ADVERTISEMENT

ಕಾಂಗ್ರೆಸ್‌ ಪಕ್ಷದಿಂದ ಓಲೈಕೆ ರಾಜಕಾರಣ: ಆರ್.ಎಸ್.ಪಾಟೀಲ ಕೂಚಬಾಳ

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2024, 16:18 IST
Last Updated 30 ಆಗಸ್ಟ್ 2024, 16:18 IST
ಸಿಂದಗಿ ಪಟ್ಟಣದ ಬಿಜೆಪಿ ಕಾರ್ಯಾಲಯದ ಸಭಾಭವನದಲ್ಲಿ ನಡೆದ  ಬಿಜೆಪಿ ಸದಸ್ಯತಾ ಅಭಿಯಾನ-2024 ಕಾರ್ಯಾಗಾರವನ್ನು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಆರ್.ಎಸ್.ಪಾಟೀಲ ಕೂಚಬಾಳ ಉದ್ಘಾಟಿಸಿದರು
ಸಿಂದಗಿ ಪಟ್ಟಣದ ಬಿಜೆಪಿ ಕಾರ್ಯಾಲಯದ ಸಭಾಭವನದಲ್ಲಿ ನಡೆದ  ಬಿಜೆಪಿ ಸದಸ್ಯತಾ ಅಭಿಯಾನ-2024 ಕಾರ್ಯಾಗಾರವನ್ನು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಆರ್.ಎಸ್.ಪಾಟೀಲ ಕೂಚಬಾಳ ಉದ್ಘಾಟಿಸಿದರು   

ಸಿಂದಗಿ: ‘ಸ್ವಾತಂತ್ರ್ಯಪೂರ್ವದಿಂದಲೂ ಕಾಂಗ್ರೆಸ್ ಪಕ್ಷ ಓಲೈಕೆ ರಾಜಕಾರಣ ಮಾಡುತ್ತಲೇ ಬಂದಿದೆ. ಸ್ವಾತಂತ್ರ್ಯಾನಂತರ ಇನ್ನೂ ಹೆಚ್ಚಾಗಿದೆ. ದೇಶ ಏನಾದರೂ ಆಗಲಿ ಅಧಿಕಾರ ಸಿಗಲಿ ಎಂಬ ಧೋರಣೆ ಹೊಂದಿದ ಪಕ್ಷವಾಗಿದೆ’ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಆರ್.ಎಸ್.ಪಾಟೀಲ ಕೂಚಬಾಳ ಹೇಳಿದರು.

ಇಲ್ಲಿಯ ಬಿಜೆಪಿ ಕಾರ್ಯಾಲಯದ ಸಭಾಭವನದಲ್ಲಿ ಶುಕ್ರವಾರ ಬಿಜೆಪಿ ಮಂಡಲ ವತಿಯಿಂದ ಹಮ್ಮಿಕೊಂಡಿದ್ದ ಬಿಜೆಪಿ ಸದಸ್ಯತಾ ಅಭಿಯಾನ-2024 ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

‘ಕಾಂಗ್ರೆಸ್ ಸಚಿವರು ರಾಜ್ಯಪಾಲ ಮತ್ತು ಪ್ರಧಾನಿ ಅವರಿಗೆ ಕೆಟ್ಟ ಪದ ಬಳಕೆ ಮಾಡಿರುವುದು ಖಂಡನೀಯ. ಅದರಂತೆ ಖರ್ಗೆ ಕುಟುಂಬ ಅಧಿಕಾರ ದುರುಪಯೋಗ ಮಾಡಿಕೊಂಡಿದೆ ಎಂದು ಆರೋಪಿಸಿದ ವಿಧಾನಪರಿಷತ್ ವಿರೋಧಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರಿಗೆ ಸಚಿವ ಎಂ.ಬಿ.ಪಾಟೀಲ ಅವರು ಲಘುವಾಗಿ ಮಾತನಾಡಿರುವುದು ಸರಿಯಲ್ಲ’ ಎಂದು ಅವರ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

‘ಮುಖ್ಯಮಂತ್ರಿ ಕುಟುಂಬ ಮುಡಾ ಹಗರಣದಲ್ಲಿದೆ. ಕಾಂಗ್ರೆಸ್ ಸರ್ಕಾರದಲ್ಲಿ ಭ್ರಷ್ಟಾಚಾರ ತಾರಕಕ್ಕೇರಿದೆ.  ಈ ಎಲ್ಲ ಹಗರಣಗಳಿಂದಲೇ ಸರ್ಕಾರ ಪತನವಾಗುವುದು ಖಚಿತ’ ಎಂದರು.

