ಆಲಮೇಲ:ಬಯಲಾಟ ಅಕಾಡೆಮಿ ಹೊಸದಾಗಿ ಅಸ್ತಿತ್ವಕ್ಕೆ ಬಂದಿದೆ. ಈಗಷ್ಟೇ ಅಂಬೆಗಾಲಿಡುತ್ತಿದೆ. ಹಲ ಸವಾಲುಗಳನ್ನು ಎದುರಿಸಬೇಕಿದೆ. ಯಕ್ಷಗಾನದ ಮಾದರಿಯಲ್ಲೇ ಅಂತರರಾಷ್ಟ್ರೀಯ ಮನ್ನಣೆ ಪಡೆಯಬೇಕಿದೆ.
ಪ್ರೊ.ಬರಗೂರು ರಾಮಚಂದ್ರಪ್ಪ ನೇತೃತ್ವದ ಸಾಂಸ್ಕೃತಿಕ ನೀತಿ ನಿರೂಪಣೆಯ ಸಮಿತಿ ಪ್ರಸ್ತಾವದಂತೆ ರಚನೆಯಾದ ಈ ಅಕಾಡೆಮಿ ಬಾಗಲಕೋಟೆಯಲ್ಲಿ ಕೇಂದ್ರ ಕಚೇರಿ ಹೊಂದಿದೆ.
ಪ್ರಥಮ ಅಧ್ಯಕ್ಷರಾಗಿ ಡಾ.ಶ್ರೀರಾಮ ಇಟ್ಟಣನವರ ನೇಮಕಗೊಂಡಿದ್ದು, ಈಚೆಗೆ ದೇವಣಗಾಂವ ಗ್ರಾಮಕ್ಕೆ ಬಂದಿದ್ದ ಸಂದರ್ಭ ‘ಪ್ರಜಾವಾಣಿ’ ಜತೆ ಅಕಾಡೆಮಿಯ ಕುರಿತಂತೆ ಹಲ ಮಾಹಿತಿ ಹಂಚಿಕೊಂಡರು.
* ಅಕಾಡೆಮಿ ಕುರಿತಂತೆ ?
ಈ ವರ್ಷ ಅಸ್ತಿತ್ವಕ್ಕೆ ಬಂದಿದೆ. ಬರಗೂರು ಸಮಿತಿಯ ಪ್ರಸ್ತಾವನೆಯಂತೆ ರಾಜ್ಯ ಸರ್ಕಾರ ಅಕಾಡೆಮಿ ಆರಂಭಿಸಿದೆ. ಈ ಹಿಂದಿನ ಸರ್ಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವೆ ಉಮಾಶ್ರೀ ಮುತುವರ್ಜಿಯಿಂದ ಬಾಗಲಕೋಟೆಯಲ್ಲಿ ಕೇಂದ್ರ ಕಚೇರಿ ಹೊಂದಿದ್ದು, ಉತ್ತರ ಕರ್ನಾಟಕದ ಹೆಮ್ಮೆಯಾಗಿದೆ.
* ಮೊದಲ ಅಧ್ಯಕ್ಷರಾಗಿ ಯಾವ ರೀತಿ ಮುನ್ನಡೆಸುತ್ತೀರಿ ?
ಬಯಲಾಟದ ಬಗೆಗಿನ ನನ್ನ ಕಾಳಜಿಯೇ ಈ ಅಕಾಡೆಮಿಯನ್ನು ಮುನ್ನಡೆಸುತ್ತದೆ ಎಂಬ ಭಾವ ನನ್ನದು. ಬಯಲಾಟಗಳ ಪ್ರಯೋಗ, ಸಂವಾದಗಳ ಮೂಲಕ ವಿದ್ಯಾರ್ಥಿಗಳಲ್ಲಿ ಈ ಕುರಿತು ಆಸಕ್ತಿ ಮೂಡಿಸುವುದು. ಬಯಲಾಟಗಳ ಹಸ್ತಪ್ರತಿಗಳ ಸಂಗ್ರಹ, ಸಂರಕ್ಷಣೆ, ಮುದ್ರಿಸುವುದು, ಕಲಾ ಶಿಬಿರಗಳು, ಬಯಲಾಟ ಕಮ್ಮಟಗಳು, ಬಯಲಾಟ ಸಂಭ್ರಮ, ದಾಖಲೀಕರಣ, ಹಿರಿಯ ಕಲಾವಿದ, ವಿದ್ವಾಂಸರಿಗೆ ಪ್ರಶಸ್ತಿ ಮೊದಲಾದ ಯೋಜನೆಗಳು ಮುಂದಿವೆ. ಬಯಲಾಟದ ಉದಾತ್ತೀಕರಣ, ಗುಣಮಟ್ಟ ಹೆಚ್ಚಿಸುವ ನೆಲೆಯಲ್ಲಿ ಯೋಜನೆ ಸಿದ್ಧವಾಗಿದೆ.
