇಕು’ ಎಂದು ತಿಳಿಸಿದರು.

ರಾಷ್ಟ್ರೀಯ ಬಸವಸೈನ್ಯದ ಸಂಚಾಲಕ ಶ್ರೀಕಾಂತ ಕೊಟ್ರಶೆಟ್ಟಿ, ಬಸವೇಶ್ವರ ದೇವಸ್ಥಾನದ ಅಧ್ಯಕ್ಷ ಅಣ್ಣಾರಾಯಗೌಡ ಬಿರಾದಾರ ಮಾತನಾಡಿದರು.

ರಾಷ್ಟ್ರೀಯ ಬಸವಸೈನ್ಯದ ತಾಲ್ಲೂಕು ಅಧ್ಯಕ್ಷ ಸಂಜು ಬಿರಾದಾರ, ಮುಖಂಡರಾದ ಸುನೀಲ ಚಿಕ್ಕೊಂಡ, ಮಂಜುನಾಥ ಜಾಲಗೇರಿ, ಪರಮಾನಂದ ಮುತ್ಯಾ, ಶಿಕ್ಷಕರಾದ ಕೆ. ಬಿ. ಕಡಗೋಲ, ಆರ್. ಬಿ. ಮೊಟಗಿ, ರಮೇಶಗೌಡ ಬಿರಾದಾರ, ಸಂಗಣ್ಣ ಸಿಂಧೂರ, ರಾಚನಗೌಡ ಪಾಟೀಲ, ಸಂಗಮೇಶ ಹಾದಿಮನಿ, ಬಸವರಾಜ ಗೂಡೂರು, ಪ್ರೊ. ಮುರುಗಯ್ಯ ಶಿರಸಂಗಿ, ಗ್ರಾಮ ಘಟಕದ ಅಧ್ಯಕ್ಷ ಗುರಣ್ಣಗೌಡ ಬಿರಾದಾರ ಇದ್ದರು.

ಬಸವ ಸಂಸ್ಕೃತಿ ಅಭಿಯಾನದ ಚಿಂತನ ಮಂಥನ ಕಾರ್ಯಕ್ರಮ | ಬಸವಣ್ಣನವರ ಆಚಾರ, ಮೌಲ್ಯಗಳನ್ನು ಪಾಲಿಸಿ | ಬಸವ ಸಂಸ್ಕೃತಿ ಅಭಿಯಾನ ಯಶಸ್ವಿಗೊಳಿಸಲು ಸಲಹೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.