ADVERTISEMENT

ವಿಜಯಪುರ | ಬಿರುಸಿನ ಮಳೆ: ಭೀಮಾ ಪ್ರವಾಹ, ಜನಜೀವನ ಅಸ್ತವ್ಯಸ್ತ

ಸಂತ್ರಸ್ಥರ ಸಮಸ್ಯೆ ಆಲಿಸಿದ ಶಾಸಕ ಅಶೋಕ ಮನಗೂಳಿ, ಜಿಲ್ಲಾಧಿಕಾರಿ ಡಾ.ಆನಂದ್‌

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2025, 5:31 IST
Last Updated 28 ಸೆಪ್ಟೆಂಬರ್ 2025, 5:31 IST
<div class="paragraphs"><p>ಭೀಮಾನದಿ ಪ್ರವಾಹಕ್ಕೆ ಒಳಗಾಗಿರುವ ಗ್ರಾಮಗಳಿಗೆ ಶಾಸಕ ಅಶೋಕ ಮನಗೂಳಿ, ಜಿಲ್ಲಾಧಿಕಾರಿ ಡಾ.ಆನಂದ ಕೆ. ಹಾಗೂ ಜಿಲ್ಲಾ ಪಂಚಾಯಿತಿ&nbsp;ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಿಷಿ ಆನಂದ್‌ ಶನಿವಾರ ಭೇಟಿ ನೀಡಿ ಪರಿಶೀಲನೆ ನಡೆಸಿ, ಸಂತ್ರಸ್ತರ ಸಮಸ್ಯೆಗಳನ್ನು ಆಲಿಸಿದರು</p></div>

ಭೀಮಾನದಿ ಪ್ರವಾಹಕ್ಕೆ ಒಳಗಾಗಿರುವ ಗ್ರಾಮಗಳಿಗೆ ಶಾಸಕ ಅಶೋಕ ಮನಗೂಳಿ, ಜಿಲ್ಲಾಧಿಕಾರಿ ಡಾ.ಆನಂದ ಕೆ. ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಿಷಿ ಆನಂದ್‌ ಶನಿವಾರ ಭೇಟಿ ನೀಡಿ ಪರಿಶೀಲನೆ ನಡೆಸಿ, ಸಂತ್ರಸ್ತರ ಸಮಸ್ಯೆಗಳನ್ನು ಆಲಿಸಿದರು

   

ವಿಜಯಪುರ: ಜಿಲ್ಲೆಯಾದ್ಯಂತ ಶನಿವಾರ ಬಿರುಸಿನ ಗಾಳಿ, ಮಳೆಯಾಗಿದೆ. ದೈನಂದಿನ ಜನ ಜೀವನ ಅಸ್ತವ್ಯಸ್ತವಾಗಿದೆ.

654 ಜನರಿಗೆ ಆಶ್ರಯ:

ADVERTISEMENT

ನದಿ ಪ್ರವಾಹ ಮತ್ತು ಅತಿವೃಷ್ಟಿಯಿಂದ ಇಂಡಿ ಮತ್ತು ಆಲಮೇಲ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಮನೆಗಳಿಗೆ ನೀರು ನುಗ್ಗಿದೆ. 16 ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದೆ. 140 ಕುಟುಂಬಗಳ 152 ಮಕ್ಕಳು ಸೇರಿ ಒಟ್ಟು 654 ಜನರಿಗೆ ಆಶ್ರಯ ಕಲ್ಪಿಸಲಾಗಿದೆ.

47 ಮನೆಗಳಿಗೆ ಹಾನಿ: 

ಬಸವನಬಾಗೇವಾಡಿ, ಬಬಲೇಶ್ವರ, ನಿಡಗುಂದಿ, ತಿಕೋಟಾ, ತಾಳಿಕೋಟೆ, ವಿಜಯಪುರ, ಚಡಚಣ, ಸಿಂದಗಿ  ಮುದ್ದೇಬಿಹಾಳ, ಕೊಲ್ಹಾರ, ದೇವರ ಹಿಪ್ಪರಗಿ ಸೇರಿ ವಿವಿಧೆಡೆ 47ಕ್ಕೂ ಅಧಿಕ ಮನೆಗಳಿಗೆ ಹಾನಿಯಾಗಿದೆ. ಇಂಡಿಯಲ್ಲಿ ಶಾಂತು ಧನಶೆಟ್ಟಿ ಅವರಿಗೆ ಸೇರಿದ ಗೋದಾಮಿನಲ್ಲಿದ್ದ ₹1 ಕೋಟಿ ಮೊತ್ತದ ರಸಾಯನಿಕ ಗೊಬ್ಬರ ಮತ್ತು ಔಷಧ ಹಾನಿಯಾಗಿದೆ.

