ADVERTISEMENT

ಬಸವನಬಾಗೇವಾಡಿ: ನಗರದ ಉದ್ಯಾನಕ್ಕೆ ಬೇಕಿದೆ ಅಭಿವೃದ್ಧಿ ಸ್ಪರ್ಶ

ಹಸಿರೀಕರಣಕ್ಕೆ ಬೇಕಿದೆ ಇಚ್ಛಾಶಕ್ತಿ: ಮೂಲಸೌಕರ್ಯ ಕೊರತೆಯಿಂದ ಹಾಳು

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2025, 5:28 IST
Last Updated 3 ಮಾರ್ಚ್ 2025, 5:28 IST
   

ಬಸವನಬಾಗೇವಾಡಿ: ಬೇಸಿಗೆಯ ಬಿಸಿಲಿನ ತಾಪ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಜನರು ತಂಪು ಪಾನೀಯ ಸೇರಿದಂತೆ ಕುಳಿತುಕೊಳ್ಳಲು ನೆರಳಿರುವ ಸ್ಥಳಗಳಿಗೆ ಮೊರೆ ಹೋಗುತ್ತಿದ್ದಾರೆ. ಪಟ್ಟಣದ ವಿವಿಧೆಡೆ ಇರುವ ಉದ್ಯಾನಗಳು ಬೇಸಿಗೆಯಲ್ಲಿ ಜನರಿಗೆ ಪೂರಕವಾಗಲಿವೆ.

ಈ ನಿಟ್ಟಿನಲ್ಲಿ ಉದ್ಯಾನ ಇನ್ನಷ್ಟು ಅಭಿವೃದ್ಧಿಯಾಗಬೇಕಿದೆ. ಹೊಸ ಬಡಾ ವಣೆಗಳಲ್ಲಿಯೂ ಉದ್ಯಾನ ನಿರ್ಮಾಣದ ಅಗತ್ಯ ಇದೆ. ಮಕ್ಕಳು ವಾರ್ಷಿಕ ಪರೀಕ್ಷೆ ನಂತರ ಬೇಸಿಗೆ ರಜೆ ಕಳೆಯಲು ವಿವಿಧ ಆಟಗಳಲ್ಲಿ ತೊಡಗಬೇಕು ಎಂದರೆ ಅವರಿಗೆ ಉದ್ಯಾನ ಸೂಕ್ತ ಸ್ಥಳಗಳಾಗಿವೆ. ವಯೋವೃದ್ಧರು ಸೇರಿದಂತೆ ಜನರು ವಾಯು ವಿಹಾರಕ್ಕೆ ಉದ್ಯಾನಗಳಿಗೆ ತೆರಳುತ್ತಾರೆ.

ಪಟ್ಟಣದ ವಿಜಯಪುರ ರಸ್ತೆಯಲ್ಲಿನ ವೀರಭದ್ರೇಶ್ವರ ನಗರದಲ್ಲಿ ಎರಡು ಉದ್ಯಾನ ಸೇರಿದಂತೆ ವಿವಿಧೆಡೆ ಉದ್ಯಾನಗಳಿಗೆ ಕಾಂಪೌಂಡ್‌, ಉದ್ಯಾನದ ಸುತ್ತಲು ಗಿಡಗಳು, ಕುಳಿತು ಕೊಳ್ಳಲು ಆಸನ, ರಂಗ ಮಂದಿರ ಗಳಿವೆ. ಉದ್ಯಾನಗಳಲ್ಲಿ ಜಾರು ಬಂಡಿ, ಜೋಕಾಲಿ ಸೇರಿದಂತೆ ಮಕ್ಕಳ ಆಟಿಕೆಗಾಗಿ ವಿವಿಧ ಪರಿಕರ ಹಾಕ ಲಾಗಿದೆ. ಅದರಲ್ಲೂ ವೀರಭದ್ರೇಶ್ವರ ನಗರದ ಎರಡು ಉದ್ಯಾನಗಳಲ್ಲಿ ಹೆಚ್ಚು ಪರಿಕರಗಳಿರುವುದರಿಂದ ಪ್ರತಿ ದಿನ ಸಂಜೆ ಮಕ್ಕಳು ಆಟವಾಡಲು ಉದ್ಯಾನಗಳಿಗೆ ಬರುತಿದ್ದಾರೆ. ಹಿರಿಯರು ಬೆಳಿಗ್ಗೆ ಸಂಜೆ ವಾಯು ವಿಹಾರ ಮಾಡು ತ್ತಿದ್ದಾರೆ. ಉದ್ಯಾನಗಳನ್ನು ಇನ್ನಷ್ಟು ಆಕರ್ಷಣೀಯವಾಗಿ ಮಾಡಲು ಇಚ್ಛಾಶಕ್ತಿ ಬೇಕಿದೆ. ಉದ್ಯಾನಗಳಲ್ಲಿ ಕಸಕಡ್ಡಿ ಬೆಳೆಯದಂತೆ ಪುರಸಭೆ ಕಾರ್ಮಿಕರು ಮೇಲಿಂದ ಮೇಲೆ ಸ್ವಚ್ಛಗೊಳಿಸುವ ಕಾರ್ಯ ಮಾಡುತ್ತಿದ್ದಾರೆ.

