ಇಂಡಿ: ತಾಲ್ಲೂಕಿನಲ್ಲಿ ಹರಿಯುವ ಭೀಮಾ ನದಿಗೆ ಮಹಾರಾಷ್ಟ್ರ ರಾಜ್ಯ ಉಜನಿ ಜಲಾಶಯದಿಂದ ಒಂದು ಲಕ್ಷ 27 ಸಾವಿರ ಮತ್ತು ವೀರ ಭಟಕರ ಜಲಾಶಯದಿಂದ 54 ಸಾವಿರ ಕ್ಯೂಸೆಕ್ ನೀರು ಹೀಗೆ ಒಟ್ಟು 1.81 ಲಕ್ಷ ಕ್ಯೂಸೆಕ್ ನೀರು ಭೀಮಾ ನದಿ ಪಾತ್ರಕ್ಕೆ ಹರಿಬಿಡಲಾಗಿದೆ ಎಂದು ಕಂದಾಯ ಉಪವಿಭಾಗಾಧಿಕಾರಿ ಅನುರಾಧಾ ವಸ್ತ್ರದ ತಿಳಿಸಿದ್ದಾರೆ.
ನೀರು ಜಲಾಶಯಗಳಿಂದ ಗುರುವಾರ ಬೆಳಿಗ್ಗೆ 8 ಗಂಟೆಗೆ ಬಿಟ್ಟಿದ್ದು, ಆ ನೀರು ಮಹಾರಾಷ್ಟ್ರದ ಪಂಢರಪುರದಿಂದ ಕರ್ನಾಟಕದ ದಸೂರ ಮತ್ತು ಚಡಚಣ ಗ್ರಾಮದ ಮೂಲಕ ಇಂಡಿ ತಾಲ್ಲೂಕಿನ ಗ್ರಾಮಗಳಿಗೆ ಗುರುವಾರ ರಾತ್ರಿಯೇ ಬರುವ ಸಂಭವವಿದೆ. ನದಿ ಪಾತ್ರದ ಜನರು ಎಚ್ಚರಿಕೆಯಿಂದ ಇರಲು ವಿನಂತಿಸಿದ್ದಾರೆ.
ಗುರುವಾರ ಭೀಮಾ ನದಿ ಪಾತ್ರದಲ್ಲಿ ಮಳೆ ಕಡಿಮೆಯಾಗಿದ್ದು, ಬರುವ ದಿನಗಳಲ್ಲಿ ನೀರಿನ ಹರಿವು ಕಡಿಮೆ ಮಾಡುವುದಾಗಿ ಜಲಾಶಯದ ಮೂಲಗಳು ತಿಳಿಸಿದ್ದಾಗಿ ಅನುರಾಧಾ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.