
ಬಸವನಬಾಗೇವಾಡಿ: ತಾಲ್ಲೂಕಿನ ಮನಗೂಳಿಯ ಪ್ರಗತಿಪರ ರೈತ ಅದಿಲ್‌ಷಾ ಮಕಾನದಾರ ಪರಿವಾರದವರು ದ್ರಾಕ್ಷಿ ಕೃಷಿಯಿಂದ ವಿಮುಖರಾಗಿ ಪರಿಸರಸ್ನೇಹಿ ಹನಿ ನೀರಾವರಿ, ಮರಗಡ್ಡಿ (ಮಲ್ಬರಿ ಪ್ಲಾಂಟೇಶನ್) ಪದ್ಧತಿಯಲ್ಲಿ ರೇಷ್ಮೆ ಕೃಷಿ ಅಳವಡಿಸಿಕೊಂಡು ಕನಿಷ್ಠ ಹೂಡಿಕೆಯಲ್ಲಿ ಪ್ರತಿ ಬೆಳೆಯಲ್ಲಿ ಹೆಚ್ಚಿನ ಆದಾಯ ಗಳಿಸುತ್ತಿದ್ದಾರೆ.
ಮನಗೂಳಿಯ ಅದಿಲ್‌ಷಾ ಮಕಾನದಾರ ಅವರು ಕಳೆದ ಐದು ವರ್ಷಗಳಿಂದ ರೇಷ್ಮೆ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಮೊದಮೊದಲು ಸಾಂಪ್ರಾದಾಯಿಕವಾಗಿ 6x3 ಅಳತೆಯಲ್ಲಿ ಹಿಪ್ಪು ನೇರಳೆ ಬೆಳೆಯುತ್ತಿದ್ದ ಅವರು ಸದ್ಯ ಮೂರು ವರ್ಷಗಳಿಂದ ರೇಷ್ಮೆ ಇಲಾಖೆಯಿಂದ ಸಿಗುವ ಎಲ್ಲಾ ಆರ್ಥಿಕ ಸೌಲಭ್ಯ ಬಳಸಿಕೊಂಡು ಸುಮಾರು ಎರಡೂವರೆ ಎಕರೆ ಪ್ರದೇಶದಲ್ಲಿ ಹನಿ ನೀರಾವರಿ ಪದ್ದತಿ ಅಳವಡಿಸಿಕೊಂಡಿದ್ದಾರೆ.
ಸುಲಭ ನಿರ್ವಹಣೆ, ಕಡಿಮೆ ನೀರು, ಗಿಡಗಳಿಗೆ ಉತ್ತಮ ಗಾಳಿ, ಬಿಸಿಲು, ಪೋಷಕಾಂಶಗಳಿಂದ ಗುಣಮಟ್ಟದ ಸೊಪ್ಪು ಬೆಳೆದು ಅಧಿಕ ಇಳುವರಿ ತಂದುಕೊಡುವ ಪರಿಸರಸ್ನೇಹಿ ಮರಗಡ್ಡಿ ಪದ್ದತಿಯಲ್ಲಿ ಸಾಲಿನಿಂದ ಸಾಲಿಗೆ 10 ಅಡಿ, ಅಗಿಯಿಂದ ಅಗಿಗೆ 5 ಅಡಿ ಅಂತರದಲ್ಲಿ ಹಿಪ್ಪುನೇರಳೆ ಬೆಳೆದಿದ್ದಾರೆ. ಅಲ್ಲದೇ ಇಲಾಖೆಯ 3.5 ಲಕ್ಷ ಸಹಾಯಧನದ ಜೊತೆಗೆ ಕೈಯಿಂದಲೂ ಸುಮಾರು ಏಳೆಂಟು ಲಕ್ಷ ವೆಚ್ಚ ಮಾಡಿ ಸುಧಾರಿತ, 24 ಅಡಿ ಅಗಲ, 14ಅಡಿ ಎತ್ತರ ಹಾಗೂ 80 ಅಡಿ ಉದ್ದದ (1,920 ಚದುರಡಿ) ವಿಸ್ತಾರವಾದ ರೇಷ್ಮೆ ಹುಳು ಸಾಕಾಣಿಕೆ ಮನೆ ನಿರ್ಮಿಸಿಕೊಂಡಿದ್ದಾರೆ.