ADVERTISEMENT

ಆದರೆ ಹುಲ್ಲಿನ ನೆಲಹಾಸು ಹಾಗೂ ಇನ್ನಷ್ಟು ಸಸಿಗಳನ್ನು ಬೆಳೆಸುವ ಮೂಲಕ ಉದ್ಯಾನ ಸದಾ ಹಸಿರಾಗಿ ಕಾಣುವಂತಾಗಬೇಕು. ಉಳಿದ ಉದ್ಯಾನಗಳಲ್ಲೂ ಮಕ್ಕಳ ಆಟಿಕೆಯ ವಿವಿಧ ಪರಿಕರಗಳನ್ನು ಅಳವಡಿಸುವುದು ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಗಳ ಮೂಲಕ ಮಕ್ಕಳು ಹಾಗೂ ಸಾರ್ವಜನಿಕರನ್ನು ಉದ್ಯಾನದತ್ತ ಆಕರ್ಷಿಸುವಂತಾಗಬೇಕು ವಾಯು ವಿಹಾರಕ್ಕೆ ತೆರಳುವ ಪಟ್ಟಣದ ಕೆಲ ಹಿರಿಯರು ಅಭಿಪ್ರಾಯಪಟ್ಟರು.

ಅನೇಕ ಬಡಾವಣೆಗಳಲ್ಲಿ ಪುರಸಭೆ ವತಿಯಿಂದ ಉದ್ಯಾನವನಗಳ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾ ಗಿದೆ. ಪುರಸಭೆ ಸೇರಿದಂತೆ ಪರಿಸರ ಪ್ರೇಮಿಗಳು ಸಸಿಗಳನ್ನು ತಂದು ನೆಟ್ಟಿದ್ದರಿಂದ ಈಗ ಅದೇ ಸಸಿಗಳು ದೊಡ್ಡ ಮರಗಳಾಗಿವೆ. ಕೆಲ ಉದ್ಯಾನ ಗಳಿಗೆ ಸರಿಯಾದ ಕಂಪೌಂಡ ಗೋಡೆಗಳಿಲ್ಲದೆ ಉದ್ಯಾನವನದಲ್ಲಿ ಅಳವಡಿಸಿದ ವಸ್ತುಗಳು ಹಾಳಾಗುತ್ತಿವೆ. ಉದ್ಯಾನಗಳಲ್ಲಿ ದನಗಳು ಹಂದಿಗಳು ಬರುತ್ತಿವೆ. ಇದರಿಂದಾಗಿ ಸಾರ್ವಜನಿಕರಿಗೆ ಮಕ್ಕಳಿಗೆ ತೊಂದರೆ ಯಾಗುತ್ತಿದೆ.ಪಟ್ಟಣದ ತೆಲಗಿ ರಸ್ತೆ ಸೇರಿದಂತೆ ವಿವಿಧೆಡೆಯ ಹೊಸ ಬಡಾವಣೆಗಳಲ್ಲಿ ಉದ್ಯಾನಕ್ಕಾಗಿ ಮೀಸಲಿಟ್ಟ ಜಾಗವನ್ನು  ಅಭಿವೃದ್ಧಿ ಪಡಿಸಿ ವಾಯು ವಿಹಾರಿಗಳಿಗೆ ಅನುಕೂಲ ಕಲ್ಪಿಸುವುದರೊಂದಿಗೆ ಮಕ್ಕಳ ಉತ್ಸಾಹ ಇಮ್ಮಡಿಗೊಳಿಸಬೇಕಿದೆ ಎಂದು ಡಿ.ಎಸ್.ಎಸ್ ಮುಖಂಡ ಅರವಿಂದ ಸಾಲವಾಡಗಿ ಅಭಿಪ್ರಾಯ ಪಟ್ಟರು.

