ADVERTISEMENT

Yatnal vs Vijayendra | ಯತ್ನಾಳ ಕ್ಷೇತ್ರದಲ್ಲಿ ಬಿಜೆಪಿ ಶಕ್ತಿ ಪ್ರದರ್ಶನ

ಬಸವರಾಜ ಸಂಪಳ್ಳಿ
Published 17 ಏಪ್ರಿಲ್ 2025, 5:11 IST
Last Updated 17 ಏಪ್ರಿಲ್ 2025, 5:11 IST
ವಿಜಯಪುರ ನಗರದಲ್ಲಿ ಏ.17ರಂದು ನಡೆಯುವ ಬಿಜೆಪಿ ಜನಾಕ್ರೋಶ ರ‍್ಯಾಲಿ ಸಂಬಂಧ ಗಾಂಧಿಚೌಕಿಯಲ್ಲಿ ಸ್ವಾಗತ ಕೋರಿ ಅಳವಡಿಸಿರುವ ಬ್ಯಾನರ್‌
ವಿಜಯಪುರ ನಗರದಲ್ಲಿ ಏ.17ರಂದು ನಡೆಯುವ ಬಿಜೆಪಿ ಜನಾಕ್ರೋಶ ರ‍್ಯಾಲಿ ಸಂಬಂಧ ಗಾಂಧಿಚೌಕಿಯಲ್ಲಿ ಸ್ವಾಗತ ಕೋರಿ ಅಳವಡಿಸಿರುವ ಬ್ಯಾನರ್‌   

ವಿಜಯಪುರ: ಬಿಜೆಪಿ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ ಯತ್ನಾಳ ಪ್ರತಿನಿಧಿಸುತ್ತಿರುವ ವಿಜಯಪುರ ನಗರ ಕ್ಷೇತ್ರದಲ್ಲಿ ಬಿಜೆಪಿ ಜನಾಕ್ರೋಶ ಯಾತ್ರೆ ಏ.17ರಂದು ನಡೆಯುತ್ತಿರುವುದು ಕುತೂಹಲಕ್ಕೆ ಕಾರಣವಾಗಿದೆ.

ರ‍್ಯಾಲಿಯ ಯಶಸ್ವಿಗಾಗಿ ಜಿಲ್ಲೆಯ ಬಿಜೆಪಿ ಮುಖಂಡರು ಹುರುಪಿನಿಂದ ತೊಡಗಿಸಿಕೊಂಡಿದ್ದಾರೆ. ನಗರದ ಪ್ರಮುಖ ವೃತ್ತ, ಮಾರ್ಗಗಳಲ್ಲಿ ಬಿಜೆಪಿ ರಾಜ್ಯ ನಾಯಕರಿಗೆ ಸ್ವಾಗತ ಕೋರುವ ಬ್ಯಾನರ್‌, ಕಟೌಟ್‌ಗಳನ್ನು ಸ್ಥಳೀಯ ಮುಖಂಡರು ಅಳವಡಿಸಿದ್ದಾರೆ.

ಯತ್ನಾಳ ನಡೆಯಿಂದ ಬೇಸತ್ತು, ಪಕ್ಷದ ಚಟುವಟಿಕೆಗಳಿಂದ ಬಹುತೇಕ ದೂರವಾಗಿದ್ದ ಹಳೆಯ ಮುಖಂಡರು, ಕಾರ್ಯಕರ್ತರು ಯತ್ನಾಳ ಉಚ್ಚಾಟನೆ ಬಳಿಕ ಸಕ್ರಿಯವಾಗಿದ್ದಾರೆ. ‘ಇದು ಕಾಂಗ್ರೆಸ್‌ ವಿರುದ್ಧ ಜನಾಕ್ರೋಶವೋ? ಯತ್ನಾಳ ವಿರುದ್ಧ ವಿಜಯೇಂದ್ರೋತ್ಸವವೋ?’ ಎಂಬಂತೆ ಭಾಸವಾಗುತ್ತಿದೆ.

ADVERTISEMENT

ಜಿಲ್ಲೆಯ ಮೂಲೆ, ಮೂಲೆಯಿಂದ ಜನರನ್ನು ಕರೆತಂದು ಯತ್ನಾಳ ಕ್ಷೇತ್ರದಲ್ಲಿ ಶಕ್ತಿ ಪ್ರದರ್ಶನಕ್ಕೆ ಸಜ್ಜಾಗಿದ್ದಾರೆ. ವಿಜಯಪುರ ಜಿಲ್ಲಾ ಬಿಜೆಪಿಯಲ್ಲಿ ಹಿಂದೆಂದೂ ಕಾಣದ ಉತ್ಸಾಹ ಮನೆ ಮಾಡಿದೆ. 