ಮಾಜಿ ಶಾಸಕ ರಮೇಶ ಭೂಸನೂರ ಮಾತನಾಡಿ, ಸಿಂದಗಿ ಮತಕ್ಷೇತ್ರದಲ್ಲಿ ಗ್ರಾಮೀಣ ರಸ್ತೆಗಳು ಸಂಪೂರ್ಣ ಹಾಳಾಗಿ ಹೋಗಿವೆ. ಸರ್ಕಾರ ರಚನೆಯಾಗಿ ಒಂದೂವರೆ ವರ್ಷವಾದರೂ ಈವರೆಗೆ ಒಂದು ಕಿ.ಮೀ ರಸ್ತೆ ಕಾಮಗಾರಿ ನಡೆದಿದೆಯೇ ಎಂದು ಶಾಸಕ ಅಶೋಕ ಮನಗೂಳಿ ಅವರನ್ನು ಪ್ರಶ್ನಿಸಿದರು.

‘ಸಿಂದಗಿ ಮತಕ್ಷೇತ್ರದ ಗ್ರಾಮೀಣ ರಸ್ತೆಗಳಲ್ಲಿ ಎಲ್ಲೆಂದರಲ್ಲಿ ಗುಂಡಿಗಳೆ ಎದ್ದು ಕಾಣುತ್ತವೆ. ಶೀಘ್ರದಲ್ಲಿಯೇ ಗುಂಡಿಗಳಲ್ಲಿ ಗಿಡ ನೆಟ್ಟು ವಿನೂತನ ಪ್ರತಿಭಟನೆ ಮಾಡಲಾಗುವುದು’ ಎಂದರು.

‘ಸಿಂದಗಿ ಪುರಸಭೆ ಕಾರ್ಯಾಲಯದಲ್ಲಿ ಆಶ್ರಯ ನಿವೇಶನಗಳಲ್ಲಿ ಭಾರಿ ಪ್ರಮಾಣದಲ್ಲಿ ಭ್ರಷ್ಟಾಚಾರ ನಡೆದಿದೆ. ಪರಿಶಿಷ್ಟ ಜಾತಿಗೆ ಕಾಯ್ದಿರಿಸಿರುವ ನಿವೇಶನಗಳನ್ನು ಹಣ ಪಡೆದು ಪರಸ್ಥಳದ ಅನ್ಯರನ್ನು ಫಲಾನುಭವಿಗಳನ್ನಾಗಿಸಿದ್ದಾರೆ’ ಎಂದು ಆರೋಪಿಸಿದರು.

ಬಿಜೆಪಿ ಮಂಡಲ ಅಧ್ಯಕ್ಷ ಸಂತೋಷ ಪಾಟೀಲ ಡಂಬಳ ಪ್ರಾಸ್ತಾವಿಕವಾಗಿ ಮಾತನಾಡಿದರು.
ಬಿಜೆಪಿ ಪ್ರಮುಖರಾದ ಮಲ್ಲಿಕಾರ್ಜುನ ಜೋಗೂರ, ಅಶೋಕ ಅಲ್ಲಾಪೂರ, ಈರಣ್ಣ ರಾವೂರ, ರಾಜಶೇಖರ ಪೂಜಾರಿ, ಬಿಂದೂರಾಯಗೌಡ ಪಾಟೀಲ, ಬಿ.ಆರ್.ಯಂಟಮಾನ, ಪ್ರಶಾಂತ ಕದ್ದರಕಿ, ಪೀರೂ ಕೆರೂರ, ಮಹಾಂತಗೌಡ ಬಿರಾದಾರ, ಮೈಬೂಬ ಮಸಳಿ ಆಲಮೇಲ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.