* ಅಕಾಡೆಮಿಗಳು ಗಂಜಿ ಕೇಂದ್ರಗಳೇ ?
ಹಾಗೇನಿಲ್ಲ. ಎಲ್ಲ ಅಕಾಡೆಮಿಗಳು ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಅಗಾಧ ಸೇವೆ ಮಾಡುತ್ತಿವೆ, ಇಲ್ಲಿ ಲಾಭದ ಮನೋಭಾವವಿರಲ್ಲ.
* ನಿಮ್ಮ ಆದ್ಯತೆ ಯಾವುದಕ್ಕೆ ?
ಜಾನಪದ ನನ್ನ ಕ್ಷೇತ್ರ. ಬಾಲ್ಯದಿಂದಲೇ ಬಯಲಾಟ, ಸಣ್ಣಾಟ, ಲಾವಣಿ ಮೊದಲಾದವುಗಳಲ್ಲಿ ನನ್ನ ಆಸಕ್ತಿ. ಎಂ.ಎಂ.ಕಲಬುರ್ಗಿ ಮಾರ್ಗದರ್ಶನದಲ್ಲಿ ಪಿಎಚ್.ಡಿಗಾಗಿ ಶ್ರೀಕೃಷ್ಣ ಪಾರಿಜಾತ ಬಯಲಾಟ ಅಧ್ಯಯನ ಕುರಿತು ಸಂಶೋಧನೆ ಮಾಡಿದೆ. ಈ ಮೂಲಕ ಜಾನಪದ ಬಯಲಾಟ ಕ್ಷೇತ್ರ ಪ್ರವೇಶಿಸಿದೆ.
* ಅಕಾಡೆಮಿ ಕಚೇರಿ ಕುರಿತಂತೆ ?
ಬಾಗಲಕೋಟೆಯಲ್ಲಿ ಕೇಂದ್ರ ಕಚೇರಿಯಿದೆ. ಸದ್ಯಕ್ಕೆ ಒಬ್ಬರು ರಿಜಿಸ್ಟ್ರಾರ್, ಮೂವರು ಸಿಬ್ಬಂದಿ ಇದ್ದಾರೆ. 15 ಸದಸ್ಯರಿದ್ದಾರೆ. ಎಲ್ಲರೂ ಸೇರಿ ಕೆಲಸ ಮಾಡುತ್ತೇವೆ. ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಪೂರ್ಣ ಪ್ರಮಾಣದಲ್ಲಿ ಕೆಲಸ ನಡೆದಿದೆ. ಆಗಸ್ಟ್‌ನಲ್ಲಿ ವಿದ್ವಾಂಸರ ಸಭೆ ನಡೆಸಿದ್ದೇವೆ. ಚಿಂತನ–ಮಂಥನ ನಡೆದಿದೆ. ಮಾರ್ಗದರ್ಶನದಂತೆ ಕೆಲಸವೂ ಆರಂಭವಾಗಿದೆ.
* ಪ್ರತ್ಯೇಕ ಅಕಾಡೆಮಿ ಬೇಕಿತ್ತೇ ?
ಬಹಳ ಅವಶ್ಯಕತೆಯಿತ್ತು. ಜಾನಪದದಲ್ಲಿ ಬಯಲಾಟ ದೊಡ್ಡ ವಿಭಾಗ. ಇಲ್ಲಿ ಸಣ್ಣಾಟ, ರಾಧಾನಾಟ ಮೊದಲಾದವುಗಳು ಒಳಗೊಳ್ಳುತ್ತವೆ. ಪ್ರೊ.ಬರಗೂರ ಸಲಹೆಯಂತೆ ಈ ಅಕಾಡೆಮಿ ರಚನೆಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.