ADVERTISEMENT

ಮುದ್ದೇಬಿಹಾಳ | ಹಳ್ಳಿ ಮಹಿಳೆ ಬದುಕಿಗೆ ಆಸರೆಯಾದ ಬೆರಣಿ

ಬೆರಣಿ ಮಾರಿ ಚಿನ್ನ, ಹೊಲ ಖರೀದಿಸಿದ ಕುಟುಂಬ

​ಪ್ರಜಾವಾಣಿ ವಾರ್ತೆ
Published 27 ಏಪ್ರಿಲ್ 2024, 5:45 IST
Last Updated 27 ಏಪ್ರಿಲ್ 2024, 5:45 IST
ಮುದ್ದೇಬಿಹಾಳ ತಾಲ್ಲೂಕಿನ ಆರೇಮುರಾಳದ ಸಾವಿತ್ರಿ ರಮೇಶ ವಗ್ಗರ ಅವರು ತಯಾರಿಸಿದ ಬೆರಣಿ ಜೋಡಿಸಿ ಇಡುತ್ತಿರುವುದು
ಮುದ್ದೇಬಿಹಾಳ ತಾಲ್ಲೂಕಿನ ಆರೇಮುರಾಳದ ಸಾವಿತ್ರಿ ರಮೇಶ ವಗ್ಗರ ಅವರು ತಯಾರಿಸಿದ ಬೆರಣಿ ಜೋಡಿಸಿ ಇಡುತ್ತಿರುವುದು   

ಮುದ್ದೇಬಿಹಾಳ: ತಾಲ್ಲೂಕಿನ ಆರೇಮುರಾಳ ಗ್ರಾಮದ ರೈತ ಮಹಿಳೆ ಸಾವಿತ್ರಿ ರಮೇಶ ವಗ್ಗರ 15 ವರ್ಷಗಳಿಂದ ಬೆರಣಿ ತಟ್ಟಿ, ಮಾರುವ ಕಾಯಕದಲ್ಲಿ ತೊಡಗಿದ್ದಾರೆ. ಇದು ಸ್ವಾವಲಂಬಿ ಬದುಕಿಗೆ ಆಸರೆಯಾಗಿದೆ. 

ಸಾವಿತ್ರಿ ವಗ್ಗರ ಅವರದ್ದು ಕೃಷಿ ಹಿನ್ನೆಲೆಯುಳ್ಳ ಕುಟುಂಬ. ಮನೆಯಲ್ಲಿ ನಾಲ್ಕು ಆಕಳು, ಎರಡು ಕೋಣ, ನಾಲ್ಕು ಕರು, ಎರಡು ದನಗಳಿವೆ. ಕೋಳಿ, ಆಡುಗಳನ್ನೂ ಸಾಕಿದ್ದಾರೆ. ದನಕರುಗಳಿಂದ ಬರುವ ಸಗಣಿಯನ್ನು ನಿತ್ಯ (ಕುರುಳು) ಬಡಿದು ಜೋಡಿಸಿ ಇಡುತ್ತಾರೆ.

ಸಾವಿತ್ರಿ ವಗ್ಗರ ಅವರು ದೇವರ ಅಭಿಷೇಕಕ್ಕೆ, ಪೂಜೆಗೆ ಬೇಕಾದ ಶುದ್ಧ ಪಂಚಗವ್ಯವನ್ನು ಅತೀ ಕಡಿಮೆ ದರದಲ್ಲಿ ಜನರಿಗೆ ನೀಡುತ್ತಾರೆ. ಆಕಳ ತುಪ್ಪ, ಹಾಲು, ಮೊಸರು, ಗೋಮೂತ್ರ, ಜೇನು ತುಪ್ಪವನ್ನು ತಯಾರಿಸಿ ಕೊಡುತ್ತಾರೆ.

ADVERTISEMENT

ಚಿನ್ನ, ಜಮೀನು ಖರೀದಿ:

ಸಾವಿತ್ರಿ ವಗ್ಗರ ಅವರ ಕುಟುಂಬ ಬೆರಣಿ ಮಾರಿಯೇ ಪ್ರತಿ ವರ್ಷ ₹50 ಸಾವಿರದವರೆಗೆ ಆದಾಯ ಗಳಿಸುತ್ತಾರೆ. ಅದೇ ಹಣದಲ್ಲಿ 10 ವರ್ಷಗಳಲ್ಲಿ ಚಿನ್ನ, ಜಮೀನು ಖರೀದಿಸಿದ್ದಾರೆ.

‘10 ತೊಲೆ ಚಿನ್ನ, ಆರೇಮುರಾಳದಲ್ಲಿ 2 ಎಕರೆ ಜಮೀನು, ಸಿಂದಗಿ ತಾಲ್ಲೂಕಿನಲ್ಲಿ 3 ಎಕರೆ  ಜಮೀನು ಖರೀದಿಸಿದ್ದೇವೆ. ನಮಗೆ ಮೂವರು ಮಕ್ಕಳಲ್ಲಿ ಒಬ್ಬ ಮಗ ಎಲ್ಎಲ್‌ಬಿ ಓದುತ್ತಿದ್ದರೆ, ಇನ್ನೊಬ್ಬ ಪುತ್ರನ ದ್ವಿತೀಯ ಪಿಯುಸಿ ಶಿಕ್ಷಣ ಪೂರ್ಣಗೊಂಡಿದೆ. ಮಗಳಿಗೆ ಮದುವೆ ಮಾಡಿದ್ದೇವೆ’ ಎಂದು ಸಾವಿತ್ರಿ ವಗ್ಗರ ‘ಪ್ರಜಾವಾಣಿ’ಗೆ ತಿಳಿಸಿದರು.

‘ಮನೆಯ ತಗಡಿನ ಚಾವಣಿ ಮೇಲೆ ಬೆರಣಿಯನ್ನು ತಟ್ಟಿ ಒಣಗಿಸುತ್ತೇನೆ. ಬೇಕಾದವರಿಗೆ ತಲಾ ಒಂದು ಬೆರಣಿಗೆ ₹ 5 ರಂತೆ ಮಾರುತ್ತೇನೆ. ಬಾಣಂತನಕ್ಕೆ ಒಯ್ಯುವವರು 100 ರಿಂದ 200 ಕುರುಳು ಖರೀದಿಸುತ್ತಾರೆ. ಆದರೆ, ಎತ್ತಿನ ಬಂಡಿಗೆ ಹಳಿ ಜೋಡಿಸುವರು 500 ರಿಂದ‌ 600 ಬೆರಣಿ ಕೊಳ್ಳುತ್ತಾರೆ’ ಎಂದರು.

ಸಾವಿತ್ರಿ ಅವರ ಪತಿ ರಮೇಶ ವಗ್ಗರ ಮುದ್ದೇಬಿಹಾಳದ ಎಪಿಎಂಸಿಯಲ್ಲಿ ಅಡತಿ ಅಂಗಡಿಯಲ್ಲಿ ಕೆಲಸ ಮಡುತ್ತಾರೆ.

ಮುದ್ದೇಬಿಹಾಳ ತಾಲ್ಲೂಕಿನ ಆರೇಮುರಾಳದ ಸಾವಿತ್ರಿ ವಗ್ಗರ ಅವರು ಬೆರಣಿ ತಯಾರಿಸಿರುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.