ಬಸವನಬಾಗೇವಾಡಿ: ಪಟ್ಟಣದಲ್ಲಿ ಫೆ. 4 ರಂದು ಕ್ರಾಂತಿವೀರ ಬ್ರಿಗೇಡ್ ಉದ್ಘಾಟನೆ ಕಾರ್ಯಕ್ರಮದ ಜನಜಾಗೃತಿ ಮೂಡಿಸುವ ರಥಯಾತ್ರೆಗೆ ಸೋಮವಾರ ಬಸವೇಶ್ವರ ದೇವಸ್ಥಾನ ಮುಂಭಾಗ ಮಖನಾಪೂರದ ಸೋಮಲಿಂಗ ಮಹಾರಾಜರು, ಜಕ್ಕನೂರಿನ ಮಾದುಲಿಂಗ ಮಹಾರಾಜರು, ಅರಳಿಚಂಡಿಯ ಪರಮಾನಂದ ಮಹಾರಾಜರು, ವಿವಿಧ ಶ್ರೀಗಳು, ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಚಾಲನೆ ನೀಡಿದರು.
ಇದಕ್ಕೂ ಮೊದಲು ಪಟ್ಟಣದ ಆರಾಧ್ಯದೈವ ಮೂಲನಂದೀಶ್ವರ ದೇವರಿಗೆ ಕ್ರಾಂತಿವೀರ ಬ್ರಿಗೇಡ್ ಸಂಸ್ಥಾಪಕ ಕೆ.ಎಸ್.ಈಶ್ವರಪ್ಪ ವಿವಿಧ ಶ್ರೀಗಳೊಂದಿಗೆ ಪೂಜೆ, ಮಂಗಳಾರತಿ ನೆರವೇರಿಸಿದರು. ನಂತರ ಬಸವೇಶ್ವರ ವೃತ್ತದಲ್ಲಿರುವ ಬಸವೇಶ್ವರ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು.
ಕೆ.ಎಸ್.ಈಶ್ವರಪ್ಪ ಸುದ್ದಿಗಾರರೊಂದಿಗೆ ಮಾತನಾಡಿ, ‘ಈ ಸಂಘಟನೆಯು ಜಾತ್ಯತೀತ, ಪಕ್ಷಾತೀತವಾಗಿದೆ. ಕಾರ್ಯಕ್ರಮದ ಮೆರವಣಿಗೆಯಲ್ಲಿ 1008 ಮಹಿಳೆಯರು ಕುಂಭ ಹೊತ್ತು ಭಾಗವಹಿಸಲಿದ್ದಾರೆ. 1008 ಕ್ಕೂ ಹೆಚ್ಚಿನ ಡೊಳ್ಳು ಕಲಾವಿದರು, ವಿವಿಧ ಜನಪದ ಕಲಾ ತಂಡಗಳು ಮೆರವಣಿಗೆಯಲ್ಲಿ ಭಾಗವಹಿಸಲಿವೆ. ವಿವಿಧ ಶ್ರೀಗಳು ಪಾಲ್ಗೊಳ್ಳಲಿದ್ದಾರೆ’ ಎಂದು ತಿಳಿಸಿದರು.
ಜ.26 ರವರೆಗೆ ರಥಯಾತ್ರೆ: ಕಾರ್ಯಕ್ರಮದ ಜನಜಾಗೃತಿ ಮೂಡಿಸುವ ಉದ್ದೇಶದಿಂದ ಅಖಂಡ ಬಸವನಬಾಗೇವಾಡಿ ತಾಲ್ಲೂಕಿನ ಎಲ್ಲ ಗ್ರಾಮಗಳಲ್ಲಿ ಭವ್ಯ ರಥ ಯಾತ್ರೆ ಜ.26 ರವರೆಗೆ ಸಂಚರಿಸಲಿದೆ. ಇವಣಗಿ, ಹಂಚಿನಾಳ, ನರಸಲಗಿ, ಕಣಕಾಲ, ಹೆಬ್ಬಾಳ ಗ್ರಾಮಗಳಲ್ಲಿ ರಥಯಾತ್ರೆಯು ಸಂಚರಿಸಿ ಜನ ಜಾಗೃತಿ ಮೂಡಿಸಿತು.
ಹಳಿಂಗಳಿಯ ಅಲ್ಲಮಪ್ರಭು ಪೀಠದ ಮಹಾವೀರ ಪ್ರಭು, ಭತಗುಣಕಿಯ ರೇವಣಸಿದ್ದ ಮಹಾರಾಜರು, ಗದಗಿನ ಶಿವಕುಮಾರ ಸ್ವಾಮೀಜಿ, ಕ್ರಾಂತಿವೀರ ಬ್ರಿಗೇಡ್ ರಾಜ್ಯಾಧ್ಯಕ್ಷ ಬಸವರಾಜ ಬಾಳಿಕಾಯಿ, ರಾಜ್ಯ ಕಾರ್ಯದರ್ಶಿ ಅಶೋಕ ಒಡೆಯರ, ರಾಜಶೇಖರ ಯರನಾಳ, ಮುದಕಣ್ಣ ಹೊರ್ತಿ,ಸಿದ್ದಣ್ಣ ಹೆರಕಲ್ಲ, ಬಸವರಾಜ ಬಿಜಾಪುರ, ಶಿಲ್ಪಾ ಕುದರಗೊಂಡ, ಗೀತಾ ಮಾಡಗಿ, ಇತರರು ಇದ್ದರು.
Cut-off box - ‘ಹಿಂದು ಧರ್ಮ ರಕ್ಷಣೆ ಬಯಸುವವರಿಗೆ ಸ್ವಾಗತ’ ‘ಹಿಂದು ಧರ್ಮ ದೇಶದ ರಕ್ಷಣೆ ಎಲ್ಲ ಜನರಿಗೂ ನ್ಯಾಯ ಕೊಡಿಸುವ ಹಿತ ಬಯಸುವವರು ಯಾರೇ ಆಗಲಿ ಈ ಸಂಘಟನೆಯಲ್ಲಿ ತೊಡಗಿಕೊಳ್ಳಲು ಮುಕ್ತವಾಗಿ ಸ್ವಾಗತವಿದೆ. ಇದುವರೆಗೂ ನಾವು ಯಾವುದೇ ಪಕ್ಷದ ಮುಖಂಡರಿಗೆ ಆಹ್ವಾನ ನೀಡಿಲ್ಲ. ಯಾವುದೇ ಪಕ್ಷದವರು ದೇಶ ಹಿಂದು ಧರ್ಮದ ರಕ್ಷಣೆ ಬಯಸುವವರು ಇದರಲ್ಲಿ ಭಾಗವಹಿಸಬಹುದು’ ಎಂದು ಕೆ.ಎಸ್.ಈಶ್ವರಪ್ಪ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.