ಹಿಪ್ಪುನೇರಳೆ ಕಟಾವು ಮಾಡಿದ 45 ದಿನಕ್ಕೆ ಸೊಪ್ಪು ಬರುತ್ತದೆ. ಬಳಿಕ ಸ್ಥಳೀಯವಾಗಿ ರೇಷ್ಮೆ ಮರಿಗಳನ್ನು ತಂದು 22 ದಿನಗಳಲ್ಲಿ ಗೂಡು ತಯಾರಿಸಿ ಮಾರಾಟ ಮಾಡುತ್ತಾರೆ. ಹುಳು ಸಾಕಾಣಿಕೆ ಮನೆಯಲ್ಲಿ ವೈಜ್ಞಾನಿಕ ಹಾಗೂ ತಾಂತ್ರಿಕ ಸಾಕಾಣಿಕೆ ಕ್ರಮಗಳಿಂದ ಎಲ್ಲಾ ಕಾಲಕ್ಕೂ ಹೊಂದಿಕೊಳ್ಳುವಂತೆ ಉತ್ತಮ ಗುಣಮಟ್ಟದ ದ್ವಿ ತಳಿ ರೇಷ್ಮೆಗೂಡನ್ನು ಬೆಳೆದು ದೂರದ ಅತ್ಯುತ್ತಮ ದರ ಸಿಗುವ ರಾಮನಗರ ಮಾರುಕಟ್ಟೆಯಲ್ಲಿ ಮಾರಾಟ ಮಾಡಿಕೊಂಡು ಬಂದಿದ್ದಾರೆ.
"ರೇಷ್ಮೆ ಕೃಷಿಯಲ್ಲಿ ನಮ್ಮ ಇಡೀ ಕುಟುಂಬ ತೊಡಗಿದೆ. ಇದರಿಂದ ಖರ್ಚು ಬಹಳಷ್ಟು ಕಡಿಮೆಯಾಗಿ ಗರಿಷ್ಠ ಆದಾಯ ಪಡೆಯುತ್ತಿದ್ದೇವೆ. ಪ್ರತಿ ಬೆಳೆಗೂ ಕನಿಷ್ಠ 400-450 ರೇಷ್ಮೆ ಮರಿಗಳನ್ನು ತಂದು ಸುಮಾರು 400-420 ಕೆ.ಜಿ ರೇಷ್ಮೆ ಗೂಡುಗಳನ್ನು ಬೆಳೆಯುತ್ತೇವೆ. ಇದರಿಂದ ಪ್ರತಿ ಬೆಳೆಗೆ ₹2.80-₹3 ಲಕ್ಷದವರೆಗೂ ಆದಾಯ ಪಡೆಯುತ್ತಿದ್ದೇವೆ. ಹೀಗೆ ವರ್ಷಕ್ಕೆ ಐದು ಬೆಳೆ ಬೆಳೆದು ಉತ್ತಮ ಆರ್ಥಿಕ ಲಾಭ ಗಳಿಸುತ್ತಿದ್ದೇವೆ. ಜೊತೆಗೆ ಇಲಾಖೆಯಿಂದ ಆರಂಭದಿಂದ ಇಲ್ಲಿವರೆಗೂ ನಿರಂತರ ಸಹಾಯಧನ ಪಡೆಯುತ್ತಿದ್ದೇವೆ. ರೈತರು ಹೆಚ್ಚಾಗಿ ಸುಲಭ, ಪರಿಸರಸ್ನೇಹಿ ಹಾಗೂ ಅಧಿಕ ಲಾಭ ತಂದುಕೊಡುವ ರೇಷ್ಮೆ ಕೃಷಿ ಮೂಲಕ ಆರ್ಥಿಕವಾಗಿ ಸದೃಢರಾಗಬಹುದು" ಎಂದು 'ಪ್ರಜಾವಾಣಿ' ಗೆ ತಮ್ಮ ಅನುಭವ ಹಂಚಿಕೊಂಡರು.
ರೇಷ್ಮೆ ಕೃಷಿ ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಅದಿಲ್‌ಷಾ ಮಕಾನದಾರ (mob : 9902572534), ಸುರೇಶ ಗೊಳಗೊಂಡ, ರೇಷ್ಮೆ ವಿಸ್ತರಣಾಧಿಕಾರಿ (mob : 9901092886) ಸಂಪರ್ಕಿಸಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.