ಭೀಮೆ ಇಳಿಮುಖ

ಭೀಮಾನದಿ ನೀರು ತಾಲ್ಲೂಕಿನ ಕೆಲ ಹಳ್ಳಿಗಳಿಗೆ ನುಗ್ಗಿ ಸಂಕಷ್ಟಕ್ಕೆ ಈಡುಮಾಡಿದ್ದು, ಶನಿವಾರ ನೀರಿನ ಹರಿವು ಕಡಿಮೆಯಾಗಿದ್ದರಿಂದ ಜನತೆ ಸ್ವಲ್ಪ ನಿಟ್ಟುಸಿರು ಬಿಟ್ಟಂತಾಗಿದೆ.

ತಾರಾಪುರದಲ್ಲಿ ಶುಕ್ರವಾರ ರಾತ್ರಿ 15  ಕುಟುಂಬಗಳನ್ನು ಅಗ್ನಿಶಾಮಕದಳದ ಸಿಬ್ಬಂದಿ ಬೋಟ್ ಮೂಲಕ ಕಾಳಜಿಕೇಂದ್ರಕ್ಕೆ ಕರೆತಂದರು. ಶಂಬೇವಾಡ ಗ್ರಾಮದಲ್ಲಿ ಗರ್ಭಿಣಿ ಮಹಿಳೆಯರು, ಬಾಣಂತಿಯರನ್ನು ಸುರಕ್ಷಿತ ಸ್ಥಳಕ್ಕೆ ಕರೆತರಲಾಯಿತು.

ಶನಿವಾರ ಪ್ರವಾಹ ಪೀಡಿತ ಪ್ರದೇಶಗಳಾದ ತಾರಾಪುರ, ತಾವರಖೇಡ, ಕುಮಸಗಿ, ಶಂಬೇವಾಡ, ಕಡ್ಲೇವಾಡ, ದೇವಣಗಾಂವ ಗ್ರಾಮಗಳಿಗೆ ಶಾಸಕ ಅಶೋಕ ಮನಗೂಳಿ, ಜಿಲ್ಲಾಧಿಕಾರಿ ಕೆ.ಆನಂದ, ಉಪವಿಭಾಗಾಧಿಕಾರಿ ಅನುರಧಾ ವಸ್ತ್ರದ, ತಹಶೀಲ್ದಾರ ಕರೆಪ್ಪ ಬೆಳ್ಳಿ ಮೊದಲಾದ ಅಧಿಕಾರಿಗಳ ತಂಡ ಭೇಟಿ ನೀಡಿ ಜನರ ಸಮಸ್ಯೆಗಳನ್ನು ಆಲಿಸಿದರು.

ಶಾಸಕ ಅಶೋಕ ಮನಗೂಳಿ, ಕುಮಸಗಿ ಹಾಗೂ ದೇವಣಗಾಂವ ಗ್ರಾಮದಲ್ಲಿ ಸತತವಾಗಿ ಸುರಿಯುತ್ತಿರುವ ಮಳೆಯಿಂದ ಹಾನಿಗೊಳಗಾದ ಹಾಗೂ ಪ್ರವಾಹದಿಂದ ಮನೆಗಳಿಗೆ ನೀರು ಹೋಗಿ ನಿರಾಶ್ರಿತರಾಗಿರುವ ಕುಟುಂಬಗಳಿಗೆ ಮುಂದಿನ ದಿನಮಾನಗಳಲ್ಲಿ ವಸತಿ ಸೂರು ಕಲ್ಪಿಸಿಕೊಡುವುದಾಗಿ ಆಶ್ವಾಸನೆ ನೀಡಿದರು.

ತಾವರಖೇಡ ಗ್ರಾಮಸ್ಥರು ತಮಗೆ ಪುನರ್ ವಸ್ತಿ ಕೇಂದ್ರದಲ್ಲಿ ಸ್ಥಳಾಂತರ ಆಗಲು ಎಲ್ಲ ರೀತಿಯ ವ್ಯವಸ್ಥೆ ಮಾಡಲಾಗಿದೆ, ನಿವೇಶಗಳನ್ನು ಹಂಚಿಕೆ ಮಾಡಿದ್ದೀರಿ ಆದರೆ, ಪ್ರತಿ ಕುಟುಂಬಕ್ಕೆ ₹ 50 ಸಾವಿರ ಸ್ಥಳಾಂತರಕ್ಕೆ ಸಹಾಯ ಮಾಡುವದಾಗಿ ಭೀಮಾ ಏತನೀತಾವರಿ ಅಧಿಕಾರಿಗಳು ಹೇಳಿದ್ದಾರೆ, ಈವರೆಗೂ ಹಣ ನೀಡಿಲ್ಲ, ಉಳಿದ 50ಕ್ಕೂ ಹೆಚ್ಚು ಕುಟುಂಬಗಳಿಗೆ ನೆರವು ನೀಡಬೇಕು ಎಂದು ಗ್ರಾಮಸ್ಥ ಶರಣಪ್ಪ ನಾಟೀಕಾರ ಅಧಿಕಾರಿಗಳಿಗೆ‌‌ ಮನವಿಮಾಡಿಕೊಂಡರು.

