ವಿಜಯಪುರ – ಸೊಲ್ಲಾಪುರ ರಾಷ್ಟ್ರೀಯ ಹೆದ್ದಾರಿ 52 ಟಾಕಳಿ- ಒಡಕಬಾಳ ನಡುವೆ ಜಲಾವೃತಗೊಂಡಿತ್ತು
ವಿಜಯಪುರ: ಭೀಮಾ ಮತ್ತು ಸೀನಾ ನದಿಗಳ ಪ್ರವಾಹದಿಂದ ಬುಧವಾರ ಬೆಳಿಗ್ಗೆಯಿಂದ ವಿಜಯಪುರ- ಸೊಲ್ಲಾಪುರ ರಾಷ್ಟ್ರೀಯ ಹೆದ್ದಾರಿ–52ರಲ್ಲಿ ನೀರು ಆವರಿಸಿ, ವಾಹನಗಳ ಸಂಚಾರ ಸ್ಥಗಿತಗೊಂಡಿದೆ.
ಮಹಾರಾಷ್ಟ್ರದ ಉಜನಿ ಹಾಗೂ ವೀರಾ ಜಲಾಶಯಗಳಿಂದ ಹೆಚ್ಚಿನ ಪ್ರಮಾಣದಲ್ಲಿ ನೀರು ಬಿಡುತ್ತಿರುವುದು ಇದಕ್ಕೆ ಕಾರಣ. ಪರಿಣಾಮ ಭೀಮಾ ಹಾಗೂ ಅದರ ಉಪನದಿ ಸೀನಾದಲ್ಲಿ ಪ್ರವಾಹ ಉಂಟಾಗಿದೆ. ವಿಜಯಪುರ ಜಿಲ್ಲೆಯ ಚಡಚಣ, ಇಂಡಿ, ಆಲಮೇಲ ತಾಲ್ಲೂಕಿನ ಸಾವಿರಾರು ಹೆಕ್ಟೇರ್ ಪ್ರದೇಶದ ಜಮೀನಿನಲ್ಲಿ ನೀರು ಆವರಿಸಿದೆ. ಭೀಮಾ ನದಿ ಅಪಾಯದ ಮಟ್ಟದಲ್ಲಿ ಹರಿಯುತ್ತಿದೆ.
ಭೀಮಾ ನದಿ ತಟದ ವಿವಿಧ ಗ್ರಾಮಗಳಲ್ಲಿ ಜಮೀನು ಜಲಾವೃತವಾಗಿದೆ. ಚಡಚಣ, ಇಂಡಿ, ಆಲಮೇಲ ತಾಲ್ಲೂಕಿನ ಹಲವಾರು ಹಳ್ಳ-ಕೊಳ್ಳಗಳು, ಕರೆ ಕಟ್ಟೆಗಳು ತುಂಬಿ ಹರಿಯುತ್ತಿವೆ.
ಭೀಮಾ ನದಿ ಪ್ರವಾಹದಿಂದ ಇಂಡಿ ತಾಲ್ಲೂಕಿನ ಹಿಂಗಣಿ-ಬರಗೂಡಿ ಗ್ರಾಮಗಳ ಮಧ್ಯದ ರಸ್ತೆ ಬಂದ್ ಆಗಿದೆ. ಪಡನೂರ ಗ್ರಾಮದಲ್ಲಿಯ 30 ಕುಟುಂಬಗಳಿಗೆ ಸ್ಥಳಾಂತರಗೊಳಲು ಸೂಚಿಸಲಾಗಿದೆ. ಶಿರಗೂರ ಗ್ರಾಮದ ಶಾಲೆಗೆ ನೀರು ತಲುಪಿದೆ. ಶಿರಗೂರ ಇನಾಂ ಗ್ರಾಮ ಸ್ಥಳಾಂತರ ಮಾಡಲು ಗ್ರಾಮಸ್ಥರು ಮನವಿ ಮಾಡಿಕೊಂಡಿದ್ದಾರೆ. ಚಿಕ್ಕಮಣ್ಣೂರ, ಖೇಡಗಿ, ನಾಗರಳ್ಳಿ, ಭುಯ್ಯಾರ, ಅಗರಖೇಡ, ಮಿರಗಿ ಮಣ್ಣೂರ ಗ್ರಾಮಗಳಲ್ಲಿ ಸುರಕ್ಷತೆ ಕುರಿತು ನಿಗಾ ವಹಿಸಲಾಗಿದೆ.
‘ಭೀಮಾ ನದಿಗೆ 2.80 ಲಕ್ಷ ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಸೊನ್ನ ಬ್ಯಾರೇಜಿನಿಂದ 25 ಗೇಟ್‌ಗಳ ಮೂಲಕ ನೀರು ಹೊರ ಬಿಡಲಾಗುತ್ತಿದೆ. ಇನ್ನೂ ಎರಡು ದಿನ ಹೀಗೆ ಮುಂದುವರೆಯಲಿದೆ’ ಎಂದು ಕೃಷ್ಣಾ ಮೇಲ್ದಂಡೆ ಯೋಜನೆ ಎಂಜಿನಿಯರ್ ಮನೋಜಕುಮಾರ ಗಡಬಳ್ಳಿ ಪ್ರತಿಕ್ರಿಯಿಸಿದ್ದಾರೆ.
‘ವಿಜಯಪುರ ಜಿಲ್ಲೆಯಲ್ಲಿ ಸತತ ಮಳೆಯಿಂದ 1 ಲಕ್ಷ ಹೆಕ್ಟೇರ್ ಪ್ರದೇಶದ ಬೆಳೆ ಹಾನಿಯಾಗಿದೆ’ ಎಂದು ಜಿಲ್ಲಾಧಿಕಾರಿ ಡಾ.ಕೆ.ಆನಂದ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.