ADVERTISEMENT

ಬಸವನಬಾಗೇವಾಡಿ: ಶರಣರು, ಭಕ್ತರ ನಡುವೆ ಸಾಗಿದ ‘ಬಸವ ರಥ’ ಯಾತ್ರೆ

ಬಸವ ವಚನ ಗ್ರಂಥ ಹೊತ್ತ ಮಹಿಳೆಯರು; 770 ಬಸವ ಧ್ವಜ ಹಿಡಿದು ಹೆಜ್ಜೆ ಹಾಕಿದ ಶರಣರು

ಬಸವರಾಜ ಎಸ್.ಉಳ್ಳಾಗಡ್ಡಿ
Published 2 ಸೆಪ್ಟೆಂಬರ್ 2025, 4:23 IST
Last Updated 2 ಸೆಪ್ಟೆಂಬರ್ 2025, 4:23 IST
ಬಸವನಬಾಗೇವಾಡಿ ಪಟ್ಟಣದಲ್ಲಿ ಸೋಮವಾರ ಬಸವ ಸಂಸ್ಕೃತಿ ಅಭಿಯಾ‌ನದ ಅಂಗವಾಗಿ ಆರಂಭವಾದ ರಥಯಾತ್ರೆಗೆ ಸಚಿವ ಶಿವಾನಂದ ಪಾಟೀಲ ಚಾಲನೆ ನೀಡಿದರು
ಬಸವನಬಾಗೇವಾಡಿ ಪಟ್ಟಣದಲ್ಲಿ ಸೋಮವಾರ ಬಸವ ಸಂಸ್ಕೃತಿ ಅಭಿಯಾ‌ನದ ಅಂಗವಾಗಿ ಆರಂಭವಾದ ರಥಯಾತ್ರೆಗೆ ಸಚಿವ ಶಿವಾನಂದ ಪಾಟೀಲ ಚಾಲನೆ ನೀಡಿದರು   

ಬಸವನಬಾಗೇವಾಡಿ: ರಾಜ್ಯದಾದ್ಯಂತ ಒಂದು ತಿಂಗಳು ಸಂಚರಿಸಲ್ಲಿರುವ ಬಸವ ಸಂಸ್ಕೃತಿ ಅಭಿಯಾನದ ಬಸವರಥ ಯಾತ್ರೆಗೆ ಪಟ್ಟಣದ ಬಸವ ಜನ್ಮ‌ಸ್ಮಾರಕದ ಮುಂಭಾಗದಲ್ಲಿ ಬಸವ ಮೂರ್ತಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಸೋಮವಾರ ಅದ್ದೂರಿ ಚಾಲನೆ ನೀಡಲಾಯಿತು.

ಈ ರಥಯಾತ್ರೆಯಲ್ಲಿ 1100 ಸಂಖ್ಯೆಗೂ ಅಧಿಕ ಮಹಿಳೆಯರು ತಲೆ ಮೇಲೆ ಬಸವ ವಚನ ಗ್ರಂಥ ಹೊತ್ತು, 770 ಅಮರಗಣಂಗಳ ಬಿಂಬಿಸುವ 770 ಶರಣರು ಬಸವ ಧ್ವಜ ಹಿಡಿದು, ನೂರಾರು ಶರಣರು, ಬಸವಭಕ್ತರು ಮೆರವಣಿಗೆಯಲ್ಲಿ ಸಾಗಿದರು.

ಮೆರವಣಿಗೆಯಲ್ಲಿ ವೀರಗಾಸೆ ನೃತ್ಯ, ಹಾವೇರಿಯ ವೀರಗಾಸೆ ಕಲಾ ತಂಡ, ದೊಡ್ಡಾಟದ ಮುಖವಾಡ ಕಲಾತಂಡ, ಡೊಳ್ಳು ಮೇಳ, ಕರಡಿ ಮಜಲು, ನಂದಿಧ್ವಜ ಸೇರಿದಂತೆ ವಿವಿಧ ಜಾನಪದ, ಶಾಲಾಕಾಲೇಜು ವಿದ್ಯಾರ್ಥಿಗಳಿಂದ ಬಸವಾದಿ ಶರಣರ ವೇಷಭೂಷಣದ ಕಲಾ ತಂಡಗಳು ಭಾಗವಹಿಸಿದ್ದವು.