ಭೀಮೆಯ ಆರ್ಭಟ ಇಳಿಮುಖವಾಗುತ್ತಿದ್ದು, ನೀರಿನ ಒತ್ತಡ ಕೊಂಚ ಕಡಿಮಿಯಾಗುತ್ತಿದೆಯಾದರೂ ಮಳೆಮಾತ್ರ ನಿರಂತರವಾಗಿದೆ, ಇದರಿಂದ ಸಾಕಷ್ಟು ಬೆಳೆಹಾನಿಯಾಗಿದ್ದು, ಸಂಕಟಕ್ಕೆ ಇಲ್ಲಿನ ಜನತೆ ಒಳಗಾಗಿದ್ದಾರೆ.

ಸೊನ್ನ ಬ್ಯಾರೇಜಿಗೆ ಭೇಟಿ: 

ಸೊನ್ನ ಬ್ಯಾರೇಜಿಗೆ ಜಿಲ್ಲಾಧಿಕಾರಿ ಭೇಟಿ ನೀಡಿ, ನೀರಿನ ಪ್ರವಾಹ ಪರಿಸ್ಥಿತಿ ಮಾಹಿತಿ ಪಡೆದುಕೊಂಡರು. ಜಿಲ್ಲಾಡಳಿತದೊಂದಿಗೆ ಸತತ ಸಂಪರ್ಕದಲ್ಲಿದ್ದು, ಮಾಹಿತಿ ನೀಡುವಂತೆ ಜಿಲ್ಲಾಧಿಕಾರಿ ಡಾ.ಆನಂದ ಕೆ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಿಷಿ ಆನಂದ, ಜಂಟಿ ಕೃಷಿ ನಿರ್ದೇಶಕ ಶಿವನಗೌಡ ಪಾಟೀಲ, ಇಂಡಿ ಉಪವಿಭಾಗಾಧಿಕಾರಿ ಅನುರಾಧಾ ವಸ್ತ್ರದ, ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ರಾಮು ಜಿ ಅಗ್ನಿ, ಕರೆಪ್ಪ ಬೆಳ್ಳಿ ಇದ್ದರು.

ಆಲಮೇಲ ತಾಲ್ಲೂಕಿನ ಶಂಬೇವಾಡ ಗ್ರಾಮದಲ್ಲಿ ಭೀಮಾ ನದಿ ಪ್ರವಾಹದಲ್ಲಿ ಸಿಲುಕಿದ್ದ ಮೂವರು ಗರ್ಭಿಣಿಯರನ್ನು ಬೋಟ್ ಮುಖಾಂತರ ಕರೆತಂದು ದೇವಣಗಾಂವ ಆರೋಗ್ಯ ಉಪ ಕೇಂದ್ರಕ್ಕೆ ಸ್ಥಳಾಂತರಿಸಲಾಯಿತು
ಪ್ರವಾಹಕ್ಕೊಳಗಾಗಿರುವ ಪ್ರದೇಶಗಳಲ್ಲಿ ಪರಿಹಾರ ದೊರಕಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕು  ಈ ಕಾರ್ಯವನ್ನು ಪ್ರಥಮಾದ್ಯತೆ ಮೇಲೆ ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಿ ಪರಿಹಾರ ಕಾರ್ಯ ಕೈಗೊಳ್ಳಬೇಕು
ಅಶೋಕ ಮನಗೂಳಿ ಶಾಸಕ
ಕಾಳಜಿ ಕೇಂದ್ರಗಳಲ್ಲಿ ಅಗತ್ಯ ಸೌಲಭ್ಯಗಳನ್ನು ಒದಗಿಸಲಾಗಿದೆ. ಯಾರೂ ಸಹ ಭಯ ಪಡುವ ಅವಶ್ಯಕತೆ ಇಲ್ಲ. ಜಿಲ್ಲಾಡಳಿತ ನಿಮ್ಮ ಜೊತೆಗಿದ್ದು ಅಗತ್ಯ ಸಹಕಾರ ಒದಗಿಸಲಿದೆ  
ಡಾ.ಆನಂದ ಕೆ. ಜಿಲ್ಲಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.