ನಾಗರಿಕರ ಸಮಿತಿ ರಚಿಸಿ

ಉದ್ಯಾನಗಳಲ್ಲಿ ಸರಿಯಾದ ಬೆಳಕಿನ (ಲೈಟಿನ) ವ್ಯವಸ್ಥೆ ಮಾಡಬೇಕು. ಉದ್ಯಾನ ಸಂರಕ್ಷಣೆಗೆ ಸಿಬ್ಬಂದಿ ನೇಮಕ ಮಾಡಬೇಕು. ವ್ಯಾಯಾಮ ಮಾಡಲು ಅನುಕೂಲವಾಗುವ ದೃಷ್ಟಿಯಲ್ಲಿ ಅಭಿವೃದ್ಧಿ ಪಡಿಸಬೇಕು. ಉದ್ಯಾನಗಳ ಸಂರಕ್ಷಣೆಗೆ ಆಯಾ ಬಡಾವಣೆಯಲ್ಲಿ ಸಲಹಾ ಸಮಿತಿ ರಚಿಸುವಂತಾಗಬೇಕು ಎಂದು ರಾಷ್ಟ್ರೀಯ ಬಸವಸೈನ್ಯ ಸಂಸ್ಥಾಪಕ ಅಧ್ಯಕ್ಷ ಶಂಕರಗೌಡ ಬಿರಾದಾರ ಅಭಿಪ್ರಾಯ ಪಟ್ಟರು.

ನೀರಿನ ವ್ಯವಸ್ಥೆ ಮಾಡಿ

ಪಟ್ಟಣದ ವೀರಭದ್ರೇಶ್ವರ ನಗರದ ಉದ್ಯಾನ ಅತ್ಯಂತ ದೊಡ್ಡದಾಗಿದೆ. ಸುತ್ತಲೂ ಗಿಡಗಳು ಬೆಳೆದು ನಿಂತಿವೆ. ಈಚೆಗೆ ಪುರಸಭೆ ಸಾಕಷ್ಟು ಅಭಿವೃದ್ಧಿ ಪಡಿಸುತ್ತಿದೆ. ಬೇಸಿಗೆ ಬಂದಿದ್ದರಿಂದ ಉದ್ಯಾನಗಲ್ಲಿನ ಗಿಡಗಳಿಗೆ ನೀರಿನ ವ್ಯವಸ್ಥೆ. ಜನರಿಗೆ ಕುಡಿಯವ ನೀರಿನ ವ್ಯವಸ್ಥೆ. ಹುಲ್ಲು ಬೆಳೆಸುವುದು, ಈಗಿರುವ ಹೈಮಾಸ್ಕ್ ವಿದ್ಯುತ್ ಕಂಬದೊಂದಿಗೆ ಇನ್ನೊಂದು ಹೈಮಾಸ್ಕ್ ಅಳವಡಿಸುವ ಮೂಲಕ ಉದ್ಯಾನದ ಮೆರಗು ಹೆಚ್ಚಿಸುವ ಅಗತ್ಯತೆ ಇದೆ ಎಂದು ಬಡಾವಣೆ ನಿವಾಸಿ ಶ್ರೀಶೈಲ ಕೋಲಕಾರ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.