ADVERTISEMENT

ಬಸವ ಜನ್ಮ ಸ್ಮಾರಕದಿಂದ ಚಾಲನೆ ಪಡೆದ ಬಸವ ಸಂಸ್ಕೃತಿ ಅಭಿಯಾನದ ಬಸವರಥ ಪಟ್ಟಣದ ಸಂಗೊಳ್ಳಿ ರಾಯಣ್ಣ ವ್ರತ್ತ, ಅಂಬಿಗರ ಚೌಡಯ್ಯ ವ್ರತ್ತ, ಡಾ.ಬಿ.ಆರ್ ಅಂಬೇಡ್ಕರ್ ವ್ರತ್ತ, ಬಸವೇಶ್ವರ ವ್ರತ್ತದ ಮಾರ್ಗವಾಗಿ ಕಾರ್ಯಕ್ರಮದ ವೇದಿಕೆ ತಲುಪಿತು.

ಮೆರವಣಿಗೆಯಲ್ಲಿ ಕೂಡಲಸಂಗಮದ ಬಸವಜಯ ಮೃತ್ಯುಂಜಯ ಸ್ವಾಮೀಜಿ, ನಿಜಗುಣಾನಂದ ಸ್ವಾಮೀಜಿ, ವಿರಕ್ತಮಠದ ಸಿದ್ಧಲಿಂಗ ಶ್ರೀಗಳು, ಸಾಣೇಹಳ್ಳಿಯ ಪಂಡಿತಾರಾಧ್ಯ ಶ್ರೀಗಳು, ಭಾಲ್ಕಿ ಬಸವಲಿಂಗ ಪಟ್ಟದೇವರು, ತಂಗಡಗಿ ಅನ್ನದಾನೇಶ್ವರ ಶ್ರೀಗಳು, ಅಥಣಿ ಚನ್ನಬಸವ ಶ್ರೀಗಳು, ಮಸಬಿನಾಳದ ಸಿದ್ದರಾಮ ಶ್ರೀಗಳು, ಡಾ.ಎಸ್.ಎಂ.ಜಾಮದಾರ, ಸ್ವಾಗತ ಸಮಿತಿಯ ಪ್ರಧಾನ ಕಾರ್ಯದರ್ಶಿ ಈರಣ್ಣ ಪಟ್ಟಣಶೆಟ್ಟಿ, ಪುರಸಭೆ ಅಧ್ಯಕ್ಷೆ ಜಗದೇವಿ ಗುಂಡಳ್ಳಿ, ಮುಖಂಡರಾದ ಡಾ, ಬಸವರಾಜ ಕೋಟಿ, ರವಿಗೌಡ ಚಿಕ್ಕೊಂಡ, ಬಾಲಚಂದ್ರ ಮುಂಜಾನೆ, ಶಂಕರಗೌಡ ಬಿರಾದಾರ, ಶೇಖರ ಗೊಳಸಂಗಿ, ಬಸವರಾಜ ಹಾರಿವಾಳ, ಬಸವರಾಜ ಗೊಳಸಂಗಿ ಇದ್ದರು.

ಬಸವನ ಬಾಗೇವಾಡಿಯ ಬಸವ ಜನ್ಮ ಸ್ಮಾರಕದ ಮುಂಭಾಗದಿಂದ ಆರಂಭವಾದ ರಥಯಾತ್ರೆಯಲ್ಲಿ  ನಾಡಿನ ಶರಣರು ಬಸವಭಕ್ತರು ಜಾನಪದ ಕಲಾವಿದರು ಹೆಜ್ಜೆ ಹಾಕಿದರು  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.