ADVERTISEMENT

’ಲಂಬಾಣಿ ಸಮಾಜಕ್ಕೆ ಬಿಜೆಪಿಯಿಂದ ಅನ್ಯಾಯ‘-ಪ್ರಕಾಶ ರಾಠೋಡ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2021, 16:38 IST
Last Updated 24 ಅಕ್ಟೋಬರ್ 2021, 16:38 IST
ಪ್ರಕಾಶ ರಾಠೋಡ
ಪ್ರಕಾಶ ರಾಠೋಡ   

ವಿಜಯಪುರ: ಲಂಬಾಣಿ ಸಮಾಜಕ್ಕೆ ಕಾಂಗ್ರೆಸ್‌ ಕೊಡುಗೆ ಅಪಾರ, ಬಿಜೆಪಿಯಿಂದ ಅನ್ಯಾಯವಾಗಿದೆ ಎಂದು ವಿಧಾನ ಪರಿಷತ್‌ ಸದಸ್ಯ ಪ್ರಕಾಶ ರಾಠೋಡ ಹೇಳಿದರು.

ನಗರದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಲಂಬಾಣಿ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿಸಿದ್ದು ಕಾಂಗ್ರೆಸ್‌ ಪಕ್ಷ. ಎಸ್‌ಸಿಗೆ ಸೇರಿದ ಪರಿಣಾಮ ಆರ್ಥಿಕವಾಗಿ, ಶೈಕ್ಷಣಿಕವಾಗಿ, ರಾಜಕೀಯವಾಗಿ ಸಮಾಜ ಉನ್ನತಿ ಸಾಧಿಸಿದೆ ಎಂದರು.

ಸಂತ ಸೇವಾಲಾಲ ಜಯಂತಿಯನ್ನು ಸರ್ಕಾರಿ ಕಾರ್ಯಕ್ರಮವನ್ನಾಗಿ ರೂಪಿಸಿದ್ದು ಕಾಂಗ್ರೆಸ್‌, ಸೂರಗೊಂಡನಕೊಪ್ಪ ಕ್ಷೇತ್ರ ಅಭಿವೃದ್ಧಿಗೆ ₹ 2 ಕೋಟಿ ನೀಡಿದ್ದು ಕಾಂಗ್ರೆಸ್‌, ರಾಜ್ಯದಲ್ಲಿರುವ 5 ಸಾವಿರ ತಾಂಡಾಗಳಲ್ಲಿ 1400 ಬಂಜಾರಾ ತಾಂಡಗಳನ್ನು ಕಂದಾಯ ಗ್ರಾಮಗಳನ್ನಾಗಿ ಮಾಡಿದ್ದು ಕಾಂಗ್ರೆಸ್‌ ಎಂದು ಹೇಳಿದರು.

ADVERTISEMENT

ಬಿಜೆಪಿ ಸರ್ಕಾರ ಲಂಬಾಣಿ ತಾಂಡಾ ಅಭಿವೃದ್ಧಿಗೆ ಅಗತ್ಯ ಅನುದಾನ ನೀಡಿಲ್ಲ, ಇನ್ನುಳಿದ ತಾಂಡಾಗಳನ್ನು ಕಂದಾಯ ಗ್ರಾಮ ಮಾಡಲು ಆದ್ಯತೆ ನೀಡದೇ ಅನ್ಯಾಯ ಮಾಡಲಾಗಿದೆ ಎಂದು ಆರೋಪಿಸಿದರು.

ಸಚಿವ ಕಾರಜೋಳ, ಸಂಸದ ರಮೇಶ ಜಿಗಜಿಣಗಿ ಅವರು ಚುನಾವಣೆ ವೇಳೆ ನಾಟಕವಾಡುತ್ತಿದ್ದಾರೆ. ಕಾರಜೋಳ ಅವರು ಜಿಲ್ಲೆಗೆ ಅಗತ್ಯ ನೀರಾವರಿ ಯೋಜನೆ ಜಾರಿಗೆ ಕ್ರಮಕೈಗೊಂಡಿಲ್ಲ.ಎಂ.ಬಿ.ಪಾಟೀಲ ಅವರನ್ನು ನೋಡಿ ಕಾರಜೋಳ ಕಲಿಯಬೇಕಿದೆ ಎಂದರು.

ದೇವೇಗೌಡ ಅವರು ಕಾಂಗ್ರೆಸ್‌ ಅನ್ನು ನಕಲಿ ಕಾಂಗ್ರೆಸ್‌ ಎಂದು ಟೀಕಿಸಿದ್ದಾರೆ. ದೇವೇಗೌಡರನ್ನು ಪ್ರಧಾನಿ ಮಾಡಿದ್ದು, ಕಾಂಗ್ರೆಸ್‌, ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಿದ್ದು ಕಾಂಗ್ರೆಸ್‌ ಎಂಬುದನ್ನು ನೆನಪಿಟ್ಟುಕೊಳ್ಳಬೇಕು ಎಂದರು.

ಮುಖ್ಯಮಂತ್ರಿ ಬೊಮ್ಮಾಯಿ ಅವರು ಸುಳ್ಳು ಹೇಳುವುದರಲ್ಲಿ ಪ್ರಧಾನಿ ಮೋದಿ ಅವರ ಹಾದಿ ಹಿಡಿದಿದ್ದಾರೆ ಎಂದು ಆರೋಪಿಸಿದರು.

ಬಿಜೆಪಿ, ಜೆಡಿಎಸ್‌ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಬಿಜೆಪಿಯ ಬಿ ಟೀಂ ಜೆಡಿಎಸ್‌ ಆಗಿದೆ. ಅಲ್ಪಸಂಖ್ಯಾತರು ಕಾಂಗ್ರೆಸ್‌ ಪರವಾಗಿದ್ದಾರೆ ಎಂದರು.

ಮುಖಂಡರಾದ ಎಂ.ಎಸ್‌.ನಾಯಕ, ಅಶೋಕ ರಾಠೋಡ, ಪ್ರೇಮ್‌ಸಿಂಗ್‌ ಚವ್ಹಾಣ, ರಾಜು ಚವ್ಹಾಣ, ವಸಂತ ಹೊನಮೋಡೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.