ADVERTISEMENT

ಬಸವ ಜಯಂತಿಗೆ ಬಾಗೇವಾಡಿ ಸಜ್ಜು..!

ಪುರಸಭೆ, ಕೂಡಲ ಸಂಗಮ ಅಭಿವೃದ್ಧಿ ಪ್ರಾಧಿಕಾರ, ತಾಲ್ಲೂಕು ಆಡಳಿತದಿಂದ ವಿವಿಧ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 4 ಮೇ 2019, 12:10 IST
Last Updated 4 ಮೇ 2019, 12:10 IST
ಬಸವನಬಾಗೇವಾಡಿ ಪಟ್ಟಣದ ಬಸವೇಶ್ವರ ವೃತ್ತದ ಸುತ್ತಲಿನ ಉದ್ಯಾನ ವೀಕ್ಷಿಸುತ್ತಿರುವ ತಹಶೀಲ್ದಾರ್ ಬಸವರಾಜ ಬೆಣ್ಣೆಶಿರೂರ, ಪುರಸಭೆ ಮುಖ್ಯಾಧಿಕಾರಿ ಕೆ.ಗುರಲಿಂಗಪ್ಪ
ಬಸವನಬಾಗೇವಾಡಿ ಪಟ್ಟಣದ ಬಸವೇಶ್ವರ ವೃತ್ತದ ಸುತ್ತಲಿನ ಉದ್ಯಾನ ವೀಕ್ಷಿಸುತ್ತಿರುವ ತಹಶೀಲ್ದಾರ್ ಬಸವರಾಜ ಬೆಣ್ಣೆಶಿರೂರ, ಪುರಸಭೆ ಮುಖ್ಯಾಧಿಕಾರಿ ಕೆ.ಗುರಲಿಂಗಪ್ಪ   

ಬಸವನಬಾಗೇವಾಡಿ:ಬಸವ ಜನ್ಮಭೂಮಿ ಬಸವನಬಾಗೇವಾಡಿಯಲ್ಲಿ ಬಸವ ಜಯಂತಿಯನ್ನು ಸಂಭ್ರಮದಿಂದ ಆಚರಿಸಲು ಸಕಲ ಸಿದ್ಧತೆ ಬಿರುಸಿನಿಂದ ನಡೆದಿವೆ.

ಬಸವ ಜಯಂತಿ ಅಂಗವಾಗಿ ಇಲ್ಲಿನ ಬಸವೇಶ್ವರ ವೃತ್ತ ಸೇರಿದಂತೆ, ಪಟ್ಟಣದ ಅಂದ ಹೆಚ್ಚಿಸುವ ನಿಟ್ಟಿನಲ್ಲಿ ಪುರಸಭೆ ಕಾರ್ಮಿಕರು ಕೆಲ ದಿನಗಳಿಂದ ನಿರಂತರವಾಗಿ ಶ್ರಮಿಸುತ್ತಿದ್ದಾರೆ. ವೃತ್ತದ ಸುತ್ತಲಿನ ಉದ್ಯಾನದಲ್ಲಿ ಒಣಗಿದ್ದ ಹುಲ್ಲು ಹಾಸಿಗೆಯನ್ನು ಸ್ವಚ್ಛ ಮಾಡಿ, ನೀರುಣಿಸುವ ಮೂಲಕ ಹಚ್ಚ ಹಸುರಾಗಿ ಕಂಗೊಳಿಸುವಂತೆ ಮಾಡಿದ್ದಾರೆ.

ತಹಶೀಲ್ದಾರ್‌ ಬಸವರಾಜ ಬೆಣ್ಣೆಶಿರೂರ, ಪುರಸಭೆ ಮುಖ್ಯಾಧಿಕಾರಿ ಕೆ.ಗುರಲಿಂಗಪ್ಪ ಬಸವೇಶ್ವರ ವೃತ್ತದ ಅಂದ ಹೆಚ್ಚಿಸುವುದು ಸೇರಿದಂತೆ, ಪಟ್ಟಣದ ಸ್ವಚ್ಛತೆಗೆ ಹೆಚ್ಚಿನ ಗಮನ ಹರಿಸಿದ್ದಾರೆ.

