ADVERTISEMENT

ಆಲಮೇಲ: ನದಿಪಾತ್ರಕ್ಕೆ ತೆರಳದಂತೆ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2025, 4:53 IST
Last Updated 16 ಸೆಪ್ಟೆಂಬರ್ 2025, 4:53 IST
<div class="paragraphs"><p>ಆಲಮೇಲ ತಾಲ್ಲೂಕಿನ ದೇವಣಗಾಂವ ಗ್ರಾಮದ ಸಮೀಪ‌ ಭೀಮಾ ನದಿಯಲ್ಲಿ ಹರಿಯುತ್ತಿರುವ ನೀರು</p></div>

ಆಲಮೇಲ ತಾಲ್ಲೂಕಿನ ದೇವಣಗಾಂವ ಗ್ರಾಮದ ಸಮೀಪ‌ ಭೀಮಾ ನದಿಯಲ್ಲಿ ಹರಿಯುತ್ತಿರುವ ನೀರು

   

ಆಲಮೇಲ: ತಾಲ್ಲೂಕಿನ ದೇವಣಗಾಂವ ಸಮೀಪ ಭೀಮಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಸೊನ್ನ ಬ್ಯಾರೇಜ್ ಗೆ ಒಟ್ಟು 1.50 ಲಕ್ಷ ಒಳ ಹರಿವು ಹಾಗೂ ಹೊರಹರಿವು ಇರುವುದರಿಂದ ಮಂಗಳವಾರ ಅಥವಾ ಬುಧವಾರ ಭೀಮಾ ನದಿ ಪಾತ್ರದ ವಿಜಯಪುರ, ಕಲಬುರಗಿ ಜಿಲ್ಲೆಯ ಜನರು ಹಾಗೂ ಜನಜಾನುವಾರು ನದಿ ಪಾತ್ರಕ್ಕೆ ತೆರಳದಂತೆ ಎಚ್ಚರಿಕೆ ವಹಿಸಬೇಕು ಎಂದು ಅಫಜಲಪುರದ ಕೆಎನ್‌ಎನ್‌ಎಲ್‌ ಎಇಇ ಸಂತೋಷಕುಮಾರ ಸಜ್ಜನ ತಿಳಿಸಿದ್ದಾರೆ

ಮಹಾರಾಷ್ಟ್ರದ ಭೀಮಾ ನದಿ ಪಾತ್ರದ ಪ್ರದೇಶದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಉಜನಿ ಜಲಾಶಯದಿಂದ 1 ಲಕ್ಷ ಕ್ಯೂಸೆಕ್ ನೀರು ನದಿ ಪಾತ್ರಕ್ಕೆ ಹರಿ ಬಿಡಲಾಗಿದ್ದು, ಭೀಮಾ ನದಿಯ ಉಪನದಿಯಾದ ಸೀನಾ ನದಿಯು ತುಂಬಿ ಹರಿಯುತ್ತಿದ್ದು, ಅಫ್ಜಲಪುರ ತಾಲ್ಲೂಕಿನಲ್ಲಿ ಭೀಮಾ ನದಿಗೆ ಸೇರುವ ಬೋರಿ ಹಳ್ಳಕ್ಕೂ ಅಪಾರ ಪ್ರಮಾಣದಲ್ಲಿ ನೀರು ಬಂದಿದೆ ಎಂದರು.

ಮಳೆಗಾಲ ಆರಂಭವಾದ ಮೇಲೆ ಈಗಾಗಲೇ ಎರಡು ಮೂರು ಬಾರಿ ಅಪಾರ ಪ್ರಮಾಣದ ನೀರು, ನದಿಯಲ್ಲಿ ಹರಿದು ನದಿ ಪಾತ್ರದಲ್ಲಿರುವ ಹಾಗೂ ತಗ್ಗು ಪ್ರದೇಶದಲ್ಲಿರುವ ಸಾವಿರಾರು ಎಕರೆ ಬೆಳೆಗಳು ನಾಶವಾಗಿದ್ದು, ಅಪಾರ ಪ್ರಮಾಣದಲ್ಲಿ ಹಾನಿಯಾಗಿದೆ. ಈಗ ಮತ್ತೆ ನದಿಯಲ್ಲಿ ಲಕ್ಷಾಂತರ ಪ್ರಮಾಣದ ನೀರು ಬರುತ್ತಿರುವುದು ನದಿ ಪಾತ್ರದ ಗ್ರಾಮಗಳ ಜನರಿಗೆ ಆತಂಕ ಉಂಟು ಮಾಡಿದೆ.

ಆಲಮೇಲ ತಾಲ್ಲೂಕಿನ ತಾರಾಪುರ, ತಾವರಖೇಡ, ಬ್ಯಾಡಗಿಹಾಳ, ದೇವಣಗಾಂವ, ಕಡ್ಲೆವಾಡ, ಶಂಬೆವಾಡ, ಕುಮಸಗಿ, ಚಿಕ್ಕಹವಳಗಿ, ಬಗಲೂರ ಗ್ರಾಮಗಳ ಜನರ ಆತಂಕ ಹೆಚ್ಚಿಸಿದೆ. ಈಗಾಗಲೇ ಕಳೆದ ಎರಡು ತಿಂಗಳಿಂದ ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಜನರು ತೊಂದರೆಗೊಳಗಾಗಿದ್ದಾರೆ. ಬೆಳೆಗಳು ಹಾಳಾಗಿವೆ. ಗಾಯದ ಮೇಲೆ ಬರೆ ಎನ್ನುವಂತೆ ಮತ್ತೆ ಪ್ರವಾಹ ಪರಿಸ್ಥಿತಿ ತಲೆದೋರಿದ್ದು ಜನರ ಆತಂಕಕ್ಕೆ ಕಾರಣವಾಗಿದೆ. ನದಿಯ ಸಮೀಪವಿರುವ ಗ್ರಾಮಗಳ ಮನೆಗಳಲ್ಲಿ ವಿಷಜಂತುಗಳ ಹಾವಳಿ ಹೆಚ್ಚಾಗಿ ಜನರಿಗೆ ತೊಂದರೆಯಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.