ಈ ಕ್ಷೇತ್ರದಲ್ಲಿ ನೆಪ ಮಾತ್ರಕ್ಕೆ ರಾಜ್ಯ ಸರ್ಕಾರದ ವಿರುದ್ಧ ರ‍್ಯಾಲಿ ಇದಾದರೂ ಆಂತರ್ಯದಲ್ಲಿ ಶಾಸಕ ಯತ್ನಾಳ ವಿರುದ್ಧದ ಶಕ್ತಿ ಪ್ರದರ್ಶನವಾಗಿ ಮಾರ್ಪಟ್ಟಿದೆ. ಯತ್ನಾಳ ಇಲ್ಲವಾದರೂ ವಿಜಯಪುರ ಜಿಲ್ಲೆಯಲ್ಲಿ ಬಿಜೆಪಿಗೆ ಶಕ್ತಿ ಇದೆ ಎಂಬುದನ್ನು ರಾಜ್ಯ, ರಾಷ್ಟ್ರ ನಾಯಕರಿಗೆ ಸಾಬೀತು ಪಡಿಸಲು ಈ ರ‍್ಯಾಲಿಯನ್ನು ವೇದಿಕೆಯಾಗಿ ಬಳಸಿಕೊಳ್ಳಲು ತಯಾರಿ ನಡೆಸಿದ್ದಾರೆ.

‘ಜನಾಕ್ರೋಶ ರ‍್ಯಾಲಿಯಲ್ಲಿ ಜಿಲ್ಲೆಯ ಮೂಲೆ, ಮೂಲೆಯಿಂದ 10 ಸಾವಿರಕ್ಕೂ ಅಧಿಕ ಜನರು ಪಾಲ್ಗೊಳ್ಳಲಿದ್ದಾರೆ’ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಗುರುಲಿಂಗಪ್ಪ ಅಂಗಡಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಬಿಜೆಪಿ ರಾಜ್ಯ ಘಟಕದ ಚುಕ್ಕಾಣಿ ಹಿಡಿದಲ್ಲಿಂದ ಇದುವರೆಗೂ ವಿಜಯಪುರ ನಗರಕ್ಕೆ ಪಕ್ಷದ ಯಾವುದೇ ಸಭೆ, ಸಮಾರಂಭ, ಸಂಘಟನಾ ಕಾರ್ಯಕ್ರಮಕ್ಕೆ ಒಮ್ಮೆಯೂ ಆಗಮಿಸದ ಬಿ.ವೈ. ವಿಜಯೇಂದ್ರ ಅವರು ಇದೀಗ ಯತ್ನಾಳ ಕ್ಷೇತ್ರಕ್ಕೆ ಬರುತ್ತಿರುವುದು ಸಂಚಲನ ಮೂಡಿಸಿದೆ.

‘ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರ ನಿರಂತರ ಆರೋಪ, ಬೈಗುಳದಿಂದ ತೀವ್ರ ಮುಜುಗರ ಅನುಭವಿಸಿ, ವಿಜಯಪುರದತ್ತ ಮುಖ ಮಾಡಲು ಹಿಂದೇಟು ಹಾಕಿದ್ದ ಬಿ.ವೈ.ವಿಜಯೇಂದ್ರ ಅವರಿಗೆ ಯತ್ನಾಳ ಕ್ಷೇತ್ರದಲ್ಲೇ ಅಭೂತಪೂರ್ವ ಸ್ವಾಗತ ಕೋರಲು ಸಜ್ಜಾಗಿದ್ದೇವೆ’ ಎಂದು ಹೆಸರು ಹೇಳಲು ಬಯಸದ ಬಿಜೆಪಿ ಮುಖಂಡರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಯತ್ನಾಳ ಬಿಜೆಪಿಯಲ್ಲಿ ಇದ್ದಾಗ ಸಭೆ, ಸಮಾರಂಭಕ್ಕೆ ಬರಲು ಹಿಂದೇಟು ಹಾಕುತ್ತಿದ್ದವರು ಇದೀಗ ಬರಲು ಅಣಿಯಾಗಿದ್ದಾರೆ. ಸ್ವತಃ ಖರ್ಚು ಮಾಡಿ, ಜನರನ್ನು ಕರೆತರುತ್ತಿದ್ದಾರೆ’ ಎಂದರು.

‘ಶಾಸಕ ಬಸನಗೌಡ ಪಾಟೀಲ ಯತ್ನಾಳರು ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನು ನೋಡಲು ವಿಜಯಪುರಕ್ಕೆ ಸರ್ವ ಬಿಜೆಪಿ ನಾಯಕರಿಗೂ ಹಾರ್ದಿಕ ಸ್ವಾಗತ’ ಎಂದು ಯತ್ನಾಳ ಬೆಂಬಲಿಗ ರಾಘವ ಅಣ್ಣಿಗೇರಿ ಫೇಸ್‌ಬುಕ್‌ನಲ್ಲಿ ಬರೆದುಕೊಳ್ಳುವ ಮೂಲಕ ವ್ಯಂಗ್ಯವಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.