ADVERTISEMENT

ಕೂಡಲಸಂಗಮ ಅಭಿವೃದ್ಧಿ ಮಂಡಳಿಯ ಅಧಿಕಾರಿಗಳು ಬಸವ ಭಕ್ತರ ಸಭೆ ನಡೆಸಿ, ಬಸವ ಜಯಂತಿ ದಿನದಂದು ಬಸವೇಶ್ವರರ ತೊಟ್ಟಿಲೋತ್ಸವ ಸೇರಿದಂತೆ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳುವ ನಿಟ್ಟಿನಲ್ಲಿ ಸಿದ್ಧತೆಯನ್ನು ಪೂರ್ಣಗೊಳಿಸಿದ್ದಾರೆ.

ಇಲ್ಲಿನ ವಿರಕ್ತಮಠದಲ್ಲಿ ಸಿದ್ಧಲಿಂಗ ಸ್ವಾಮೀಜಿ ನೇತೃತ್ವದಲ್ಲಿ ಬಸವ ಜಯಂತಿ ಅಂಗವಾಗಿ ಏ.28ರಿಂದ ಪ್ರತಿ ದಿನ ಸಂಜೆ ವಚನ ಚಿಂತನ ಕಾರ್ಯಕ್ರಮ ಆಯೋಜಿಸುವ ಮೂಲಕ, ಶರಣರ ವಚನಗಳಲ್ಲಿರುವ ಮೌಲ್ಯಗಳನ್ನು ತಿಳಿಸಿಕೊಡುವ ಕಾರ್ಯದಲ್ಲಿ ಬಸವ ಭಕ್ತರು ಶ್ರದ್ಧಾ ಭಕ್ತಿಯಿಂದ ಪಾಲ್ಗೊಳ್ಳುತ್ತಿದ್ದಾರೆ.

ಬಸವ ಜಯಂತಿ ಮುನ್ನಾ ದಿನವಾದ ಮೇ 6ರ ಸೋಮವಾರ ಬಸವೇಶ್ವರ ದೇವಸ್ಥಾನದಲ್ಲಿ ಶಿವ ಭಜನೆ ನಡೆಯಲಿದೆ. ಮೇ 7ರ ಮಂಗಳವಾರ ಬೆಳಿಗ್ಗೆ ಷಟ್‌ಸ್ಥಳ ಧ್ವಜಾರೋಹಣ ಜರುಗುವುದು. ಬೆಳಿಗ್ಗೆ 10.-30ಕ್ಕೆ ಬಸವ ಜನ್ಮ ಸ್ಮಾರಕದಲ್ಲಿ ಬಸವೇಶ್ವರರ ತೊಟ್ಟಿಲೋತ್ಸವ ಹಾಗೂ ನಾಮಕರಣ ಕಾರ್ಯಕ್ರಮ ಶ್ರದ್ಧಾ ಭಕ್ತಿಯಿಂದ ನೆರವೇರುವುದು. ಸಂಜೆ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ವಿಶೇಷ ಉಪನ್ಯಾಸ ಹಾಗೂ ವಚನ ಸಂಗೀತೋತ್ಸವ ಜರುಗಲಿದೆ. ಇಡೀ ರಾತ್ರಿ ಬಸವೇಶ್ವರರ ಭಾವಚಿತ್ರದ ಮೆರವಣಿಗೆ ಹಾಗೂ ಪಲ್ಲಕ್ಕಿ ಉತ್ಸವ ಪಟ್ಟಣದ ಪ್ರಮುಖ ಬೀದಿಗಳಲ್ಲಿ ನಡೆಯಲಿದೆ.

ಬಸವೇಶ್ವರ ವೃತ್ತ, ಬಸವೇಶ್ವರ ದೇವಸ್ಥಾನ, ಬಸವ ಜನ್ಮ ಸ್ಮಾರಕಕ್ಕೆ ವಿದ್ಯುತ್ ದೀಪದ ಅಲಂಕಾರ ಮಾಡುವ ಮೂಲಕ ಬಸವ ಜಯಂತಿಯ ಮೆರುಗು ಹೆಚ್ಚಿಸುವ ಕೆಲಸ ನಡೆದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.